ಸಾರಾಂಶ
ನವದೆಹಲಿ/ ಬೆಂಗಳೂರು : ಮುಂಬರುವ ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವಂತೆ ವರಿಷ್ಠರ ಮನವೊಲಿಕೆ ಪ್ರಯತ್ನ ದೆಹಲಿಯಲ್ಲಿ ಬಿಜೆಪಿ ನಾಯಕರಿಂದ ಆರಂಭವಾಗಿದೆ.
ಬುಧವಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಉಪನಾಯಕ ಅರವಿಂದ್ ಬೆಲ್ಲದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಟಿ.ರವಿ ಮತ್ತಿತರ ನಾಯಕರು ದೆಹಲಿಗೆ ಆಗಮಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಸಭೆ ನಡೆಸಿ ಯೋಗೇಶ್ವರ್ ಪರ ವಕಾಲತ್ತು ನಡೆಸಿದರು.
ಇದಕ್ಕೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಅಶೋಕ್, ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲು ಆಗಮಿಸಿದ್ದೇವೆ. ಮುಂಬರುವ ವಿಧಾನಸಭಾ ಉಪ ಚುನಾವಣೆಯ ಟಿಕೆಟ್ ಹಂಚಿಕೆ ಕುರಿತಾಗಿಯೂ ಚರ್ಚೆ ನಡೆಸಲಿದ್ದೇವೆ. ಕೇಂದ್ರ ಸಚಿವ ಜೋಶಿ ಜೊತೆ ಮಾತುಕತೆ ನಡೆಸಿದ ಬಳಿಕ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೂರು ಕಡೆ ಬಿಜೆಪಿಗೆ ಟಿಕೆಟ್ ಸಿಗಬೇಕು ಎನ್ನುವುದು ನಮ್ಮ ಬೇಡಿಕೆ. ಯಾರಿಗೆ ಟಿಕೆಟ್ ಎನ್ನುವುದನ್ನು ಅಂತಿಮವಾಗಿ ಎನ್‌ಡಿಎ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.ಉಪಚುನಾವಣೆಯ ಟಿಕೆಟ್ ಬಗ್ಗೆ ಸ್ಪಷ್ಟ ಭರವಸೆ ಪಡೆದುಕೊಳ್ಳಲು ಮುಂದಾಗಿರುವ ಯೋಗೇಶ್ವರ್ ಅವರು ಮಂಗಳವಾರ ಸಂಜೆಯೇ ದೆಹಲಿ ತಲುಪಿದ್ದರು.
ಕೆಲವು ದಿನಗಳ ಹಿಂದೆ ಏಕಾಂಗಿಯಾಗಿ ದೆಹಲಿಗೆ ಭೇಟಿ ನೀಡಿ ಒಂದು ಸುತ್ತಿನ ಪ್ರಯತ್ನ ನಡೆಸಿದ್ದ ಅವರು ಇದೀಗ ಪಕ್ಷದ ಇತರ ನಾಯಕರೊಂದಿಗೆ ವರಿಷ್ಠರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಆರಂಭಿಸಿದ್ದಾರೆ.