ಹೈನುಗಾರಿಕೆ ಉಳಿವಿಗೆ ಜಾನುವಾರು ಸಂರಕ್ಷಣೆ ಅಗತ್ಯ : ಎಚ್.ಡಿ.ತಮ್ಮಯ್ಯ

| Published : Apr 28 2025, 12:45 AM IST

ಹೈನುಗಾರಿಕೆ ಉಳಿವಿಗೆ ಜಾನುವಾರು ಸಂರಕ್ಷಣೆ ಅಗತ್ಯ : ಎಚ್.ಡಿ.ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಮಕ್ಕಳಿಗೆ ಎದೆ ಹಾಲು ಎಷ್ಟು ಮುಖ್ಯವೋ, ಹಸುವಿನ ಹಾಲೂ ಅಷ್ಟೇ ಮುಖ್ಯ, ಹಾಲು ಕೊಡುವ ಹಸು, ಜಾನುವಾರುಗಳ ಸಂರಕ್ಷಣೆ ಸಲುವಾಗಿ ಸರ್ಕಾರ ಪ್ರತಿ ವರ್ಷ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮ ನಡೆಸುತ್ತಿದ್ದು ರೈತರು ಇದರ ಸದುಪಯೋಗಪಡೆಯಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ತಾಲೂಕಿನ ಹಿರೇಗೌಜದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ 7 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಕ್ಕಳಿಗೆ ಎದೆ ಹಾಲು ಎಷ್ಟು ಮುಖ್ಯವೋ, ಹಸುವಿನ ಹಾಲೂ ಅಷ್ಟೇ ಮುಖ್ಯ, ಹಾಲು ಕೊಡುವ ಹಸು, ಜಾನುವಾರುಗಳ ಸಂರಕ್ಷಣೆ ಸಲುವಾಗಿ ಸರ್ಕಾರ ಪ್ರತಿ ವರ್ಷ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮ ನಡೆಸುತ್ತಿದ್ದು ರೈತರು ಇದರ ಸದುಪಯೋಗಪಡೆಯಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ತಾಲೂಕಿನ ಹಿರೇಗೌಜದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ 7 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸುವನ್ನು ಕಾಮಧೇನುವಿಗೆ ಹೋಲಿಸುತ್ತೇವೆ, ಪೂಜನೀಯ ಭಾವದಿಂದ ನೋಡುತ್ತೇವೆ. ಅಂತಹ ಹಸುಗಳ, ಜಾನುವಾರುಗಳ ಸಂರಕ್ಷಣೆ ಸರ್ಕಾರದ ಹೊಣೆ. ಹೀಗಾಗಿ ಪ್ರತಿ ವರ್ಷ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನ ನಡೆಸಿ ಹಾಲಿನ ಉತ್ಪನ್ನ ಹೆಚ್ಚಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.ಮನುಷ್ಯನ ರೋಗ ನಿಯಂತ್ರಣಕ್ಕೆ ಹೇಗೆ ಲಸಿಕೆಗಳಿವೆಯೋ ಅದೇ ಮಾದರಿಯಲ್ಲಿ ಜಾನುವಾರುಗಳಿಗೆ ಯಾವುದೇ ಕಾಯಿಲೆ ಬರದಂತೆ ಲಸಿಕೆ ಹಾಕುತ್ತಿದ್ದು ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಹಿಂದಿನಿಂದಲೂ ನಮ್ಮ ಹಿರಿಯರು ಹಸು ಸಾಕಾಣೆ ಮಾಡಿ ಜೀವನ ನಡೆಸಿದ್ದಾರೆ. ಇತ್ತೀಚೆಗೆ ಸರ್ಕಾರಗಳು ಉತ್ತಮ ತಳಿಯ ಹಸುಗಳನ್ನು ಪರಿಚಯಿಸಿದ್ದು ಇದರಿಂದ ಹಾಲಿನ ಪ್ರಮಾಣವೂ ಹೆಚ್ಚಾಗಿದೆ. ಹೀಗಾಗಿ ವಿದೇಶಕ್ಕೂ ಹಾಲಿನ ಉತ್ಪನ್ನಗಳು ರಫ್ತಾಗುತ್ತಿವೆ ಎಂದ ಅವರು, ಹಾಲು ವಿದೇಶಕ್ಕೆ ಹೋಗಬೇಕಾದರೆ ಹಾಲಿನ ಗುಣಮಟ್ಟ ಉತ್ತಮವಾಗಿರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಮೋಹನ್‌ಕುಮಾರ್ ಮಾತನಾಡಿ, ಕಳೆದ 12 ವರ್ಷದಿಂದ ಸತತವಾಗಿ ಕಾಲುಬಾಯಿ ಜ್ವರದ ಲಸಿಕೆ ಹಾಕಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಆ ರೋಗ ಲಕ್ಷಣ ಕಡಿಮೆಯಾಗಿದೆ. ದೇಶದ ಅಭಿವೃದ್ಧಿಗೆ ಇದು ಕೂಡ ಪೂರಕ. ಮನೆ ನಾಯಿಗಳಿದ್ದರೆ ಉಚಿತವಾಗಿ ರೇಬಿಸ್ ಚುಚ್ಚುಮದ್ದು ನೀಡುತ್ತೇವೆ. ಬೀದಿ ನಾಯಿ ಹಿಡಿದು ತಂದಲ್ಲಿ ಅವುಗಳಿಗೂ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರೇಗೌಜ ಗ್ರಾಪಂ ಅಧ್ಯಕ್ಷೆ ಮಂಜುಳ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಹೇಮಂತ್‌ಕುಮಾರ್, ಪಶು ವೈದ್ಯಾಕಾರಿ ಡಾ.ಚೈತ್ರಾ, ಡಾ. ವೀಣಾಕುಮಾರಿ ಹಾಜರಿದ್ದರು.

27 ಕೆಸಿಕೆಎಂ 2ಚಿಕ್ಕಮಗಳೂರು ತಾಲೂಕಿನ ಹಿರೇಗೌಜದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ 7 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಎಚ್‌.ಡಿ. ತಮ್ಮಯ್ಯ ಚಾಲನೆ ನೀಡಿದರು.