ಕನ್ನಡಪ್ರಭವಾರ್ತೆ ಕುಶಾಲನಗರ
ಕುಶಾಲನಗರ ತಾಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ಪೂರ್ವ ಪ್ರಾಥಮಿಕ ತರಗತಿಗಳನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಕೆ.ಭೋಗಪ್ಪ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಕೆ.ಕೆ.ಭೋಗಪ್ಪ, ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡವರಿಗೆ ತಮ್ಮ ಮಕ್ಕಳಿಗೆ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಕೊಡಿಸುವುದು ಗಗನ ಕುಸುಮವಾಗಿತ್ತು. ಈಗ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವು ಉತ್ತಮವಾಗಿ ದೊರಕುತ್ತಿದೆ. ಪೋಷಕರು ಸರ್ಕಾರಿ ಶಾಲೆಯಲ್ಲಿನ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು. ಸದ್ಯ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಮಾತ್ರವೇ ಮಕ್ಕಳಿಗೆ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಎಲ್‌ಕೆಜಿ, ಯುಕೆಜಿ ತರಗತಿಗಳಿಗಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ದಾಖಲು ಮಾಡುತ್ತಿದ್ದರು. ಆದರೆ ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ಶುರುವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಮನವಿ ಮಾಡಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಎಲ್‌ಕೆಜಿ, ಯುಕೆಜಿ ಕಲಿಕೆಯ ಪರಿಣಾಮದ ಸಾಧ್ಯತೆಗಳ ಬಗ್ಗೆ ವಿವರಿಸಿದರು. ಹಳ್ಳಿ ಮಕ್ಕಳಿಗೆ ಉತ್ತಮ ಕಲಿಕೆ ಸೂಕ್ತವಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯ ಹೆಚ್ಚಳ ಆಗುವುದರ ಬಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಿದರು. ಹಿಂದುಳಿದ ಪ್ರದೇಶಗಳಿಗೆ ಶಿಕ್ಷಣವೇ ಅಸ್ತ್ರವಾಗಿದ್ದು ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಕಲಿಕೆಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ , ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿಗಳಾದ ಎಲ್.ಕೆ.ಜಿ, ಯು.ಕೆ.ಜಿ ಆರಂಭಿಸಲಾಗುತ್ತಿದ್ದು, ಪೂರ್ವ ಪ್ರಾಥಮಿಕವನ್ನು ತರಗತಿವಾರು ಪ್ರತ್ಯೇಕವಾಗಿ ದ್ವಿಭಾಷಾ ಮಾಧ್ಯಮದಲ್ಲಿ ನಡೆಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ಎಂ. ಸಂತೋಷ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ತೆರೆಯಲು ಮುಂದಾಗಿರುವ ಸರ್ಕಾರದ ನಿರ್ಧಾರ ಸಂತೋಷ ತಂದಿದೆ ಎಂದು ಶುಭ ಕೋರಿದರು.
ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಕೆ.ಆರ್.ಪವಿತ್ರ, ಶಿಕ್ಷಕಿಯರಾದ ಕೆ.ಬಿ.ಗೀತಾರಾಣಿ, ಜಿ.ಮೇರಿ ಮಾರ್ಗರೇಟ್, ಜಿ ನಳಿನಿ, ಪೂರ್ವ ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕಿ ಪಿ.ಆರ್. ಶ್ಯಾಮಿಲ , ಅಂಗನವಾಡಿ ಕಾರ್ಯಕರ್ತೆ ಕಲಾವತಿ, ಸಹಾಯಕಿ ಎನ್.ಪಿ.ತ್ರಿಪುರ ಹಾಗೂ ಪೋಷಕರು ಇದ್ದರು.