ಸಾರಾಂಶ
ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ನಡೆದ ಇರುವೈಲು ರಘುರಾಮ ಅಶ್ರಣ್ಣ ಮತ್ತು ಲೀಲಾ ಆಸ್ರಣ್ಣ ಸ್ಮಾರಕ ದತ್ತಿನಿಧಿ ಕಾರ್ಯಕ್ರಮದಲ್ಲಿ ಕೊಡಗಿನ ಸಾಮಾಜಿಕ ಆರ್ಥಿಕ ಹಾಗೂ ಸಾಂಸ್ಕೃತಿಕ ಸ್ಥಾನಮಾನಗಳ ಕುರಿತು ಕೊಡಗು ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಹಾಗು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ನಿರ್ದೇಶಕ ಶಾಫಿ ಸಅದಿ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೊಡಗಿನಲ್ಲಿ ವಿಭಿನ್ನ ಸಂಸ್ಕೃತಿ ಇದ್ದರೂ, ಸಾಮರಸ್ಯ ಬದುಕು ಇದೆ ಎಂದು ಕೊಡಗು ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಹಾಗು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ನಿರ್ದೇಶಕ ಶಾಫಿ ಸಅದಿ ಅಭಿಪ್ರಾಯಪಟ್ಟಿದ್ದಾರೆ.ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ನಡೆದ ಇರುವೈಲು ರಘುರಾಮ ಅಶ್ರಣ್ಣ ಮತ್ತು ಲೀಲಾ ಆಸ್ರಣ್ಣ ಸ್ಮಾರಕ ದತ್ತಿನಿಧಿ ಕಾರ್ಯಕ್ರಮದಲ್ಲಿ ಕೊಡಗಿನ ಸಾಮಾಜಿಕ ಆರ್ಥಿಕ ಹಾಗೂ ಸಾಂಸ್ಕೃತಿಕ ಸ್ಥಾನಮಾನಗಳ ಕುರಿತು ಅವರು ಉಪನ್ಯಾಸ ನೀಡಿದರು.
ಕೊಡಗಿನಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿರುವುದರಿಂದ, ಸಾಮರಸ್ಯ ಗಟ್ಟಿಗೊಂಡಿದೆ. ಮುಂದೆಯೂ ಸಾಮರಸ್ಯ ಕದಡಲು ನಾವು ಅವಕಾಶ ಮಾಡಿ ಕೊಡಬಾರದು ಎಂದು ಮನವಿ ಮಾಡಿದರು.ಕೊಡಗಿನ ಆರ್ಥಿಕತೆಗೆ ಕಾಫಿ, ಕಾಳುಮೆಣಸು ತನ್ನದೆ ಆದ ಕೊಡುಗೆ ನೀಡಿವೆ. ಈಗ ಕೊಡಗಿನ ಕಿತ್ತಳೆ ಅವಸಾನದ ಅಂಚಿನಲ್ಲಿದೆ. ಕಿತ್ತಳೆ ಪುನಶ್ಚೇತನಕ್ಕೆ ಸರ್ಕಾರ ಯೋಜನೆ ರೂಪಿಸಬೇಕು. ಕೊಡಗಿನಲ್ಲಿ ಗುಣಮಟ್ಟದ ಕಾಫಿ ಉತ್ಪಾದನೆಯಾಗುತ್ತಿದೆ. ಅಕಾಲಿಕ ಮಳೆಯಿಂದ ಕಾಫಿ ಫಸಲು ಹಾನಿಯಾಗುತ್ತಿದೆ. ಕಿತ್ತಳೆಯ ಪರಿಸ್ಥಿತಿ ಕಾಫಿಗೆ ಬರಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಾರರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಮಾತೃಭಾಷೆ ಕನ್ನಡವನ್ನು ಪರಭಾಷಿಕರಿಗೆ ಕಲಿಸುವ ಪ್ರಯತ್ನ ಮುಂದುವರಿಸಬೇಕು. ಮನೆಯಲ್ಲಿ ಮಕ್ಕಳಿಗೆ ಶ್ರೀಮಂತ ಭಾಷೆ ಕನ್ನಡ ಎಂಬುದನ್ನು ಮನವರಿಕೆ ಮಾಡಿಕೊಡಬೇಕೆಂದು ಹಿರಿಯ ವಕೀಲ ಬಿ.ಈ. ಜಯೇಂದ್ರ ಹೇಳಿದರು.ಕ.ಸಾ.ಪ.ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಜಿಲ್ಲಾ ಸಹ ಕಾರ್ಯದರ್ಶಿ ಜಲಜಾ ಶೇಖರ್, ಜ್ಯೋತಿ, ಎಚ್.ಜೆ. ಜವರ, ತಿಮ್ಮಶೆಟ್ಟಿ ಇದ್ದರು.