ಸಾರಾಂಶ
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಷೇರುದಾರರ ಮಕ್ಕಳಿಗೆ ಮತ್ತು ಹೆಚ್ಚು ಪಿಗ್ಮಿ ಹಣವನ್ನು ಕಟ್ಟಿದ ಷೇರುದಾರರಿಗೆ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸ್ತ್ರೀ ಶಕ್ತಿ, ಸ್ವ- ಸಹಾಯ ಸಂಘಗಳಿಗೆ ಸಾಲ- ಸೌಲಭ್ಯ ನೀಡಲು ಸಂಘ ತೀರ್ಮಾನಿಸಿದೆ ಎಂದು ಶ್ರೀ ವಿಶ್ವೇಶ್ವರಯ್ಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಿರೀಶ್ ಕ್ಯಾತಘಟ್ಟ ತಿಳಿಸಿದರು.ಅಂಬೇಡ್ಕರ್ ಭವನದಲ್ಲಿ ಶ್ರೀವಿಶ್ವೇಶ್ವರಯ್ಯ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ವಹಿವಾಟನ್ನು ಮತ್ತಷ್ಟು ವೃದ್ಧಿಗೊಳಿಸಲು ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡಲು ಮುಂದಾಗಿದ್ದೇವೆ ಎಂದರು.
ಸಂಘವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲು ಷೇರುದಾರರ ಸಹಕಾರ ಅಗತ್ಯ. ಮತ್ತಷ್ಟು ಷೇರುದಾರರನ್ನು ಸೇರ್ಪಡೆ ಮಾಡಿ ಕೊಳ್ಳುವ ಜತೆಗೆ ಎಫ್‌ಡಿ, ಆರ್‌ಡಿ ಸಂಗ್ರಹಿಸಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.2024- 25ನೇ ಸಾಲಿನಲ್ಲಿ 3.34 ಲಕ್ಷ ರು. ನಿವ್ವಳ ಲಾಭ ಗಳಿಸಿದೆ. ಪ್ರಸಕ್ತ ವರ್ಷದಲ್ಲಿ ಮತ್ತಷ್ಟು ಹೆಚ್ಚು ಲಾಭಗಳಿಸಬೇಕಾದರೆ ಷೇರುದಾರರು ಆಡಳಿತ ಮಂಡಳಿಗೆ ಸಹಕಾರ ನೀಡಬೇಕು. ಹೆಚ್ಚು ಷೇರುಗಳನ್ನು ಕಟ್ಟಿ ಉಳಿತಾಯ ಖಾತೆಯನ್ನು ತೆರೆಯಬೇಕೆಂದು ಮನವಿ ಮಾಡಿದರು.
ಸಂಘದ ವತಿಯಿಂದ ಶೀಘ್ರದಲ್ಲೇ ಇ- ಸ್ಟ್ಯಾಂಪ್ ಸೌಲಭ್ಯ ನೀಡಲು ಮುಂದಾಗಿದ್ದು, ಸಂಘ ವತಿಯಿಂದ ಹಲವು ಹೊಸ ಯೋಜನೆಗಳನ್ನು ರೂಪಿಸುವ ಜತೆಗೆ ಪಿಗ್ಮಿದಾರರಿಗೆ ಸಾಲ ನೀಡುತ್ತಿದೆ. ಅದನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಷೇರುದಾರರ ಮಕ್ಕಳಿಗೆ ಮತ್ತು ಹೆಚ್ಚು ಪಿಗ್ಮಿ ಹಣವನ್ನು ಕಟ್ಟಿದ ಷೇರುದಾರರಿಗೆ ಸನ್ಮಾನಿಸಲಾಯಿತು.
ಈ ವೇಳೆ ಸಂಘದ ಉಪಾಧ್ಯಕ್ಷೆ ಬಿ.ಎಸ್. ಜ್ಯೋತಿ, ನಿರ್ದೇಶಕರಾದ ಎಲ್‌ಐಸಿ ಶಿವಣ್ಣ, ಅಣ್ಣೂರು ದೇವರಾಜು, ಸುಣ್ಣದದೊಡ್ಡಿ ಮಹೇಶ್, ಜಿ.ಎಸ್.ಲೋಕೇಶ್, ಆರ್.ಕೆ.ಚಂದ್ರಶೇಖರ್, ಸಿ.ಬಿ.ಪ್ರಕಾಶ್, ಭವಾನಿ, ಕೃಷ್ಣ, ಎಚ್.ಪಿ.ಸಿದ್ದಾಚಾರಿ, ಸೀನ, ಕೆ.ಎಸ್.ರಾಜೇಶ, ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕೆ.ಪವಿತ್ರ, ಸಿಬ್ಬಂದಿ ನಯನ, ಕಿರಣ್ ಸೇರಿದಂತೆ ಮತ್ತಿತರಿದ್ದರು.