ಮಂಡ್ಯ ನಗರಸಭೆ ಪ್ರಾಂಗಣದಲ್ಲಿ ವಯೋನಿವೃತ್ತಿ ಹೊಂದಿದ ಪೌರಕಾರ್ಮಿಕ ಮಹದೇವರವರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ೩೫ ವರ್ಷಗಳ ಕಾಲ ಈ ನಗರವನ್ನು ಸ್ವಚ್ಛವಾಗಿಡುವಲ್ಲಿ ತಮ್ಮ ಬೆವರು ಸುರಿಸಿದ ಈ ಕಾರ್ಮಿಕರಿಗೆ ಈಗ ಬರಿಗೈ ವಿದಾಯ ಹೇಳಲಾಗುತ್ತಿದೆ.

ಮಂಡ್ಯ: ರಾಜ್ಯದ ನಗರ- ಪಟ್ಟಣಗಳ ಸ್ವಚ್ಛತೆ ಹಾಗೂ ಕುಡಿಯುವ ನೀರು ಸರಬರಾಜಿನಲ್ಲಿ ತೊಡಗಿಕೊಂಡಿರುವ ಶ್ರಮಜೀವಿಗಳೇ ನಗರಗಳ ಜೀವಾಳವಾಗಿದ್ದಾರೆ. ಆದರೆ ಈ ಶ್ರಮಜೀವಿಗಳ ಪರವಾಗಿ ನೀತಿ ರೂಪಿಸುವಲ್ಲಿ ವ್ಯವಸ್ಥೆ ಸೋತಿದೆಯೆಂದು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ವಿಷಾದಿಸಿದರು.

ಮಂಡ್ಯ ನಗರಸಭೆ ಪ್ರಾಂಗಣದಲ್ಲಿ ವಯೋನಿವೃತ್ತಿ ಹೊಂದಿದ ಪೌರಕಾರ್ಮಿಕ ಮಹದೇವರವರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ೩೫ ವರ್ಷಗಳ ಕಾಲ ಈ ನಗರವನ್ನು ಸ್ವಚ್ಛವಾಗಿಡುವಲ್ಲಿ ತಮ್ಮ ಬೆವರು ಸುರಿಸಿದ ಈ ಕಾರ್ಮಿಕರಿಗೆ ಈಗ ಬರಿಗೈ ವಿದಾಯ ಹೇಳಲಾಗುತ್ತಿದೆ. ನಗರಗಳಿಗೆ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಪೂರೈಕೆ ಹೆಸರಲ್ಲಿ ಸಾವಿರಾರು ಕೋಟಿ ರುಪಾಯಿಗಳ ಯೋಜನೆ ರೂಪಿಸುವ ಸರ್ಕಾರ ಸ್ವಚ್ಛತೆಗೆ ಕಾರಣರಾದ ಕಾರ್ಮಿಕರ ಬಗ್ಗೆ ಯಾವುದೇ ಅನುಕೂಲ ಮಾಡಿಕೊಡುವ ನೀತಿ ರೂಪಿಸಿಲ್ಲ. ಇದರ ಪರಿಣಾಮ ಹತ್ತಾರು ವರ್ಷ ದುಡಿದ ಪೌರಕಾರ್ಮಿಕರು ಹೊರಗುತ್ತಿಗೆ ನೌಕರರು ತಮ್ಮ ನಿವೃತ್ತಿಯ ಬದುಕಿನ ಕುರಿತು ಅತಂತ್ರರಾಗಿದ್ದಾರೆ. ನಿವೃತ್ತಿಯ ನಂತರ ಯಾವುದೇ ಆದಾಯವಿಲ್ಲದೆ, ಸರ್ಕಾರದಿಂದ ಆರ್ಥಿಕ ಸೌಲಭ್ಯವೂ ಇಲ್ಲದೆ, ದೈನಂದಿನ ಬದುಕು ನರಕಸದೃಶ್ಯವಾಗಲಿದೆ. ಇಡೀ ಜೀವಮಾನ ನಗರದ ಸ್ವಚ್ಛತೆಗಾಗಿ ದುಡಿದವರನ್ನು ಬರಿಗೈಲಿ ಕಳುಹಿಸುವ ಈ ವ್ಯವಸ್ಥೆ ನಿಜಕ್ಕೂ ಅಮಾನವೀಯ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ವ್ಯಾಖ್ಯಾನಿಸಿದರು.

ಸರ್ಕಾರ ಕೂಡಲೇ ೬೦ ವರ್ಷ ತುಂಬಿದ ಎಲ್ಲ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ೧೦ ಲಕ್ಷ ರು. ಇಡಿಗಂಟು ನೀಡಿ ನಿವೃತ್ತಿಯ ಬದುಕನ್ನು ಸಹನೀಯಗೊಳಿಸಬೇಕು. ಹೊರಗುತ್ತಿಗೆ ನೌಕರರು ಘನತೆಯಿಂದ ಬದುಕುವ ವಾತಾವರಣ ಸೃಷ್ಟಿಸಬೇಕು ಎಂದರು.

ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ಸರ್ಕಾರದಿಂದ ನಿವೃತ್ತ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಪರಿಸರ ಅಭಿಯಂತರ ರುದ್ರೇಗೌಡ, ಕಚೇರಿ ವ್ಯವಸ್ಥಾಪಕಿ ಕಲ್ಪಾ, ಲೆಕ್ಕಾಧಿಕಾರಿ ಮಂಜುನಾಥ್, ರಾಜಸ್ವ ನಿರೀಕ್ಷಕ ರಾಜಶೇಖರ, ಆರೋಗ್ಯ ನಿರೀಕ್ಷಕ ಚಲುವರಾಜು, ಅಶ್ವಥ್, ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ನಾಗರಾಜು, ಪ್ರಕಾಶ್, ಮಂಜುನಾಥ್, ರಾಜು ರಾಜೇಶ್, ಶಿವಕುಮಾರ್. ನೀರು ಸರಬರಾಜು ಸಹಾಯಕರ ಸಂಘದ ಎಸ್.ಕೆ. ರಾಜೂಗೌಡ ಇತರರಿದ್ದರು.