ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಭಿನ್ನಾಭಿಪ್ರಾಯದ ನಡುವೆ ಬದುಕುವುದೇ ನಿಜವಾದ ಪ್ರಜಾಪ್ರಭುತ್ವ.ಇಂದಿನ ಕಾರ್ಯಕ್ರಮ ನನಗೆ ಮತ್ತಷ್ಟು ವರ್ಷ ಬದುಕುವಂತಹ ಶಕ್ತಿಯನ್ನು ನೀಡಿದೆ. ನನ್ನನ್ನು ನಾನು ತಿರುಗಿ ನೋಡಿಕೊಳ್ಳುವಂತೆ ಮಾಡಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.ನಗರದ ಗ್ರಂಥಾಲಯ ಸಭಾಂಗಣದಲ್ಲಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಬರಗೂರು ಮೀಮಾಂಸೆ ಮತ್ತು ಬರಗೂರರಿಗೆ ತವರು ಜಿಲ್ಲೆಯ ಗೌರವ ಕಾರ್ಯಕ್ರಮದಲ್ಲಿ ತುಮಕೂರು ನಾಗರಿಕರ ಗೌರವ ಸ್ವೀಕರಿಸಿ ಮಾತನಾಡಿದರು.ನನ್ನ ಇಂದಿನ ಎಲ್ಲಾ ಗೌರವಕ್ಕೆ ಕಾರಣರು ನನ್ನಗೆ ಚಿಕ್ಕಂದಿನಲ್ಲಿ ಪಾಠ ಹೇಳಿಕೊಟ್ಟ ಟಿ.ವೈ.ನಾಗಭೂಷಣರಾವ್, ಎಂ.ಎಸ್.ರಾಮಲಿಂಗಪ್ಪ,ನನ್ನ ಸಾಹಿತ್ಯವನ್ನು ತಿದ್ದಿ ತೀಡಿ ಬರೆಯಲು ಪ್ರೇರೆಪಿಸಿದ ಸೀತಾರಾಮ್ ಅವರುಗಳು. ನಾನು ಜಾತ್ಯಾತೀತ ವ್ಯಕ್ತಿಯಾಗಿ ರೂಪುಗೊಳ್ಳಲು ಕಾರಣರು ಎಂದರು.ನಾನು ಮಹಾತ್ಮಗಾಂಧಿಯ ಸಹಿಷ್ಣತೆ, ಅಂಬೇಡ್ಕರ್ ಸಾಮಾಜಿಕ ಸಮಾನತೆ ಮತ್ತು ಕಾರ್ಲ್ ಮಾರ್ಕ್ಸ್ ಅವರ ಆರ್ಥಿಕ ಸಮಾನತೆಯಿಂದ ಸ್ಪೂರ್ತಿ ಪಡೆದವನು. ನೀಲಿ, ಹಸಿರು, ಕೆಂಪು ಒಂದಾದರೆ ಹೆಚ್ಚಿನ ಅನುಕೂಲ ಜನರಿಗೆ ಸಿಗಲಿದೆ ಎಂಬ ನಂಬಿಕೆ ನನ್ನದು. ಜನರ ಪ್ರೀತಿಗೆ ಗೌರವ ಕೊಡಬೇಕು ಎಂಬ ಕಾರಣಕ್ಕೆ ನಿಮ್ಮೆಲ್ಲಾ ಗೌರವಗಳನ್ನು ಸ್ವೀಕರಿಸಿದ್ದೇನೆ. ಭಾವುಕತೆ ಮತ್ತು ಬೌದ್ಧಿಕತೆ ಎರಡರ ನಡುವೆ ಸಮತೋಲನ ಕಂಡುಕೊಂಡವ. ಇಂದಿನ ಕಾರ್ಯಕ್ರಮ ಒಂದೆಡೆ ಸಂಭ್ರಮ ನೀಡಿದರೆ, ಎಚ್ಚರಿಕೆಯನ್ನು ನೀಡಿದೆ ಎಂದು ಡಾ.ಬರಗೂರು ರಾಮಚಂದ್ರಪ್ಪ ನುಡಿದರು.ಬರಗೂರು ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಸುಂದರಾಜ್ ಅರಸ್ ಮಾತನಾಡಿ, ಬರಗೂರು ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡಿದವರು. ಕಳೆದ 38 ವರ್ಷಗಳಿಂದ ಅವರ ಹೆಜ್ಜೆಗಳನ್ನು ಅನುಸರಿಸುತ್ತಾ ಬಂದಿದ್ದೇನೆ. ಎಲ್ಲರ ನೋವಿಗೆ ಬೆಲೆಯಿದೆ ಎಂದು ತಿಳಿದವರು ಬರಗೂರು ರಾಮಚಂದ್ರಪ್ಪ, ಕೈ, ಬಾಯಿ, ಮನಸ್ಸು ಎಲ್ಲವನ್ನು ಶುದ್ಧವಾಗಿಟ್ಟುಕೊಂಡ ಸಂಸ್ಕಾರವಂತರು ಎಂದರು.ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರು ಮೇಷ್ಟ್ರು ಎಂಬ ಪದಕ್ಕೆ ಹೆಚ್ಚು ಗೌರವ ತಂದುಕೊಟ್ಟವರು. ಅವರ ಎಲ್ಲ ಬರಹಗಳ ಸತ್ವಪೂರ್ಣವಾಗಿವೆ.ಅವರಿಂದ ಇಡೀ ಊರಿಗೆ ಕೀರ್ತಿ ಬಂದಿದೆ ಎಂದರು.ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ನನ್ನ ಗುರುಗಳಾಗಿ ನನ್ನನ್ನು ಸಾಕಷ್ಟು ತಿದ್ದಿ ತೀಡಿದವರು ರಾಮಚಂದ್ರಪ್ಪ ಅವರು, ವ್ಯವಸ್ಥೆ ಒಳಗೆ ಇರಲಿ,ಹೊರಗೆ ಇರಲಿ ತಾವು ನಂಬಿದ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡವರಲ್ಲ. ಅವರ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ನೀತಿ ಜಾರಿಗೆ ಬರಬೇಕು. ಹಾಗೆಯೇ ಶಾಸ್ತ್ರೀಯ ಸ್ಥಾನಮಾನದ ಅನುದಾನ ಬಳಕೆಗೆ ಸಂಬಂಧಿಸಿದಂತೆ ಸಮಿತಿ ರಚಿಸಿ, ಕೇಂದ್ರಕ್ಕೆ ಕಳುಹಿಸುವಂತೆ ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಬರಗೂರರ ಅಜ್ಞಾತ ಅಭಿಮಾನಿಗಳಲ್ಲಿ ನಾನು ಒಬ್ಬ. ಇಡೀ ರಾಜ್ಯದ ಶಿಕ್ಷಕ ಸಮೂಹಕ್ಕೆ ಮಾದರಿ. ಕೇವಲ ಕ್ಲಾಸ್ ರೂಂಗೆ ಸೀಮಿತವಾಗದೆ, ವೇತನಕ್ಕೆ ಲೆಕ್ಕ ಇಡದೆ, ಶಿಷ್ಯ ಬಳಗವನ್ನು ಹುಟ್ಟು ಹಾಕಿದವರು. ನಾವು ಕೂಡ ಅವರಂತೆ ಬದುಕುವುದೇ ಅವರಿಗೆ ನೀಡುವ ನಿಜವಾದ ಗೌರವ ಎಂದರು.ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮಿರಂಗಯ್ಯ, ಪ್ರೊ.ತಿಪ್ಪೇಸ್ವಾಮಿ, ಡಾ.ಪವನ ಗಂಗಾಧರ್, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಸ್ನೇಹ ಬಳಗದ ಎ.ರಾಮಚಂದ್ರಪ್ಪ, ಎಚ್.ಗೋವಿಂದಯ್ಯ, ಅಶ್ವಥನಾರಾಯಣಗುಟ್ಟೆ, ಡಾ.ಶ್ರೀನಿವಾಸಪ್ಪ, ಡಾ.ಓ.ನಾಗರಾಜು, ಡಾ.ನಾಗಭೂಷಣ್ ಬಗ್ಗನಡು, ಡಾ.ಶಿವಣ್ಣ ತಿಮ್ಮಲಾಪುರ, ನಾಗೇಂದ್ರಪ್ಪ, ಅನಂತಮೂರ್ತಿ, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.