ಶಿವಮೊಗ್ಗ: ಹಳ್ಳಿ ಸೊಗಡನ್ನು ಮನೋರಂಜನಾತ್ಮಕವಾಗಿ ತೆರೆ ಮೇಲೆ ತಂದಿರುವ “ಲೋ ನವೀನ " ಚಿತ್ರ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಚಿತ್ರ ಬಿಡುಗಡೆಯಾಗಿ ಎರಡನೇ ವಾರಕ್ಕೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ ಎಂದು ಚಿತ್ರದ ನಟ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಬದುಕಿನ ನೈಜ ಚಿತ್ರಣ, ಸ್ನೇಹ, ಪ್ರೀತಿ, ಕುಟುಂಬ ಮತ್ತು ಯುವಕರ ಜೀವನ ಶೈಲಿಯನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರ ತಂಡ ಕಟ್ಟಿಕೊಂಡಿದೆ ಎಂದರು.

ಕೀರ್ತಿ ಸ್ವಾಮಿ, ಬೆನ್ ಚಿಕ್ಕಸ್ವಾಮಿ ಹಾಗೂ ಎನ್.ಎಸ್. ಸ್ಟುಡಿಯೋಸ್ ಚಿತ್ರ ನಿರ್ಮಾಣ ಮಾಡಿದ್ದು, ಧನುರ್ಧಾರಿ ಪವನ್ ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆಯನ್ನು ನವೀನ್ ಸಜ್ಜು ಮತ್ತು ಸುನೀಲ್ ಮೈಸೂರು ರೂಪಿಸಿದ್ದು, ಸಿನಿಮಾದಲ್ಲಿ ಒಟ್ಟು 8 ಹಾಡುಗಳಿವೆ. ಹಾಡುಗಳು ಈಗಾಗಲೇ ಸಿನಿ ಪ್ರೇಮಿಗಳ ಗಮನ ಗೆಲ್ಲುತ್ತಿದೆ ಎಂದರು.

ಸಂಗೀತ ನಿರ್ದೇಶನವನ್ನು ನಾನು ಮಾಡಿದ್ದು, ಚಿತ್ರದಲ್ಲಿ ನವೀನ್ ಸಜ್ಜು, ವರ್ಷ ಗಿರಿಧರ್, ರೇಷ್ಮಾ ವಿ.ಗೌಡ, ಪ್ರಕಾಶ್ ತುಮ್ಮಿನಾಡು, ಅಪೂರ್ವಶ್ರೀ, ಅಜಿತ್ ಗೌಡ, ಮಲ್ಲರಾಜು ಮಾರಸಿಂಗನಹಳ್ಳಿ ಸೇರಿದಂತೆ ಹಲವಾರು ಹಳ್ಳಿ ಪ್ರತಿಭೆಗಳು ಅಭಿನಯಿಸಿದ್ದಾರೆ ಎಂದರು.

ಮನರಂಜನೆ ಮತ್ತು ಭಾವನೆಗಳನ್ನು ಒಳಗೊಂಡಿರುವ ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದ್ದು, ಈ ಚಿತ್ರವು ಶಿವಮೊಗ್ಗದ ಭಾರತ್ ಸಿನಿಮಾದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಸಿನಿ ಪ್ರೇಕ್ಷಕರು ಈ ಚಿತ್ರವನ್ನು ವೀಕ್ಷಿಸಿ ಚಿತ್ರ ತಂಡಕ್ಕೆ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.


ಗೋಷ್ಠಿಯಲ್ಲಿ ಪವನ್, ಗುರುಪ್ರಸಾದ್ ಉಪಸ್ಥಿತರಿದ್ದರು.