ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಸರ್ಕಾರವು ವಿಶೇಷ ಕ್ರೆಡಿಟ್ ಗ್ಯಾರಂಟಿ ಯೋಜನೆ ಅಡಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ಯಾವುದೇ ಅಡಮಾನವಿಲ್ಲದೇ ₹100 ಕೋಟಿವರೆಗೆ ಸಾಲ ನೀಡಲಿದೆ. ಈ ಕ್ರಮದಿಂದ ದೀರ್ಘಾವಧಿ ಸಾಲ ಬಯಸುವ ಎಂಎಸ್‌ಎಂಇಗಳಿಗೆ ಬಹಳ ಅನುಕೂಲವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದರು.ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಎಂಎಸ್‌ಎಂಇ ಕ್ಲಸ್ಟರ್ ಔಟ್‌ರೀಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಎರಡ್ಮೂರು ವರ್ಷಗಳಲ್ಲಿ ದೇಶಾದ್ಯಂತ ಪ್ರತಿ ಎಂಎಸ್‌ಎಂಇ ಕ್ಲಸ್ಟರ್‌ಗಳಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಐಡಿಬಿಐ) ಶಾಖೆಯನ್ನು ತೆರೆಯುವ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ 25 ಶಾಖೆಗಳನ್ನು ತೆರೆಯಲಾಗುತ್ತಿದ್ದು, ಅದರಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿನ ಮಧ್ಯವರ್ತಿ ಸಾಲವನ್ನು ತೆಗೆದು ಹಾಕಲು ಇದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಎಂಎಸ್‌ಎಂಇಗಳಿಗೆ ಸಾಲ ಪಡೆಯಲು ಮೂರನೇ ವ್ಯಕ್ತಿಯ ಗ್ಯಾರಂಟಿ ಅಥವಾ ಯಾವುದೇ ಅಡಮಾನದ ಅವಶ್ಯಕತೆಯಿಲ್ಲದಂತೆ ಮಾಡಲಾಗುತ್ತಿದೆ. ಅದರಲ್ಲೂ ವಿಶೇಷ ಕ್ರೆಡಿಟ್ ಗ್ಯಾರಂಟಿ ಯೋಜನೆ ಅಡಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ಯಾವುದೇ ಅಡಮಾನವಿಲ್ಲದೇ ₹100 ಕೋಟಿವರೆಗೆ ಸಾಲ ನೀಡಲಾಗುವುದು. ಇದು ಎಂಎಸ್‌ಎಂಇಗಳ ಬೆಳವಣಿಗೆಯಲ್ಲಿ ಸಾಕಷ್ಟು ನೆರವಾಗಲಿದೆ ಎಂದು ಹೇಳಿದರು.ರಾಜ್ಯದಲ್ಲಿನ 35 ಲಕ್ಷಕ್ಕೂ ಹೆಚ್ಚಿನ ಎಂಎಸ್‌ಎಂಇಗಳಿದ್ದು, ಅವುಗಳಿಂದ 1.65 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಇದು ಕರ್ನಾಟಕದ ಬೆಳವಣಿಗೆಗೆ ಭಾರೀ ಕೊಡುಗೆ ನೀಡುತ್ತಿದೆ. ಕೇಂದ್ರ ಸರ್ಕಾರವು ಕರ್ನಾಟಕದ ಜತೆಗೆ ಎಲ್ಲ ರಾಜ್ಯಗಳ ಎಂಎಸ್‌ಎಂಇಗಳ ಅಭಿವೃದ್ಧಿ ನೆರವು ನೀಡಲಿದೆ. ಅದರ ಭಾಗವಾಗಿ ಟ್ರೇಡ್ ರಿಸೀವೆಬಲ್ಸ್ ಡಿಸ್ಕೌಂಟಿಂಗ್ ವ್ಯವಸ್ಥೆ (ಟಿಆರ್‌ಇಡಿಎಸ್)ಯಲ್ಲಿ ಭಾಗವಹಿಸುವ ವಹಿವಾಟಿನ ಮಿತಿಯನ್ನು ₹500 ಕೋಟಿಯಿಂದ ₹250 ಕೋಟಿಗೆ ಕಡಿತಗೊಳಿಸಲಾಗಿದೆ ಎಂದರು.