ಸಾರಾಂಶ
Load shedding, water shortages at the beginning of summer
- ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ, ವಿದ್ಯಾಭ್ಯಾಸಕ್ಕೆ ಅಡಚಣೆ, ಆಕ್ರೋಶ
- ಬಹುತೇಕ ಬಡಾವಣೆಗಳಲ್ಲಿ ನೀರಿನ ಅಭಾವ, ಮಹಾನಗರ ಪಾಲಿಕೆ ವಿರುದ್ಧ ಬೇಸರ---
ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರು
ಎರಡು ನದಿಗಳಿದ್ದರೂ ಕುಡಿಯಲು ನೀರಿಲ್ಲ, ವಿದ್ಯುತ್ ಉತ್ಪಾದನಾ ಸ್ಥಾವರಗಳಿದ್ದರೂ ವಿದ್ಯುತ್ ಇಲ್ಲ ಎನ್ನುವ ಸ್ಥಳೀಯರ ನಾಣುಡಿಯು ಪದೇ ಪದೆ ಸಾಬೀತಾಗುತ್ತಲೆಯೇ ಇದೆ. ಅದಕ್ಕೆ ತಾಜಾ ಉದಹಾರಣೆ ಎಂದರೆ ಬೇಸಿಗೆ ಆರಂಭದಲ್ಲಿಯೇ ಅನಧಿಕೃತ ಲೋಡ್ ಶೆಡ್ಡಿಂಗ್ ಹಾಗೂ ನೀರಿನ ಸಮಸ್ಯೆಗಳು ಜನ್ಮತಾಳುತ್ತಿವೆ.ಇದೀಗ ಬೇಸಿಗೆಯ ತಾಪ ಹೆಚ್ಚಾಗುತ್ತಿರುವಾಗಲೆನೇ ಜಿಲ್ಲೆ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಉಭಯ ಸಮಸ್ಯೆಗಳು ಒಟ್ಟೊಟ್ಟಿಗೆ ಉದ್ಭವಿಸುತ್ತಿರುವುದರಿಂದ ಜನಸಾಮಾನ್ಯರ ಹಾಗೂ ರೈತರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ವಿದ್ಯುತ್ ಕಡಿತಕ್ಕೆ ಕಾರಣಗಳು: ರಾಯಚೂರು ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಮಾಡಲು ಒಂದೇ ಒಂದು 220 ಕೆವಿ ಸರಬರಾಜು ಕೇಂದ್ರ ವಿರುವ ಕಾರಣಕ್ಕೆ ಲೋಡ್ ಜಾಸ್ತಿಯಾಗಿ ತಾಂತ್ರಿಕ ಸಮಸ್ಯೆಗಳು ತಲೆ ಎತ್ತುತ್ತಿದ್ದು, ಓವರ್ ಕಡಿಮೆ ಮಾಡುವ ಉದ್ದೇಶದಿಂದ ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ 110 ಕೆವಿಯನ್ನು ಮೇಲ್ದರ್ಜೇಗೇರಿಸಿ 220 ಕೆವಿಯನ್ನಾಗಿಸಿದ್ದು ಅಲ್ಲಿಂದ ವಿದ್ಯುತ್ ಸರಬರಾಜು ಮಾಡುವ ಕಾರ್ಯಕ್ಕೆ ಚಾಲನೆ ನೀಡಬೇಕಾಗಿದೆ ಅಲ್ಲಿವರೆಗೂ ನಗರದ ನಾಗರೀಕರು ಅನಧಿಕೃತ ಲೋಡ್ ಶೆಡ್ಡಿಂಗ್ ತಲೆನೋವನ್ನು ಅನುಭವಿಸಬೇಕಾಗಿದೆ. ಇನ್ನು ಗ್ರಾಮೀಣ ಭಾಗದಲ್ಲಿ ರೈತರ ಪಂಪ್ ಸೆಟ್‌ಗಳಿಗೆ, ಮನೆಗಳಿಗೆ ಕರೆಂಟ್ ಸರಬರಾಜಿನಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗುತ್ತಿದೆ. ನಿರಂತರ ಜ್ಯೋತಿಯಡಿಯೂ ವಿದ್ಯುತ್ ಸರಬರಾಜು ಆಗದ ಕಾರಣಕ್ಕೆ ಪರೀಕ್ಷಾ ಕಾಲದಲ್ಲಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಡಕು ಉಂಟಾಗುತ್ತಿದ್ದು, ಬಿರು ಬೇಸಿಗೆಯಡಿ ಸಕೆ ಹೆಚ್ಚಾಗುತ್ತಿರುವುದರಿಂದ ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ಜನ ನಿದ್ದೆ ಗೆಡುವಂತಾಗಿದೆ.ನೀರಿನ ಅಭಾವ ಆತಂಕ : ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರಿನ ಅಭಾಯ ಸೃಷ್ಟಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರಕ್ಕೆ ಕೃಷ್ಣಾ ಮತ್ತು ರಾಂಪುರ ಶುದ್ಧೀಕರಣದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ರಾಂಪುರ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆ, ಕೃಷ್ಣಾ ಶುದ್ಧೀಕರಣ ಘಟಕದಲ್ಲಿ ಮೋಟಾರ್ ರಿಪೇರಿ ಕಾಟದಿಂದಾಗಿ ನೀರಿನ ಸರಬರಾಜಿನಲ್ಲಿ ವ್ಯತ್ಯೆಯ ಉಂಟಾಗುತ್ತಿದೆ. ಕಳೆದ ಎರಡು ದಿನಗಳಿಂದ ಕೃಷ್ಣಾ ಶುದ್ಧೀಕರಣ ಘಟಕದ ಬೆಲ್ಟಿನ ಹಲವಾರು ಬಡಾವಣೆಗಳಿಗೆ ನೀರು ಸರಬರಾಜು ಆಗಿಲ್ಲ, ರಾಂಪುರ ಕೆರೆ ತುಂಬಿಸುವ ಕಾರ್ಯವು ಪ್ರಗತಿಯಲ್ಲಿದ್ದು ಬರುವ ದಿನಗಳಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಜಾಸ್ತಿಯಾಗುವ ಆತಂಕ ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲಿ ಈಗಾಗಲೇ ಸುಮಾರು ನೂರಾರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗುವುದರ ಬಗ್ಗೆ ಜಿಲ್ಲಾಡಳಿತ, ಜಿಪಂ ಗುರುತಿಸಿದ್ದು, ಕೆರೆಗಳ ಭರ್ತಿ, ಬೋರ್‌ವೆಲ್ ರಿಪೇರಿ ಸೇರಿ ಸಮೀಪದ ನೀರಿನ ಮೂಲಗಳಿಂದ ನೀರು ಒದಗಿಸುವುದರ ಕುರಿತಾಗಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಸಹ ವಹಿಸಲಾಗಿದೆ.----------------
ಕೋಟ್..ಜಿಲ್ಲೆಯ ಬಹುತೇಕ ಕಡೆ ವಿದ್ಯುತ್ ಕಡಿತ ಹಾಗೂ ಕುಡಿಯುವ ನೀರಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಜಿಲ್ಲಾಡಳಿತ, ಜಿಪಂ ಹಾಗೂ ಜೆಸ್ಕಾಂ ನವರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಗಳಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು.
-ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತ ಮುಖಂಡ-------------------
03ಕೆಪಿಆರ್‌ಸಿಆರ್ 01: ರಾಯಚೂರು ನಗರದ ಒಂದು ಭಾಗಕ್ಕೆ ನೀರು ಸರಬರಾಜು ಮಾಡುವ ರಾಂಪುರ ಶುದ್ಧೀಕರಣ ಘಟಕದ ನೋಟ.