ಸಾಲ ಮರುಪಾವತಿ ವಿಳಂಬ: ಮನೆಗೆ ಕೀಲಿ

| Published : Jan 26 2025, 01:30 AM IST

ಸಾರಾಂಶ

ಪ್ರಸ್ತುತ ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ರಾಜ್ಯಾದ್ಯಂತ ಏನೆಲ್ಲಾ ದುರ್ಘಟನೆಗಳು ನಡೆಯುತ್ತಿವೆ. ಅಂತಹುದೇ ಅಮಾನವೀಯ ಘಟನೆಯೊಂದು ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಿಗಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡ: ಪ್ರಸ್ತುತ ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ರಾಜ್ಯಾದ್ಯಂತ ಏನೆಲ್ಲಾ ದುರ್ಘಟನೆಗಳು ನಡೆಯುತ್ತಿವೆ. ಅಂತಹುದೇ ಅಮಾನವೀಯ ಘಟನೆಯೊಂದು ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಿಗಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಕ್ಷೇತ್ರದ ಅರವಟಿಗಿಯಲ್ಲಿ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಗರ್ಭಿಣಿ ಸೇರಿದಂತೆ ಕುಟುಂಬಸ್ಥರನ್ನು ಮುೂರು ತಿಂಗಳಿಂದ ಮನೆಯಿಂದ ಹೊರ ಹಾಕಿದ ಅಮಾನವೀಯ ಘಟನೆ ನಡೆದಿದೆ.

ಗ್ರಾಮದ ಪಿಲಿಪ್ ಬಿಲ್ಲಾ ಎಂಬುವರು 2023ರಲ್ಲಿ ಇಕ್ವಿಟಾಸ್‌ ಫೈನಾನ್ಸ್‌ ಕಂಪನಿಯಿಂದ ₹5 ಲಕ್ಷ ಸಾಲ ಪಡೆದುಕೊಂಡಿದ್ದರು. 2024ರ ಸೆಪ್ಟೆಂಬರ್‌ ವರೆಗೆ ₹2 ಲಕ್ಷ ಸಾಲ ಕಟ್ಟಿದ್ದು, ಆರು ತಿಂಗಳಿಂದ ಆರ್ಥಿಕ ಪರಿಸ್ಥಿತಿಯಿಂದ ಸಾಲ ಹಾಗೂ ಬಡ್ಡಿ ತುಂಬಿರಲಿಲ್ಲ. ಹೀಗಾಗಿ 2024ರ ಸೆಪ್ಟೆಂಬರ್‌ 16ರಿಂದ ಈ ಕುಟುಂಬದವರನ್ನು ಮನೆಯಿಂದ ಹೊರ ಹಾಕಿ ಮನೆ ಬಾಗಲಿಗೆ ನೋಟಿಸ್‌ ಅಂಟಿಸಲಾಗಿದೆ. ಮೂರು ತಿಂಗಳಿಂದ ಮನೆಯಿಲ್ಲದ ಕಾರಣ ಮನೆಯ ಬಳಿಯೇ ಗರ್ಭೀಣಿ ಸಮೇತ ಈ ಕುಟುಂಬ ವಾಸ ಮಾಡುತ್ತಿದ್ದು, ಇನ್ನಾದರೂ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ ಎಂದು ಪಿಲಿಪ್‌ ಬಿಲ್ಲಾ ಮಾಧ್ಯಮಗಳ ಎದರು ಅಳಲು ತೋಡಿಕೊಂಡಿದ್ದಾರೆ.

ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಜನತೆ ಆತ್ಮಹತ್ಯೆ: ಬೆಲ್ಲದ

ಹುಬ್ಬಳ್ಳಿ:

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಬೇಸತ್ತು ಜನರು ಊರು ಬಿಡುತ್ತಿದ್ದಾರೆ. ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಿರುಕುಳ ಹೆಚ್ಚಾದಾಗ ಕೆಲವರು ತಮ್ಮ ಹೆಂಡತಿಯನ್ನೇ ಮಾರುವ ದುಃಸ್ಥಿತಿಗೆ ಈ ಸರ್ಕಾರ ತಂದು ನಿಲ್ಲಿಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರದಿಂದ ಎಲ್ಲೆಡೆ ಮೀಟರ್ ಬಡ್ಡಿ, ಡ್ರಗ್ಸ್‌ ಮಾರಾಟ ಹಾಗೂ ಜೂಜಾಟದಂತಹ ಕಾನೂನು ಬಾಹಿರ ಚಟುವಟಿಕೆ ಹೆಚ್ಚಾಗಿದೆ. ಕಾನೂನು ಪಾಲಿಸುವ ಪೊಲೀಸರಿಂದ ಕಾಂಗ್ರೆಸ್ ಸಚಿವ, ಶಾಸಕರು ಕೋಟಿಗಟ್ಟಲೆ ದುಡ್ಡು ಪಡೆದು ಅವರು ಕೇಳುವ ಸ್ಥಳಕ್ಕೆ ವರ್ಗಾವಣೆ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಪೊಲೀಸರು ಕಳ್ಳರು, ಡ್ರಗ್ಸ್‌ ಫೆಡ್ಲರ್‌ಗಳ ಕಡೆಯಿಂದ ಹಣ ವಸೂಲಿ ಮಾಡಲು ಆರಂಭಿಸಿದ್ದಾರೆ. ಜನರಿಗೆ ಪೊಲೀಸರ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ಉದ್ಭವವಾಗಿದೆ ಎಂದು ಆರೋಪಿಸಿದರು.ಭ್ರಷ್ಟಾಚಾರ ತಡೆಯಲಿ:ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಭ್ರಷ್ಟಾಚಾರ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ವಿಧಾನಸೌಧದಲ್ಲಿ ಹವಾನಿಯಂತ್ರಿತ(ಎಸಿ) ಕೊಠಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರೆ ಸಾಲದು, ಮೊದಲು ತಮ್ಮ ಆಡಳಿತದಲ್ಲಿನ ಭ್ರಷ್ಟಾಚಾರವನ್ನು ತಡೆಯುವ ಕೆಲಸ ಮಾಡಬೇಕು. ಹುಬ್ಬಳ್ಳಿಯಂತಹ ಮಹಾನಗರದ ಕಾಲೇಜುಗಳಲ್ಲಿ ಡ್ರಗ್ಸ್‌ ಮಾರಾಟ ನಡೆಯುತ್ತಿದೆ. ನಿತ್ಯ ಚಾಕು- ಚೂರಿ ಇರಿತಗಳು ಸಾಮಾನ್ಯವಾಗಿವೆ. ಮೊದಲು ಸರ್ಕಾರ ಇವುಗಳನ್ನು ನಿಯಂತ್ರಿಸುವ ಕೆಲಸ ಮಾಡಲಿ ಎಂದರು.