ಲಿಜ್ಜತ್ ಪಾಪಡ್ ಸಂಸ್ಥೆ ಮಹಿಳೆಯರ ಸಬಲೀಕರಣದಲ್ಲಿ ಮುಂದೆ: ಎಚ್.ಕೆ. ಪಾಟೀಲ್

| Published : Mar 13 2025, 12:48 AM IST

ಲಿಜ್ಜತ್ ಪಾಪಡ್ ಸಂಸ್ಥೆ ಮಹಿಳೆಯರ ಸಬಲೀಕರಣದಲ್ಲಿ ಮುಂದೆ: ಎಚ್.ಕೆ. ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದ ಕೆಡಿಒ ಜೈನ್ ಹಾಲ್‌ನಲ್ಲಿ ಖಾದಿ ಮತ್ತು ಗ್ರಾಮ ಕೈಗಾರಿಕಾ ಆಯೋಗದಿಂದ ಗುರುತಿಸಲ್ಪಟ್ಟಿರುವ ಮಹಿಳಾ ಗೃಹ ಉದ್ಯೋಗ ಲಿಜ್ಜತ್ ಪಾಪಡ್‌ನ 84ನೇ ಶಾಖೆಯನ್ನು ಸಚಿವ ಎಚ್.ಕೆ. ಪಾಟೀಲ್ ಉದ್ಘಾಟಿಸಿದರು.

ಗದಗ: ಮಹಿಳೆಯರೇ ಸ್ಥಾಪಿಸಿದ ಗೃಹೋದ್ಯಮ ಲಿಜ್ಜತ್ ಪಾಪಡ್‌ನಿಂದ ಮಹಿಳೆಯರ ಸಬಲೀಕರಣದಲ್ಲಿ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಬುಧವಾರ ಗದಗ ನಗರದ ಕೆಡಿಒ ಜೈನ್ ಹಾಲ್‌ನಲ್ಲಿ ಖಾದಿ ಮತ್ತು ಗ್ರಾಮ ಕೈಗಾರಿಕಾ ಆಯೋಗದಿಂದ ಗುರುತಿಸಲ್ಪಟ್ಟಿರುವ ಮಹಿಳಾ ಗೃಹ ಉದ್ಯೋಗ ಲಿಜ್ಜತ್ ಪಾಪಡ್‌ನ 84ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಲಿಜ್ಜತ್ ಅನ್ನು ಶುರು ಮಾಡಿದ್ದು ಮುಂಬೈನ ಏಳು ಗುಜರಾತಿ ಮಹಿಳೆಯರು. ಅಡುಗೆ ಬಗ್ಗೆ ಆಸಕ್ತಿ ಹೊಂದಿದ್ದ ಒಂದಿಷ್ಟು ಗೃಹಿಣಿಯರ ಸ್ವಾವಲಂಬಿ ಜೀವನ ನಡೆಸುವ ಹಂಬಲದ ಪರಿಣಾಮವಾಗಿ ರೂಪುಗೊಂಡಿದ್ದು ಈ ಲಿಜ್ಜತ್ ಪಾಪಡ್. ಕೇವಲ ₹80ನಿಂದ ಪ್ರಾರಂಭವಾದ ಈ ಹಪ್ಪಳದ ಉದ್ಯಮ ಇಂದು ಸಾವಿರ ಕೋಟಿ ಅಧಿಕ ವ್ಯಾಪಾರ ವಹಿವಾಟು ನಡೆಸುತ್ತಿದೆ. 45 ಸಾವಿರಕ್ಕೂ ಹೆಚ್ಚು ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಇದೊಂದು ಮಹಿಳಾ ಸ್ವ-ಉದ್ಯೋಗ ಸಂಸ್ಥೆಯಾಗಿದ್ದು, ಇಲ್ಲಿ ಹೆಚ್ಚಾಗಿ ಮಹಿಳೆಯರು ಕಾರ್ಯನಿರ್ವಹಿಸುತ್ತಾರೆ. ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವುದು ಮತ್ತು ಮಹಿಳೆಯರನ್ನು ಸಬಲೀಕರಣ ಮಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.

ನಮ್ಮ ಜಿಲ್ಲೆಯ ಮಹಿಳೆಯರು ಸ್ವ-ಉದ್ಯೋಗ ಮಾಡಿದರೆ ಕುಟುಂಬದ ಆರ್ಥಿಕ ನಿರ್ವಹಣೆಗೆ ಅನೂಕೂಲವಾಗಲಿದೆ. ಹಾಗೆಯೇ ಮಹಿಳೆಯರಿಗೆ ಆರ್ಥಿಕ ಸ್ಥಿತಿಗತಿ ಅರ್ಥವಾಗುತ್ತದೆ. ಮಹಿಳೆಯರು ಗೌರವ ಕಾಪಾಡಬೇಕು, ಸ್ವಾವಲಂಬಿಯಾಗಲು ಇದೊಂದು ದೊಡ್ಡ ಅಸ್ತ್ರವಾಗಿದೆ ಎಂದು ಸಲಹೆ ನೀಡಿದರು.

ಗದುಗಿನಲ್ಲಿ ಈಗಾಗಲೇ 382 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, 172 ಮಹಿಳೆಯರು ಕೆಲಸ ಆರಂಭಿಸಿದ್ದಾರೆ. 150ಕ್ಕೂ ಹೆಚ್ಚು ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ. ಈಗಾಗಲೇ ಗದುಗಿನ ಮಹಿಳೆಯರು ಈಗಾಗಲೇ 220, 170, 150 ಕೆಜಿ ಪಾಪಡ್ ತಯಾರಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಮಹಿಳೆಯರು ರಾಜ್ಯದಲ್ಲಿ ನಂ.1 ಸ್ಥಾನದಲ್ಲಿ ಪಾಪಡ್ ತಯಾರಿಸಬೇಕು. ಹಾಗೆಯೇ ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡುವ ಕೆಲಸ ಮಾಡಬೇಕು ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿದರು. ಉಪಾಧ್ಯಕ್ಷೆ ಪ್ರತಿಭಾ ಸಾವಂತ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಅಶೋಕ ಮಂದಾಲಿ, ಬಿ.ಬಿ. ಅಸೂಟಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಬೋಳನವರ, ಗುರಣ್ಣ ಬಳಗಾನೂರ ಇದ್ದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ ಪ್ರಾಸ್ತಾವಿಕವಾಗಿ ಮಾತನಾಡಿದರು.