200 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ,ಯುಕೆಜಿ ಆರಂಭ

| Published : Jul 04 2025, 11:47 PM IST

ಸಾರಾಂಶ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ನಡೆಸುತ್ತಿರುವ ಎಲ್ಲ ಅಂಗನವಾಡಿ ಕೇಂದ್ರಗಳ ಪೈಕಿ ಸದ್ಯಕ್ಕೆ ಆಯ್ದ ಕೇಂದ್ರಗಳಲ್ಲಿ ಎಲ್ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಿ ಸ್ಮಾರ್ಟ್‌ ಕ್ಲಾಸ್‌ಗಳ ಮುಖಾಂತರ ಮಕ್ಕಳಿಗೆ ಇಂಗ್ಲೀಷ್‌ ಕಲಿಕೆಗೆ ಕ್ರಮ ವಹಿಸಲಾಗಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಖಾಸಗಿ ಶಾಲೆಗಳ ಶುಲ್ಕ ಭಾರದ ಹೊಡೆತಕ್ಕೆ ನಲುಗುತ್ತಿರುವ ಬಡವರಿಗೆ ನೆರವಾಗಲು ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಂತೆ ರಾಯಚೂರು ಜಿಲ್ಲೆಯ 200 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಲಾಗುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ನಡೆಸುತ್ತಿರುವ ಎಲ್ಲ ಅಂಗನವಾಡಿ ಕೇಂದ್ರಗಳ ಪೈಕಿ ಸದ್ಯಕ್ಕೆ ಆಯ್ದ ಕೇಂದ್ರಗಳಲ್ಲಿ ಎಲ್ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಿ ಸ್ಮಾರ್ಟ್‌ ಕ್ಲಾಸ್‌ಗಳ ಮುಖಾಂತರ ಮಕ್ಕಳಿಗೆ ಇಂಗ್ಲೀಷ್‌ ಕಲಿಕೆಗೆ ಕ್ರಮ ವಹಿಸಲಾಗಿದೆ.

ಯಾವ ತಾಲೂಕಿನಲ್ಲಿ ಎಷ್ಟು?: ಆರಂಭದಲ್ಲಿ ಜಿಲ್ಲೆಯ ಒಟ್ಟು 200 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುತ್ತಿದ್ದು ಇದರಲ್ಲಿ ಜಿಲ್ಲಾ ಕೇಂದ್ರವಾದ ರಾಯಚೂರು ನಗರದಲ್ಲಿ 32, ಗ್ರಾಮೀಣ ವ್ಯಾಪ್ತಿಯ ಗಿಲ್ಲೆಸುಗೂರಿನಲ್ಲಿ 8, ಮಾನ್ವಿ ಮತ್ತು ಸಿರವಾರದಲ್ಲಿ ತಲಾ 20, ಸಿಂಧನೂರಿನಲ್ಲಿ 15, ತುರ್ವಿಹಾಳ (ಸಿಂಧನೂರು ಗ್ರಾಮೀಣ)ದಲ್ಲಿ 25, ಲಿಂಗಸುಗೂರು ಮತ್ತು ದೇವದುರ್ಗ ತಾಲೂಕುಗಳಲ್ಲಿ ತಲಾ 40 ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಎಲ್‌ಕೆಜಿ ಬೋಧಿಸಲು ಎಲ್ಲ ರೀತಿಯ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ.

ಹಲವು ಮಾನದಂಡಗಳು: ಜಿಲ್ಲೆಯಲ್ಲಿ ಒಟ್ಟಾರೆ 2,856 ಅಂಗನವಾಡಿ ಕೇಂದ್ರಗಳಿವೆ ಅದರಲ್ಲಿ ಕೇವಲ 200 ರನ್ನು ಮಾತ್ರ ಮೊದಲ ಹಂತವಾಗಿ ಆಯ್ಕೆ ಮಾಡಲಾಗಿದೆ. ಕೇಂದ್ರಗಳ ಆಯ್ಕೆಗಾಗಿ ಹಲವಾರು ಮಾನದಂಡಗಳನ್ನು ಇಲಾಖೆ ವಿಧಿಸಿದೆ. ಸ್ವಂತ ಕಟ್ಟಡ ಹೊಂದಿರಬೇಕು, ರಸ್ತೆ ಪಕ್ಕ, ಕುಡಿಯುವ ನೀರು, ವಿದ್ಯುತ್, ಫ್ಯಾನ್, ಲೈಟ್‌, ಶೌಚಾಲಯ ಸೇರಿದಂತೆ ಅಗತ್ಯ ಸವಲತ್ತುಗಳಿರಬೇಕು, ಪದವಿ ಪಡೆದ ಶಿಕ್ಷಕರಿಂದ ಬೋಧಕ, ಒಂದೇ ಪ್ರದೇಶದಲ್ಲಿ ಎರಡ್ಮೂರು ಕೇಂದ್ರಗಳಿದ್ದರೆ ಬೆಳಗ್ಗೆ-ಮಧ್ಯಾಹ್ನ ಸಮಯ ನಿಗದಿ ಪಡಿಸಿಕೊಂಡು ತರಗತಿಗಳನ್ನು ನಡೆಸುವುದು ಸೇರಿದಂತೆ ಹತ್ತು ಹಲವು ನಿಯಮಗಳನ್ನು ಹಾಕಿಕೊಂಡು ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಪ್ರಸಕ್ತ ಸಾಲಿನಿಂದಲೆಯೇ ತರಗತಿಗಳನ್ನು ಆರಂಭಿಸುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಕೇಂದ್ರಗಳಲ್ಲಿ ಕ್ಲಾಸ್‌ಗಳನ್ನು ಆರಂಭಿಸಲಾಗುತ್ತಿದೆ.

ಶಾಲಾ ಪೂರ್ವದ ಶಿಕ್ಷಣವಾಗಿರುವುದರಿಂದ ಮಕ್ಕಳಿಗೆ ಮನಮುಟ್ಟುವಂತೆ ಕಲಿಸುವುದಕ್ಕಾಗಿ ಸ್ಮಾರ್ಟ್‌ ಶಿಕ್ಷಣದ ಮುಖಾಂತರ ಎಲ್‌ಕೆಜಿ-ಯುಕೆಜಿನ್ನು ಆರಂಭಿಸಲಾಗುತ್ತಿದ್ದು ಅದಕ್ಕಾಗಿ ಪ್ರತಿ ಕೇಂದ್ರಕ್ಕೂ ಟಿವಿಗಳ ವ್ಯವಸ್ಥೆ, ಮುದ್ರಿತ ಪಠ್ಯಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಈಗಾಗಲೇ ಎಲ್ಲ ಟಿವಿಗಳು ಬಂದಿದ್ದು, ಆಯಾ ಕೇಂದ್ರಗಳಲ್ಲಿ ತಲುಪಿಸುವ ಕಾರ್ಯವು ಸಾಗುತ್ತಿದೆ.

---

ಕೋಟ್ಸ್:

ರಾಯಚೂರು ಜಿಲ್ಲೆಯಾದ್ಯಂತ 200 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ, ಕಲಿಕೆಗೆ ಅಗತ್ಯವಾದ ಉಪಕರಣಗಳನ್ನು ಕೇಂದ್ರಗಳಿಗೆ ವಿತರಿಸಿದ್ದು, ಶಿಕ್ಷಕರನ್ನು ಸಹ ನಿಯೋಜಿಸಲಾಗಿದೆ.

- ಯು.ನವೀನ್ ಕುಮಾರ್, ಉಪನಿರ್ದೇಶಕರು, ಮಹಿಳಾ- ಮಕ್ಕಳ ಅಭಿವೃದ್ಧಿ ಇಲಾಖೆ, ರಾಯಚೂರು

--

ಎರಡು ಸಾವಿರಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿರುವ ಜಿಲ್ಲೆಯಲ್ಲಿ ಕೇವಲ 200ರಲ್ಲಿ ಮಾತ್ರ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸುತ್ತಿದ್ದ, ಎಲ್ ಕೇಂದ್ರಗಳಲ್ಲಿಯೂ ಶಿಕ್ಷಣ ನೀಡಬೇಕು ಎನ್ನುವ ಬೇಡಿಕೆ ಯನ್ನು ಇಲಾಖೆಯ ಮುಂದಿಟ್ಟಿದ್ದೇವೆ. ಕೇವಲ ಪದವಿ ಪಡೆದವರಿಂದಷ್ಟೇ ಅಲ್ಲದೇ ಈಗಾಗಲೇ ಹಲವು ದಶಕಗಳಿಂದ ಕೆಲಸ ಮಾಡುತ್ತಿರುವವರಿಗೆ ಅಗತ್ಯ ತರಬೇತಿ ನೀಡಿ ಅವರಿಂದ ಮಕ್ಕಳಿಗೆ ಪಾಠ ಕಲಿಸಬೇಕು ಎನ್ನುವ ಒತ್ತಾಯ ನಮ್ಮದಾಗಿದೆ.

- ಎಚ್‌.ಪದ್ಮಾ, ಜಿಲ್ಲಾಧ್ಯಕ್ಷೆ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ರಾಯಚೂರು

--04ಕೆಪಿಆರ್‌ಸಿಆರ್‌ 01: ಎಐ ಚಿತ್ರವೆಂದು ನಮೂದಿಸಿ