ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯ೪೦ ವರ್ಷಗಳಿಂದ ಗುಡಿಸಲಿನಲ್ಲಿ ವಾಸ. ಮೂಲ ಸೌಕರ್ಯಗಳಿಲ್ಲದೆ ೯ ಕುಟುಂಬಗಳು ಹೀನಾಯ ಪರಿಸ್ಥಿತಿಯಲ್ಲಿ ಬದುಕನ್ನು ನಡೆಸುತ್ತಿವೆ. ನಾಲ್ಕೈದು ಬಾರಿ ಗುಡಿಸಲಿಗೆ ಬೆಂಕಿ ಬಿದ್ದರೂ ಬದುಕುಳಿದಿರುವ ಬಡಜೀವಗಳು ಮತ್ತೆ ಅದೇ ಸ್ಥಳದಲ್ಲಿ ಗುಡಿಸಲುಗಳನ್ನು ಮರು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿವೆ. ತಾಲೂಕು ಆಡಳಿತದ ನಿರ್ಲಕ್ಷ್ಯದಿಂದಾಗಿ ಈ ಕುಟುಂಬಗಳಿಗೆ ಇದುವರೆಗೂ ಶಾಶ್ವತ ಸೂರು ದೊರಕದಿರುವುದು ದುರದೃಷ್ಟಕರ ಸಂಗತಿ.
ಈ ಚಿತ್ರಣವನ್ನು ದೂರಕ್ಕೇನು ಹೋಗಿ ನೋಡಬೇಕಿಲ್ಲ. ನಿತ್ಯ ಸಚಿವ ಕೆ.ವಿ.ಶಂಕರಗೌಡರ ತವರೂರಿನಲ್ಲೇ ಈ ನರಕಸದೃಶ ಜೀವನವನ್ನು ಕಾಣಬಹುದು. ಕೆ.ವಿ.ಶಂಕರಗೌಡರ ಸ್ಮಾರಕ ರಸ್ತೆಯಲ್ಲಿ ಸ್ವಲ್ಪದೂರ ಸಾಗಿ ಬಲಕ್ಕೆ ತಿರುಗಿ ಮುಂದೆ ಸಾಗಿದರೆ ಗುಡಿಸಲುಗಳಲ್ಲಿ ಹೀನಾಯವಾಗಿ ಬದುಕು ಸಾಗಿಸುತ್ತಿರುವವರ ದಿವ್ಯದರ್ಶನವಾಗುತ್ತದೆ.ತೆಂಗಿನ ಗರಿಗಳಿಂದ ಗುಡಿಸಲುಗಳನ್ನು ಕಟ್ಟಿಕೊಂಡು, ತಗಡು ಶೀಟುಗಳನ್ನು ಬಾಗಿಲುಗಳನ್ನಾಗಿ ಮಾಡಿಕೊಂಡು ಪುಟ್ಟ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಸ್ನಾನಗೃಹ, ಶೌಚಾಲಯ, ಕುಡಿಯುವ ನೀರು, ಬೀದಿದೀಪಗಳಿಲ್ಲದೆ ಮೂರು ದಶಕ ಕಳೆದಿದ್ದಾರೆ. ಗುಡಿಸಲುಗಳ ಎದುರುಗಡೆ ಇರುವ ಬಂಡೆಯ ಮೇಲೆ ಶೀಟುಗಳಿಂದ ಸ್ನಾನಗೃಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಗುಡಿಸಲುಗಳ ಪಕ್ಕದಲ್ಲೇ ಗಿಡ-ಗಂಟೆಗಳು ಬೆಳೆದುಕೊಂಡಿದ್ದರೆ, ಎದುರಿನಲ್ಲೇ ತಿಪ್ಪೇಗುಂಡಿಯ ರಾಶಿಬಿದ್ದಿದೆ. ವಿಷಜಂತುಗಳು ವಾಸಿಸುವ ಜಾಗದಲ್ಲಿ ಜೀವವನ್ನು ಅಂಗೈಯ್ಯಲಿಡಿದುಕೊಂಡು ನಿತ್ಯ ಮಕ್ಕಳೊಂದಿಗೆ ಬದುಕು ನಡೆಸುತ್ತಿದ್ದಾರೆ.
ಮಳೆ ಬಂತೆಂದರೆ ಇಡೀ ಮನೆಯೆಲ್ಲಾ ಶೀತಮಯವಾಗುತ್ತದೆ. ಮಲಗುವುದಕ್ಕೂ ಅಸಾಧ್ಯವಾಗುತ್ತದೆ. ಆ ಸಮಯದಲ್ಲಿ ಮಕ್ಕಳನ್ನು ಕಾಪಾಡಿಕೊಂಡು ಮನೆಯಲ್ಲಿರುವ ಆಹಾರ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ನಿವಾಸಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ಇಲ್ಲಿರುವ ೯ ಕುಟುಂಬಗಳಿಗೆ ಇದುವರೆಗೂ ಶಾಶ್ವತ ನೆಲೆಯನ್ನು ದೊರಕಿಸಿಕೊಡುವುದಕ್ಕೆ ಇದುವರೆಗೂ ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ಸಾಧ್ಯವಾಗಿಲ್ಲ.ಇಲ್ಲಿನ ಜನರು ಕಷ್ಟಪಡುತ್ತಿರುವುದನ್ನು ನೋಡಲಾಗದೆ ಗ್ರಾಮ ಪಂಚಾಯ್ತಿಯವರು ಗುಡಿಸಲುಗಳಿಗೆ ಸೋಲಾರ್ ವಿದ್ಯುತ್ ಪ್ಯಾನಲ್‌ಗಳನ್ನು ಅಳವಡಿಸಿಕೊಟ್ಟು, ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸಿಕೊಟ್ಟಿದ್ದಾರೆ. ತಾಲೂಕು ಆಡಳಿತವನ್ನು ಸಂಪರ್ಕಿಸಿ ೯ ಕುಟುಂಬಗಳಿಗೆ ಶಾಶ್ವತ ನೆಲೆ ಒದಗಿಸುವಂತೆ ಕೀಲಾರ ಗ್ರಾಪಂ ಅಧ್ಯಕ್ಷ ಕೆ.ಆರ್.ಶಿವಶಂಕರ್ ನಿರಂತರವಾಗಿ ಒತ್ತಾಯಿಸಿಕೊಂಡು ಬರುತ್ತಿದ್ದರೂ ಅಧಿಕಾರಿಗಳು ಇವರ ಮನವಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಲಾಗಿದೆ.
ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರೂ ಕೂಡ ಸ್ಥಳಕ್ಕೆ ಆಗಮಿಸಿ ೯ ಕುಟುಂಬಗಳ ಪರಿಸ್ಥಿತಿಯನ್ನು ಕಂಡು ಈ ಕುಟುಂಬಗಳಿಗೆ ಶಾಶ್ವತ ನೆಲೆ ದೊರಕಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಯಾರೂ ಆ ನಿಟ್ಟಿನಲ್ಲಿ ಪ್ರಯತ್ನವನ್ನೇ ನಡೆಸುತ್ತಿಲ್ಲ ಎಂದು ನಿವಾಸಿಗಳು ದೂರುತ್ತಿದ್ದಾರೆ.ನಮ್ಮ ಕಷ್ಟವನ್ನು ಯಾರೂ ಕೇಳುತ್ತಿಲ್ಲ. ಮಳೆ ಬಂದರೆ ಮನೆಯೊಳಗೆ ಇರಲಾಗುವುದಿಲ್ಲ. ಗಿಡ-ಗಂಟೆಗಳು ಬೆಳೆದುಕೊಂಡಿರುವುದರಿಂದ ಹಾವು-ಚೇಳುಗಳು ಮನೆಯೊಳಗೆ ನುಗ್ಗುತ್ತಿವೆ. ಶೀಟುಗಳನ್ನು ಕಟ್ಟಿ ಸ್ನಾನಗೃಹಗಳನ್ನು ನಿರ್ಮಿಸಿಕೊಂಡಿದ್ದೇವೆ. ಪುಟ್ಟ ಜಾಗದಲ್ಲಿ ಕುಟುಂಬಗಳು ನೆಲೆಸಿವೆ. ನಮ್ಮ ಕಷ್ಟವನ್ನು ಯಾರೂ ಕೇಳುತ್ತಿಲ್ಲ. ಪಂಚಾಯಿತಿಯವರು ಬೀದಿದೀಪ ಹಾಕಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ನಿವಾಸಿಗಳು ನೋವಿನಿಂದ ನುಡಿದರು.
ನಮ್ಮ ಗುಡಿಸಲುಗಳಿಗೆ ನಾಲ್ಕೈದು ಬಾರಿ ಬೆಂಕಿ ಬಿದ್ದಿದೆ. ಈ ಅನಾಹುತದಿಂದ ಸಾಕಷ್ಟು ಸಂಕಷ್ಟ-ನೋವು ಅನುಭವಿಸಿದ್ದೇವೆ. ಅಂಬೇಡ್ಕರ್ ಭವನದಲ್ಲಿ ಆಶ್ರಯ ಪಡೆದು ಮತ್ತೆ ಗುಡಿಸಲಿನಲ್ಲೇ ಜೀವನ ಕಟ್ಟಿಕೊಂಡಿದ್ದೇವೆ. ನಾವೂ ಮನುಷ್ಯರೇ. ನಮ್ಮನ್ನೂ ಮನುಷ್ಯರಂತೆ ಕಂಡು ನೆಲೆ ಕಲ್ಪಿಸಿಕೊಡುವುದಕ್ಕೆ ಈಗಲಾದರೂ ಮನಸ್ಸು ಮಾಡುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.ನಮಗೊಂದು ಶಾಶ್ವತ ನೆಲೆ ಕಲ್ಪಿಸಿಕೊಡುವಂತೆ ರಾಜಕಾರಣಿಗಳು, ಅಧಿಕಾರಿಗಳ ಬಳಿ ಸಾಕಷ್ಟು ಕೇಳಿಕೊಂಡಿದ್ದೇವೆ. ಇದುವರೆಗೆ ಯಾರೊಬ್ಬರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಗುಡಿಸಲಿನಲ್ಲೇ ಆಶ್ರಯ ಪಡೆದಿದ್ದೇವೆ. ಈಗಾಗಲೇ ನಾಲ್ಕೈದು ಬಾರಿ ಗುಡಿಸಲಿಗೆ ಬೆಂಕಿ ಬಿದ್ದಿದೆ. ಮನೆಯೊಳಗಿದ್ದ ವಸ್ತುಗಳೂ ನಾಶವಾಗಿವೆ. ಕೂಲಿ ಮಾಡಿಕೊಂಡು ಬದುಕುತ್ತಿರುವವರು ನಾವು. ನಮ್ಮ ಬಳಿ ಆಧಾರ್, ಪಡಿತರ ಚೀಟಿ ಎಲ್ಲವೂ ಇದೆ. ಈಗಲಾದರೂ ನಮಗೊಂದು ನೆಲೆ ದೊರಕಿಸಿ ಪುಣ್ಯಕಟ್ಟಿಕೊಳ್ಳಿ.- ಗಂಗ, ಸ್ಥಳೀಯ ನಿವಾಸಿಗ್ರಾಮ ಪಂಚಾಯ್ತಿಯಿಂದ ಗುಡಿಸಲು ನಿವಾಸಿಗಳಿಗೆ ಸೋಲಾರ್ ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೇವೆ. ಇಲ್ಲಿನ ನಿವಾಸಿಗಳಿಗೆ ಶಾಶ್ವತ ನೆಲೆ ದೊರಕಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದೇವೆ. ತಾಲೂಕು ಆಡಳಿತ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಈ ವಿಷಯವನ್ನು ಶಾಸಕರ ಗಮನಕ್ಕೂ ತಂದಿದ್ದೇವೆ. ಅವರೂ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ನೆಲೆ ದೊರಕಿಸುವ ನಿಟ್ಟಿನಲ್ಲಿ ಕ್ರಮವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ನಡೆ ನಿಜಕ್ಕೂ ಅಮಾನವೀಯ. ಇವರ ವರ್ತನೆ ಹೀಗೆ ಮುಂದುವರೆದರೆ ನಿವಾಸಿಗಳ ಜೊತೆಗೂಡಿ ಹೋರಾಟಕ್ಕಿಳಿಯುತ್ತೇವೆ.
- ಕೆ.ಆರ್.ಶಿವಶಂಕರ್, ಅಧ್ಯಕ್ಷರು, ಕೀಲಾರ ಗ್ರಾಪಂ