ಸಾರಾಂಶ
ರಾಯಚೂರು, ಸಿಂಧನೂರು, ದೇವದುರ್ಗ, ಲಿಂಗಸಗೂರಿನಲ್ಲಿ ಕೈ ಅಭ್ಯರ್ಥಿಗಳು ಜಯಭೇರಿ
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಯಲ್ಲಿ ಎರಡು ನಗರಸಭೆ ಹಾಗೂ ಎರಡು ಪುರಸಭೆ ಸೇರಿ ನಾಲ್ಕು ಸ್ಥಾನಗಳಲ್ಲಿ ಮೂರು ಕಡೆ ಚುನಾವಣೆ ನಡೆದರೆ, ಒಂದು ಕಡೆ ಅವಿರೋಧ ಆಯ್ಕೆ ನಡೆದಿದ್ದು ಎಲ್ಲ ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ.
ರಾಯಚೂರು ನಗರಸಭೆಯ 12 ನೇ ವಾರ್ಡ್, ಸಿಂಧನೂರಿನ 22ನೇ ವಾರ್ಡ್, ದೇವದುರ್ಗದ 5ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಲಿಂಗಸೂಗೂರು 19 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದಾರೆ. ರಾಯಚೂರಿನ ನಗರಸಭೆ 12ನೇ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪವನ್ ಕುಮಾರ ಎಂ. ಗೆಲುವು ಸಾಧಿಸಿದ್ದಾರೆ. ಈ.ವಿನಯಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈಚೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ 2627 ಮತಗಳನ್ನು ಪಡೆದರೆ ಜೆಡಿಎಸ್ ಅಭ್ಯರ್ಥಿ ರಹಿಂ ಖಾನ್ 359 ಮತ ಹಾಗೂ ಪಕ್ಷೇತರ ಅಭ್ಯರ್ಥಿ ನೂರ್ ಪಾಷಾ 140 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೆಡಿಎಸ್‌ಗೆ ಪರೋಕ್ಷ ಬೆಂಬಲ ನೀಡಿತ್ತು. ಆದರೂ ಫಲ ನೀಡಿಲ್ಲ. 18 ನೋಟಾ ಮತಗಳು ಚಲಾವಣೆಯಾಗಿದೆ.ಸಿಂಧನೂರು ನಗರಸಭೆಯ ವಾರ್ಡ್ ನಂ.22ಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಬೇದಾ ಬೇಗಂ ಗೆಲುವು ಸಾಧಿಸಿದ್ದಾರೆ. ಸದಸ್ಯ ಮುನೀರಪಾಷಾ ನಿಧನ ಹಿನ್ನೆಲೆ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನಿಂದ ಮುನೀರ ಪಾಷಾ ಪತ್ನಿ ಅಬೇದಾ ಬೇಗಂರಿಗೆ ಟಿಕೆಟ್ ಕೊಟ್ಟಿತ್ತು. ಬಿಜೆಪಿಯಿಂದ ಮಲ್ಲಿಕಾರ್ಜುನ ಕಾಟಗಲ್, ಜೆಡಿಎಸ್‌ನಿಂದ ಎಂ.ಮಹಿಬೂಬ, ಎಸ್ಡಿಪಿಐನಿಂದ ಅಬ್ದುಲ್ ರಿಯಾಜ್ ಬುಡ್ಡಣ್ಣಿ ಸ್ಪರ್ಧಿಸಿದ್ದರು. ಚಲಾವಣೆಯಾದ ಒಟ್ಟು 1150 ಮತಗಳ ಪೈಕಿ, ಅಬೇದಾಬೇಗಂ 744, ಮಲ್ಲಿಕಾರ್ಜುನ ಕಾಟಗಲ್ 105, ಎಂ.ಮಹಿಬೂಬ ಅವರಿಗೆ 266, ಅಬ್ದುಲ್ ರಿಯಾಜ್ ಬುಡ್ಡಣ್ಣಿ ಅವರು 29 ಮತಗಳನ್ನು ಪಡೆದರೆ, 6 ಮತಗಳು ನೋಟಾಕ್ಕೆ ಬಿದ್ದಿವೆ. ಕಾಂಗ್ರೆಸ್ ಅಭ್ಯರ್ಥಿ 478 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.ಇನ್ನೂ ದೇವದುರ್ಗ ಪುರಸಭೆಯ ಐದನೇ ವಾರ್ಡ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕೋಬ 387 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪ್ರಭು 262 ಮತಗಳು, ಬಿಜೆಪಿಯ ಸಂಜೀವ 133 ಮತ ಪಡೆದಿದ್ದಾರೆ. ಇನ್ನೂ ಲಿಂಗಸಗೂರು ಪುರಸಭೆಯ 19 ವಾರ್ಡ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಮ್ಮ ಅಮರಪ್ಪ ಕೊಡ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಹಿಂದಿನ ಸದಸ್ಯೆ ಕುಪ್ಪಮ್ಮ ಕೊಡ್ಲಿ ಮೃತಪಟ್ಟಿದ್ದು, ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಐವರು ಉಮೇದುವಾರಿಕೆ ಸಲ್ಲಿಸಿದ್ದರು. ನಾಲ್ವರು ನಾಮಪತ್ರ ಹಿಂಪಡೆದ ಕಾರಣಕ್ಕೆ ಅವಿರೋಧ ಆಯ್ಕೆಯಾಗಿತ್ತು.