ಅಂಗನವಾಡಿಯಲ್ಲೇ ಎಲ್‌ಕೆಜಿ, ಯುಕೆಜಿ ಆರಂಭ

| Published : Jun 29 2024, 12:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ ಗವರ್ನಮೆಂಟ್‌ ಮಾಂಟೆಸ್ಸರಿ ಮಾಡಲು ನಿರ್ಧರಿಸಲಾಗಿದ್ದು, ಅಂಗನವಾಡಿಗಳ ಪುನಶ್ಚೇತನಕ್ಕೆ ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ ಅಂಗನವಾಡಿ ಶಿಕ್ಷಕರಿಗೆ ಮೊಬೈಲ್, ಸೀರೆ, ಮೆಡಿಸಿನ್ ಕಿಟ್, ವೇಯಿಂಗ್ ಮಷಿನ್‌ಗಳನ್ನು ವಿತರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ ಗವರ್ನಮೆಂಟ್‌ ಮಾಂಟೆಸ್ಸರಿ ಮಾಡಲು ನಿರ್ಧರಿಸಲಾಗಿದ್ದು, ಅಂಗನವಾಡಿಗಳ ಪುನಶ್ಚೇತನಕ್ಕೆ ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ ಅಂಗನವಾಡಿ ಶಿಕ್ಷಕರಿಗೆ ಮೊಬೈಲ್, ಸೀರೆ, ಮೆಡಿಸಿನ್ ಕಿಟ್, ವೇಯಿಂಗ್ ಮಷಿನ್‌ಗಳನ್ನು ವಿತರಿಸಿ ಮಾತನಾಡಿದರು. ಮೊದಲ ಹಂತದಲ್ಲಿ 10 ಸಾವಿರ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರದಿಂದ 20 ಸಾವಿರ ಸ್ಮಾರ್ಟ್‌ಕ್ಲಾಸ್‌ಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾಗಿ ವಿವರಿಸಿದರು.15 ಸಾವಿರಕ್ಕೂ ಹೆಚ್ಚು ಪದವೀಧರ ಶಿಕ್ಷಕರು ಕೆಲಸ ಮಾಡುತ್ತಿದ್ದು, ಎಲ್ಲರಿಗೂ ತರಬೇತಿ ನೀಡಲು ನಿರ್ಧರಿಸಲಾಗಿದೆ. ನಿಮ್ಮ ಕೌಶಲ್ಯವನ್ನು ಹೆಚ್ಚಿಸಲು ತರಬೇತಿ ನೀಡಲಾಗುವುದು. ಇದಕ್ಕಾಗಿ ₹10 ಕೋಟಿ ತೆಗೆದಿರಿಸಲಾಗಿದೆ. ರಾಜ್ಯದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಕೆಲವು ಮಹತ್ವದ ತೀರ್ಮಾನ ಕೈಗೊಂಡಿದೆ. ಅಂಗನವಾಡಿ ಶಿಕ್ಷಕರು ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸೂಚಿಸಿದರು.

ದೇಶವೇ ತಿರುಗಿ ನೋಡುವಂತೆ ಅಂಗನವಾಡಿಗಳ ಕೆಲಸ ನಡೆಯುತ್ತಿದೆ. ನೀವೆಲ್ಲ ಯಶೋಧೆಯರಿದ್ದಂತೆ. ದೇವಕಿ ಶ್ರೀಕೃಷ್ಣನನ್ನು ಹೆತ್ತರೂ ಯಶೋಧೆ ಅತ್ಯಂತ ಮುತುವರ್ಜಿಯಿಂದ ಸಲುಹಿದಂತೆ ನೀವು ಮಕ್ಕಳನ್ನು ಬೆಳೆಸುತ್ತೀರಿ. ನಿಮ್ಮಲ್ಲಿ ಉತ್ಸಾಹ, ಶಕ್ತಿ ತುಂಬಲು ತಲಾ ₹13 ಸಾವಿರ ಮೌಲ್ಯದ ಆಧುನಿಕ ಮೊಬೈಲ್ ಫೋನ್ ನೀಡಲಾಗುತ್ತಿದೆ. ರಾಜ್ಯಾದ್ಯಂತ ಏಕರೂಪದ ಯುನಿಫಾರ್ಮ್ ವಿತರಿಸಲಾಗುತ್ತಿದೆ. ಮೆಡಿಸಿನ್ ಕಿಟ್, ವೇಯಿಂಗ್ ಮಷಿನ್ ನೀಡಲಾಗುತ್ತಿದೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಯೋಜನೆಗೆ ಆರಂಭಿಸಲಾಗುತ್ತಿದೆ. ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಬೇಕೆನ್ನುವ ಕನಸನ್ನು ಹೊತ್ತು ಜವಾಬ್ದಾರಿ ತೆಗೆದುಕೊಂಡಿದ್ದೇನೆ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ನನಗೆ ಕೆಟ್ಟ ಹೆಸರು ಬರುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡಿ, ನೀವೇ ನನಗೆ ಶಕ್ತಿ ಎಂದು ಹೇಳಿದರು.

ಇಲಾಖೆಯನ್ನು ಮಾದರಿಯನ್ನಾಗಿ ಮಾಡಲು ನಾನು ಕಂಕಣಬದ್ಧಳಾಗಿದ್ದೇನೆ. ಅಂಗನವಾಡಿಗೆ ಕಳಪೆ ಆಹಾರ ಪದಾರ್ಥ ಪೂರೈಕೆಯಾದರೆ ಮುಲಾಜಿಲ್ಲದೆ ವಾಪಸ್ ಕಳಿಸಿ. ಕಳಪೆ ಆಹಾರ ಪೂರೈಕೆಯಾದರೆ ಸಿಡಿಪಿಒ ಮತ್ತು ಉಪನಿರ್ದೇಶಕರನ್ನು ಅಮಾನತುಗೊಳಿಸುವುದಾಗಿ ಈಗಾಗಲೇ ಎಚ್ಚರಿಕೆ ನೀಡಿದ್ದೇನೆ. ಅಂಗನವಾಡಿಗಳ ಬಳಿ ವಿದ್ಯುತ್ ಲೈನ್ ಅಪಾಯದ ಸ್ಥಿತಿಯಲ್ಲಿದ್ದರೆ, ಮರಗಳು ಬೀಳುವ ಸ್ಥಿತಿಯಲ್ಲಿದ್ದರೆ ತಕ್ಷಣ ಸಂಬಂಧಿಸಿದವರಿಗೆ ತಿಳಿಸಿ ಸರಿಪಡಿಸಿ. ಮಕ್ಕಳಿಗೆ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಸೂಚಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಮಾತನಾಡಿ, ಉತ್ತಮ ಮೊಬೈಲ್ ಕೊಡಿಸುವಂತೆ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದೆವು. ಈಗ ಲಕ್ಷ್ಮೀ ಹೆಬ್ಬಾಳಕರ್ ಅವರಿಂದಾಗಿ ಫಲ ಸಿಕ್ಕಿದೆ. ಸಚಿವರು ನುಡಿದಂತೆ ನಡೆಯುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಸಿಗುವಂತೆ ಮಾಡಿದ್ದಾರೆ. ಅವರಿಗೆ ನಾವು ಚಿರಋಣಿಯಾಗಿರುತ್ತೇವೆ ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ರಾಮರಡ್ಡಿ ಪಾಟೀಲ ಮಾತನಾಡಿ, ಮಾದರಿ ಅಂಗನವಾಡಿಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಹಲವಾರು ಕ್ರಮಗಳ ಮೂಲಕ ಅಂಗನವಾಡಿಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.

ಸಿಡಿಪಿಒ ಸುಮಿತ್ರಾ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ನಾಗರಾಜ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ವೇದಿಕೆಯಲ್ಲಿದ್ದರು.

----------

28ಬಿಇಎಲ್‌32,33

------------------------------------------------------

ಬಾಕ್ಸ್‌

ನಾನು ಯಾರಿಂದಾದರೂ ಹಣ ಪಡೆದಿದ್ದೇನಾ..?

ನಾನು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ಆದರೆ ಒಬ್ಬ ತಾಯಿಯಾಗಿ ಮಗನ ಸೋಲಾದಾಗ ಸಂಕಟವಾಯಿತು. ಇದು ಎಲ್ಲ ತಾಯಂದಿರಿಗೆ ಸಹಜ. ಮಗನಿಗೆ ಇನ್ನೂ ಸಾಕಷ್ಟು ಭವಿಷ್ಯವಿದೆ. ಬಿದ್ದವನು ಎದ್ದು ನಿಲ್ಲುತ್ತಾನೆ. ಆದರೆ, ಚುನಾವಣೆಯಲ್ಲಿ ನಾನು ಅಂಗನವಾಡಿ ಕಾರ್ಯಕರ್ತೆಯರಿಂದ ತಲಾ ಒಂದು ಲಕ್ಷ ಸಂಗ್ರಹಿಸಿದ್ದೇನೆ ಎಂದು, ನಿಮ್ಮ ಶಾಪದಿಂದಲೇ ನನ್ನ ಮಗನಿಗೆ ಸೋಲಾಗಿದೆ ಎಂದೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ ಎಂದು ಮಾಧ್ಯಮದವರು ಪ್ರಶ್ನಿಸಿದರು. ನಾನು ಯಾರಿಂದಾದರೂ ಹಣ ಪಡೆದಿದ್ದೇನಾ ಎಂದು ಸಚಿವೆ ಕೇಳುತ್ತಿದ್ದಂತೆ ಅಂಗನವಾಗಿ ಕಾರ್ಯಕರ್ತೆಯರು ನಮ್ಮ ಮುಂದೆ ಬಂದು ಅವರು ಹೇಳಲಿ, ತಕ್ಕ ಉತ್ತರ ಕೊಡುತ್ತೇವೆ ಎಂದರು.

ವೈರಿಗಳ ಕಡೆಯ ಅಸ್ತ್ರ ಆರೋಪ ಮಾಡುವುದು. ಅದಕ್ಕೆಲ್ಲ ಉತ್ತರ ಕೊಡುತ್ತ ಹೋದರೆ ಕೆಲಸ ಮಾಡಲು ಆಗುವುದಿಲ್ಲ. ಯಾರೇ ಆರೋಪ ಮಾಡಲಿ, ನಾವು ಶ್ರದ್ಧೆಯಿಂದ ಕೆಲಸ ಮಾಡೋಣ ಎಂದು ಹೇಳಿದರು.

--------------

ಕೋಟ್‌.........

ಬೆಳಗಾವಿ ಜಿಲ್ಲೆಯಲ್ಲಿ ಈ ವರ್ಷ 200 ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗಲಿವೆ.ಈ ಪ್ರಮಾಣದಲ್ಲಿ ಕಟ್ಟಡ ಮಂಜೂರಾಗಿರುವುದು ಜಿಲ್ಲೆಯ ಇತಿಹಾಸದಲ್ಲೇ ಮೊದಲು. ರಾಜ್ಯದ ವಿವಿಧೆಡೆ ತಲಾ ₹ 20 ಲಕ್ಷ ವೆಚ್ಚದಲ್ಲಿ ಒಂದು ಸಾವಿರ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವ ಭರವಸೆ ನೀಡಿದ್ದು, ಹಠಕ್ಕೆ ಬಿದ್ದು ಅದನ್ನು ಮಾಡಿಸುತ್ತೇನೆ. ಮುಖ್ಯಮಂತ್ರಿಗಳೂ ಭರವಸೆ ನೀಡಿದ್ದು, ಅದು ಆಗುವವರೆಗೂ ನನಗೆ ಸಮಾಧಾನವಿಲ್ಲ.

- ಲಕ್ಷ್ಮೀ ಹೆಬ್ಬಾಳಕರ, ಸಚಿವೆ