ಸಿದ್ಧಸಿರಿಯಲ್ಲಿ 12 ಗಂಟೆಯಲ್ಲಿ ಸಾಲ ಮಂಜೂರು

| Published : May 30 2024, 12:47 AM IST

ಸಾರಾಂಶ

ಸಿದ್ಧಸಿರಿ ಸೌಹಾರ್ದ ಸಹಕಾರಿಯು ಅತೀ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಸಿದ್ಧಸಿರಿ ಎಕ್ಸಪ್ರೆಸ್ ಸಾಲಯೋಜನೆ ಪ್ರಾರಂಭಿಸಿದ್ದು ಸಾಲ ಬೇಡಿ ಬಂದ ಗ್ರಾಹಕರಿಗೆ ಕೇವಲ 12 ಗಂಟೆಗಳಲ್ಲಿ ಸಾಲ ಮಂಜೂರು ಮಾಡಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಜ್ಯೋತಿಬಾ ಖಂಡಾಗಳೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿದ್ಧಸಿರಿ ಸೌಹಾರ್ದ ಸಹಕಾರಿಯು ಅತೀ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಸಿದ್ಧಸಿರಿ ಎಕ್ಸಪ್ರೆಸ್ ಸಾಲಯೋಜನೆ ಪ್ರಾರಂಭಿಸಿದ್ದು ಸಾಲ ಬೇಡಿ ಬಂದ ಗ್ರಾಹಕರಿಗೆ ಕೇವಲ 12 ಗಂಟೆಗಳಲ್ಲಿ ಸಾಲ ಮಂಜೂರು ಮಾಡಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಜ್ಯೋತಿಬಾ ಖಂಡಾಗಳೆ ಹೇಳಿದರು.

ಸಿದ್ಧಸಿರಿ 19ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಸಿದ್ಧಸಿರಿ ಮಹಿಳಾ ಶಾಖೆ ಸಭಾಂಗಣದಲ್ಲಿ ಸಿಬ್ಬಂದಿ ತರಬೇತಿ ಶಿಬಿರ ಉದ್ದೇಶಿಸಿ ಅವರು ಮಾತನಾಡಿ, ಸಿದ್ಧಸಿರಿ ಸೌಹಾರ್ದದ ಅಧ್ಯಕ್ಷ ಹಾಗೂ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರ ನಿರ್ಣಯದಂತೆ ವಿಜಯಪುರ ನಗರದಲ್ಲಿ ಬಡ, ಬೀದಿ ಬದಿ ವ್ಯಾಪಾರಿಗಳಿಗಾಗಿ ಶೂನ್ಯ ಬಡ್ಡಿದರಲ್ಲಿ “ಕೇಸರಿ ಸ್ವಾವಲಂಬಿ ಯೋಜನೆಯಡಿಯಲ್ಲಿ” ಸಾಲ ವಿತರಿಸಲಾಗುತ್ತಿದೆ ಎಂದರು.

ಸಭೆ ಉದ್ದೇಶಿಸಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಮಾತನಾಡಿ, ಕೇವಲ 18 ವರ್ಷಗಳಲ್ಲಿ ಸಿದ್ಧಸಿರಿ ಸೌಹಾರ್ದವು ₹3413 ಕೋಟಿ ಠೇವಣಿ ಸಂಗ್ರಹಿಸಿ ಶೇರುದಾರರಿಗೆ ಶೇ.25 ಡಿವಿಡೆಂಡ್ ನೀಡಲಾಗಿದೆ. ಧನೇನ ದೀನಂ ಸಬಲೀ ಕುರುತ್ವಂ” ಎಂಬ ಧ್ಯೇಯೋದ್ದೇಶದೊಂದಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ನೇತೃತ್ವದಲ್ಲಿ ದಕ್ಷ ಆಡಳಿತ ಮಂಡಳಿಯನ್ನು ಹೊಂದಿದ್ದು, 2006 ಮೇ 29ರಂದು ಪ್ರಾರಂಭಗೊಂಡ ಸಿದ್ಧಸಿರಿ ಸೌಹಾರ್ದ ಸಹಕಾರಿಯು ಕರ್ನಾಟಕ ರಾಜ್ಯಾದ್ಯಂತ 159 ಶಾಖೆಗಳನ್ನು ಹೊಂದಿ, ರಾಜ್ಯಾದ್ಯಂತ 1077 ಸಿಬ್ಬಂದಿಗಳು ಹಾಗೂ 594 ಪಿಗ್ಮಿ ಸಂಗ್ರಹಕಾರರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದು ಇತಿಹಾಸ.

ವಿಜಯಪುರ ನಗರದ ಸಿದ್ಧೇಶ್ವರ ದೇವಾಲಯ ಆವರಣದಲ್ಲಿರುವ ಮುಖ್ಯ ಕಚೇರಿಯಲ್ಲಿ ದಿನದ 24 ಗಂಟೆ 365 ದಿನಗಳು ನಿರಂತರ ಸೇವೆ ನೀಡುತ್ತಿರುವ ದೇಶದ ಏಕೈಕ ಸೌಹಾರ್ದ ಸಹಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಲ್ಲ ಶಾಖೆಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ವಯೋವೃದ್ಧರು, ದಿವ್ಯಾಂಗರ ಮನೆ ಬಾಗಿಲಿಗೆ ಸೇವೆ ಒದಗಿಸುವುದರ ಮೂಲಕ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. 19ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಮೇಲೆ ಅಪಾರವಾದ ವಿಶ್ವಾಸವಿಟ್ಟು ವ್ಯವಹರಿಸುತ್ತಿರುವ ಕರ್ನಾಟಕ ರಾಜ್ಯದ ಸಮಸ್ತ ಗ್ರಾಹಕರಿಗೆ ಹಾಗೂ ಶೇರುದಾರರಿಗೆ ಇನ್ನು ಅನೇಕ ಯೋಜನೆಗಳ ಮೂಲಕ ಉತ್ತಮ ಸೇವೆ ನೀಡಲು ಕಂಕಣಬದ್ಧರಾಗಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾಪ್ರಭಂದಕ ಅಭಿಜಿತ ಕೃಷ್ಣಮೂರ್ತಿ, ನೀರಜ ಕಾಕಟಿ, ರಾಜು ಜೋಶಿ, ರಾಜಶೇಖರ ಪಾಟೀಲ, ಎ.ಜಿ.ಎಂ ಸಮೀರ ಕಂಬಾಗಿ, ಶಿವಕುಮಾರ ಕಬ್ಬಿನ, ವಲಯ ಅಧಿಕಾರಿಗಳಾದ ವಾಗೇಶ ಮಠ, ಸವಿತಾ ಗುಣಾರಿ ರಾಜು ಬಳಸಂಕರ, ರಾಜೇಸಾಬ ಹೈದರಖಾನ, ಗುರುಶಾಂತ ಮುತ್ತಗಿ, ಸಂದೀಪ ಗುಡೂರ, ಸಿದ್ದಲಿಂಗ ಬಬಲಾದಿಮಠ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.