ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ಉರುಳುಗಲ್ಲು, ಕಾನೂರು ಮತ್ತು ಮೇಘಾನೆ ಗ್ರಾಮಸ್ಥರನ್ನು ಪುನರ್ ವಸತಿ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಶಾಸಕ ಗೋಪಾಲಕೃಷ್ಣ ಬೇಳೂರು ಅರಣ್ಯ ಸಚಿವರಿಗೆ ಬರೆದಿರುವ ಪತ್ರ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದೆ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಸಿ.ಲಕ್ಷ್ಮೀನಾರಾಯಣ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿನ ಜನರನ್ನು ಸ್ಥಳಾಂತರ ಮಾಡುವುದಕ್ಕೆ ನಮ್ಮ ವಿರೋಧವಿದ್ದು, ನಮ್ಮ ಭೂಮಿ ನಮ್ಮ ಹಕ್ಕು ಘೋಷ ವಾಕ್ಯದಡಿ ಎಲ್ಲ ಹಂತದ ಪ್ರತಿಭಟನೆಗೂ ನಾವು ಸಿದ್ಧರಿದ್ದೇವೆ ಎಂದರು. ಶಾಸಕರು ಯಾವುದೋ ಸ್ವಯಂ ಸೇವಾ ಸಂಸ್ಥೆ, ಸರ್ಕಾರಿ ಅಧಿಕಾರಿಗಳ ಲಾಬಿಗೆ ಮಣಿದಂತೆ ಕಾಣುತ್ತಿದೆ. ಸ್ಥಳೀಯ ನಿವಾಸಿಗಳ ಕನಿಷ್ಟ ಅಭಿಪ್ರಾಯವನ್ನು ಸಹ ಕೇಳದೆ ಅವರನ್ನು ಒಕ್ಕಲೆಬ್ಬಿಸಲು ಪತ್ರ ಬರೆದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಸಿಂಗಳೀಕ ಅರಣ್ಯ ಹೆಸರಿನಲ್ಲಿ ಹಂತಹಂತವಾಗಿ ಒಂದೊಂದೇ ಗ್ರಾಮಗಳನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಅಲ್ಲಿನ ನಿವಾಸಿ ಗಳನ್ನು ಒಕ್ಕಲೆಬ್ಬಿಸಲು ನಾವು ಅವಕಾಶ ಮಾಡಿಕೊಡುವುದಿಲ್ಲ. ಒಂದೊಮ್ಮೆ ಅಂತಹ ಪ್ರಯತ್ನಕ್ಕೆ ಕೈಹಾಕಿದರೆ ಉಗ್ರವಾದ ಪ್ರತಿಭಟನೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗ್ರಾಮಸ್ಥರಾದ ನಾಗರಾಜ ಸಾಲ್ಕೋಡ್ ಮಾತನಾಡಿ, ಸ್ಥಳೀಯರನ್ನು ಕನಿಷ್ಟ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸಚಿವರಿಗೆ ಪತ್ರ ಬರೆದಿರುವುದು ಖಂಡನೀಯ. ರಾಜ್ಯಕ್ಕೆ ವಿದ್ಯುತ್ ನೀಡಲು ಎರಡು ಬಾರಿ ನಾವು ಸರ್ವಸ್ವವನ್ನೂ ಕಳೆದುಕೊಂಡಿದ್ದೇವೆ. ನಮ್ಮನ್ನು ರಕ್ಷಣೆ ಮಾಡಬೇಕಾದವರೆ ಹೀಗೆ ಒಕ್ಕಲೆಬ್ಬಿಸುವಂತೆ ಪತ್ರ ಬರೆದಿದ್ದು, ನಮಗೆ ಆತಂಕ ತಂದಿದೆ. ನಾವು ಗ್ರಾಮಗಳಿಗೆ ಮೂಲಭೂತ ಸೌಲಭ್ಯ ನೀಡಿ ಎಂದು ಕೇಳಿದ್ದೇವೆಯೇ ಹೊರತು ಬೇರೆ ಕಡೆ ಸ್ಥಳಾಂತರಗೊಳ್ಳುತ್ತೇವೆ ಎಂದು ಹೇಳಿಲ್ಲ. ಹಲವು ವರ್ಷಗಳಿಂದ ನಾವು ನಾಗರಿಕ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದೇವೆ. ರಸ್ತೆ, ವಿದ್ಯುತ್ ಇನ್ನಿತರ ಸೌಲಭ್ಯ ಕೊಡುವ ಬದಲು ಒಕ್ಕಲೆಬ್ಬಿ ಸಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು. ಗೋಷ್ಠಿಯಲ್ಲಿ ಲಕ್ಷ್ಮಣ್, ಪ್ರಸನ್ನ ಕೊಳಚಗಾರು, ಮಹೇಶ್ ಮೆಗ್ಗಾನೆ, ದಿನೇಶ್ ಹಾರೋಡಿ, ಓಮೇಂದ್ರ ಜೈನ್, ರಾಮಚಂದ್ರ ಇನ್ನಿತರರು ಉಪಸ್ಥಿತರಿದ್ದರು.ಮೂಲ ಸೌಲಭ್ಯ ಕೋರಿ ಬರೆದ ಪತ್ರವದು: ಬೇಳೂರು ಸ್ಪಷ್ಟನೆಸಾಗರ: ಕಾನೂರು, ಮೆಗ್ಗಾನೆ, ಉರುಳುಗಲ್ಲು ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕೊಡಿ ಎಂದು ಪತ್ರ ಬರೆದಿದ್ದೇನೆಯೇ ಹೊರತು ಒಕ್ಕಲೆಬ್ಬಿಸಿ ಎಂದು ಅರಣ್ಯ ಸಚಿವರಿಗೆ ಪತ್ರ ಬರೆದಿಲ್ಲ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ವಿಷಯವನ್ನು ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಗಾಂಧಿ ಮಂದಿರದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಈ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಸಿಗದೆ ಇರುವ ಬಗ್ಗೆ ನಾನು ಸದನದಲ್ಲಿ ಸಹ ಚರ್ಚೆ ನಡೆಸಿ, ಅಗತ್ಯ ಸೌಲಭ್ಯ ಕಲ್ಪಿಸಲು ಮನವಿ ಮಾಡಿದ್ದೇನೆ. ಇಂಧನ ಸಚಿವರಿಗೆ ಮನವಿ ಮಾಡಿ ಕೇಬಲ್ ಮೂಲಕ ವಿದ್ಯುತ್ ಪೂರೈಕೆಗೆ ಒಪ್ಪಿಸಿದ್ದೇನೆ. ಇಂತಹ ಸಂದರ್ಭದಲ್ಲಿ ನಾನು ಅವರನ್ನು ಒಕ್ಕಲೆಬ್ಬಿಸಿ ಎಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಬಿಜೆಪಿಯವರು ಓಟಿನ ಆಸೆಗಾಗಿ ಸಣ್ಣ ಕಿಡಿ ಹೊತ್ತಿಸಿದ್ದಾರೆ. ಬಿ.ವೈ.ರಾಘವೇಂದ್ರ ಎರಡು ಬಾರಿ ಸಂಸದರಾಗಿದ್ದರೂ ಈ ಗ್ರಾಮಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಹಿಂದಿನ ಶಾಸಕ ಹೆಚ್.ಹಾಲಪ್ಪ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಯಾವ ಪ್ರಯತ್ನವನ್ನೂ ನಡೆಸಿಲ್ಲ ಎಂದು ಆರೋಪಿಸಿದರು.ಕ್ಷೇತ್ರದ ಅಭಿವೃದ್ದಿಗೆ ಗ್ಯಾರಂಟಿ ನಡುವೆಯೂ ದೊಡ್ಡಪ್ರಮಾಣದಲ್ಲಿ ಅನುದಾನ ತರಲಾಗಿದೆ. ಬಿಜೆಪಿಯವರು ಅನುದಾನ ತಂದಿಲ್ಲವೆಂದು ಸುಳ್ಳುಸುದ್ದಿ ಹರಡುವ ಪ್ರಯತ್ನ ನಡೆಸುತ್ತಿದ್ದಾರೆ. ಅನುದಾನ ತಂದಿರುವ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ ಬೇಳೂರು, ಕ್ಷೇತ್ರವ್ಯಾಪ್ತಿಯಲ್ಲಿ ನಮ್ಮ ಅಭ್ಯರ್ಥಿ ಗೀತಾ ಅವರ ಗೆಲುವಿನ ಬಗ್ಗೆ ಉತ್ತಮ ವಾತಾವರಣವಿದೆ. ಪ್ರಚಾರಕ್ಕೆ ಹೋದಲೆಲ್ಲಾ ಜನರು ಸ್ವಯಂಪ್ರೇರಿತವಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆ. ಕಾರ್ಯಕರ್ತರು ಸಹ ಅತ್ಯುತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದರು.ಪಕ್ಷದ ಪ್ರಮುಖರಾದ ಕಲಸೆ ಚಂದ್ರಪ್ಪ, ರವಿಕುಮಾರ್ ಎಚ್.ಎಂ.,ಗಣಪತಿ ಮಂಡಗಳಲೆ, ಉಷಾ ಎನ್., ಎಲ್.ಚಂದ್ರಪ್ಪ, ಸುರೇಶಬಾಬು, ಮಕ್ಬೂಲ್ ಅಹ್ಮದ್, ಮಂಜೂರಾಲಿ ಖಾನ್, ಮಧುಮಾಲತಿ, ಹಮೀದ್, ಶಾಹೀನಾ ಅಲ್ತಾಫ್, ವೈ.ಕೆ.ರವಿಕುಮಾರ್ ಇನ್ನಿತರರು ಹಾಜರಿದ್ದರು.ಪ್ರತಿ ಸಾವಿನಲ್ಲೂ ರಾಜಕೀಯ ಮಾಡುವ ಬಿಜೆಪಿ ಮನಸ್ಥಿತಿಯೇ ಅಸಹ್ಯ: ಬೇಳೂರುಸಾಗರ: ನೇಹಾ ಹತ್ಯೆಗೆ ನ್ಯಾಯ ಸಿಗಬೇಕೆನ್ನುವುದು ಎಲ್ಲರ ಅಭಿಪ್ರಾಯ. ನಮ್ಮ ಸರ್ಕಾರವೂ ಇದಕ್ಕೆ ಕೂಡಲೇ ಸ್ಪಂದಿಸಿದೆ. ಆದರೆ ಬಿಜೆಪಿ ಮಾತ್ರ ಧರ್ಮದ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ತಾಲೂಕಿನ ಬೇಳೂರಿನಲ್ಲಿ ಚುನಾವಣಾ ಪ್ರಚಾರಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿ ನೇಹಾ ಬರ್ಬರ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಈ ಕೃತ್ಯ ಯಾರೇ ಮಾಡಿದ್ದರೂ ತಕ್ಕ ಶಿಕ್ಷೆಯಾಗಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ. ಆದರೆ ಇದರಲ್ಲಿ ಕಾಂಗ್ರೆಸ್ ಕೈವಾಡವಿರುವಂತೆ ಬಿಜೆಪಿ ಬಿಂಬಿಸಿ, ಅನಗತ್ಯವಾಗಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಪ್ರವೀಣ್ ನೆಟ್ಟಾರು, ಹರ್ಷ ಸೇರಿ ಹಲವು ಹಿಂದೂ ಕಾರ್ಯಕರ್ತರ ಹತ್ಯೆಯಾಯಿತಲ್ಲ ಅದಕ್ಕೆ ಯಾರು ಹೊಣೆ? ಅದರಲ್ಲಿ ಬಿಜೆಪಿ ಕೈವಾಡವಿತ್ತಾ? ಹೆಣ್ಣುಮಗಳ ಸಾವಿನಲ್ಲೂ ರಾಜಕೀಯ ಮಾಡುವ ಬಿಜೆಪಿ ಮನಸ್ಥಿತಿ ಅಸಹ್ಯ ಹುಟ್ಟಿಸುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಜಾತಿ ಹಣೆಪಟ್ಟಿ ಕಟ್ಟಿಕೊಂಡು ಮತ ಕೇಳುವ ಹುನ್ನಾರ ನಡೆಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದ್ದು, ಗೀತಾ ಅವರು ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಅವರು ಗೆದ್ದರೆ ಕೈಗೆ ಸಿಗುವುದಿಲ್ಲವೆನ್ನುವ ಅಪಪ್ರಚಾರ ನಡೆಸಲಾಗುತ್ತಿದೆ. ಅವರು ಶಿವಮೊಗ್ಗದಲ್ಲೇ ಮನೆ ಮಾಡಿದ್ದು, ಅಲ್ಲಿಂದಲೇ ಜನರಿಗೆ ಸ್ಪಂದಿಸುತ್ತಿದ್ದಾರೆ ಎಂದ ಅವರು, ನನ್ನ ಮೇಲಿನ ಆರೋಪಗಳಿಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಹಿಂದಿನ ಸರ್ಕಾರ ಎಷ್ಟು ಅನುದಾನ ನೀಡಿದೆ, ಈಗ ಎಷ್ಟು ಕಾಮಗಾರಿಗೆ ಹಣ ಬಿಡುಗಡೆಯಾಗಿದೆ ಎನ್ನುವುದನ್ನು ದಾಖಲೆ ಸಹಿತ ತೋರಿಸುತ್ತೇನೆ. ತಾಕತ್ತಿದ್ದರೆ ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.