ಸಿಬ್ಬಂದಿ ಕೊರತೆ ಸೇರಿದಂತೆ ಸಕಾಲಕ್ಕೆ ಸಾಲ ಸೌಲಭ್ಯ ಹಾಗೂ ಉತ್ತಮ ಸೇವೆ ನೀಡುತ್ತಿಲ್ಲ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಸದಸ್ಯರು ಚಿಕ್ಕಬಾಸೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಗೆ ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಬ್ಯಾಡಗಿ:ಸಿಬ್ಬಂದಿ ಕೊರತೆ ಸೇರಿದಂತೆ ಸಕಾಲಕ್ಕೆ ಸಾಲ ಸೌಲಭ್ಯ ಹಾಗೂ ಉತ್ತಮ ಸೇವೆ ನೀಡುತ್ತಿಲ್ಲ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಸದಸ್ಯರು ಚಿಕ್ಕಬಾಸೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಗೆ ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಚಿಕ್ಕಬಾಸೂರಿನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಕಳೆದ 1 ವರ್ಷದಿಂದ ಗ್ರಾಹಕರಿಗೆ ಸರಿಯಾದ ಸೌಲಭ್ಯ ಹಾಗೂ ಸೇವೆ ದೊರೆಯುತ್ತಿಲ್ಲ. ಇದರಿಂದ ರೈತರು ಹಾಗೂ ಸಾರ್ವಜನಿಕರು ಹೈರಾಣಾಗಿ ಹೋಗಿದ್ದು ಬ್ಯಾಂಕ್‌ನ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ ಎಂದರು.

ಸಿಬ್ಬಂದಿ ಕೊರತೆ: ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆಯಿಂದ ರೈತರು ಪದೇ ಪದೇ ಬ್ಯಾಂಕಿಗೆ ಅಲೆದಾಡಿ ಮನೆಗೆ ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ, ಈ ಹಿಂದೆ ಇಲ್ಲಿ 8 ಜನ ಸಿಬ್ಬಂದಿ ಹೊಂದಿದ್ದ ಬ್ಯಾಂಕ್ ಇದೀಗ ಕೇವಲ 3 ಜನ ಸಿಬ್ಬಂದಿಗಳಿದ್ದು, ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದರು.ಕಾಯುಂ ಮ್ಯಾನೇಜರ್ ಇಲ್ಲ: ಸಿಬ್ಬಂದಿ ಕೊರತೆ ಜೊತೆಯಲ್ಲಿ ಐದಾರು ತಿಂಗಳಿಗೊಮ್ಮೆ ಇಲ್ಲಿನ ಮ್ಯಾನೇಜರ್ ಅವರನ್ನು ಚೇಂಜ್ ಮಾಡಲಾಗುತ್ತದೆ. ಇದು ಬ್ಯಾಂಕ್‌ನ ಹಿನ್ನಡೆಗೆ ಕಾರಣವಾಗಿದೆ ಎಂದರಲ್ಲದೇ ಇದರಿಂದ ಪ್ರತಿ ಬಾರಿ ರೈತರು ಗ್ರಾಹಕರು ಸಾಲ ಕೇಳಿ ಹೋದಾಗಲೂ ಸಹ ಮ್ಯಾನೇಜರ್ ಇಲ್ಲ ಎಂಬ ಮಾತು ಕೇಳಿ ಬರುತ್ತದೆ. ಅಲ್ಲದೇ ಬ್ಯಾಂಕಿನಲ್ಲಿ ಹಳೆ ಸಾಲ ಕಟ್ಟಿದರೂ ಸಹ ಹೊಸ ಬೆಳೆಸಾಲ ನೀಡಲು ಸಹ ಮೀನಮೇಷ ಎಣಿಸಲಾಗುತ್ತಿದೆ, ಅಲ್ಲದೇ ಬಂಗಾರದ ಮೇಲಿನ ಸಾಲವನ್ನು ಸಹ ನೀಡದೇ ಜನರನ್ನು ಅಲೆದಾಡಿಸಲಾಗುತ್ತಿದೆ. ಈ ವ್ಯವಸ್ಥೆಯನ್ನ ಕೂಡಲೇ ಸರಿಪಡಿಸದೇ ಹೋದಲ್ಲಿ ಬ್ಯಾಂಕ್‌ಗೆ ಕಾಯಂ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಫಕ್ಕೀರೇಶ ಅಜಗೊಂಡ್ರ, ಜಗದೀಶ ಕೆಳಗಿನಮನಿ, ಈಶ್ವರ ಅಜಗೊಂಡ್ರ, ಜಗದೀಶ ನಿಟ್ಟೂರ, ರುದ್ರನಗೌಡ ಪರ್ತಗೌಡ್ರ, ನೂರುಲ್ಲಾ ಕಳಗೊಂಡ, ತಬರೇಜ ಬಳಿಗಾರ, ಎಂ.ಎಂ. ಪಠಾಣ, ಸಿದ್ರಾಮಗೌಡ ಚನ್ನಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.