ವಸತಿ ಶಾಲೆಯಲ್ಲಿ ಸ್ಥಳೀಯ ಮಕ್ಕಳಿಗೆ ಶೇ. 75 ಆದ್ಯತೆ

| Published : May 22 2024, 12:53 AM IST / Updated: May 22 2024, 12:54 AM IST

ಸಾರಾಂಶ

ವಸತಿ ಶಾಲೆಗಳಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ಶೇ. 75ರಷ್ಟು ರಾಜ್ಯದ ಉಳಿದ ಭಾಗದ ಮಕ್ಕಳಿಗೆ ಶೇ. 25ರಷ್ಟು ಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಲಾಗಿದೆ.

ರಾಜ್ಯದ ಮಕ್ಕಳಿಗೆ ಸಿಹಿ ಕೊಡುಗೆ । ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪ್ರಸ್ತಾವನೆ । ರಾಜ್ಯ ಸರ್ಕಾರ ಆದೇಶ

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕನ್ನಡಪ್ರಭ ವಾರ್ತೆ ಕುಕನೂರು

ಮೆರಿಟ್ ಬಂದಿಲ್ಲ ಎಂದು ವಸತಿ ಶಾಲೆಗಳ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಸ್ಥಳೀಯ ಮಕ್ಕಳಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ವಸತಿ ಶಾಲೆಗಳಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ಶೇ. 75ರಷ್ಟು ರಾಜ್ಯದ ಉಳಿದ ಭಾಗದ ಮಕ್ಕಳಿಗೆ ಶೇ. 25ರಷ್ಟು ಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಲಾಗಿದೆ.

ಗಮನ ಸೆಳೆದ ಶಾಸಕ:

ನಂಜುಂಡಪ್ಪ ಸಮಿತಿಯ ವರದಿಯಲ್ಲಿರುವ ೩೯ ತಾಲೂಕುಗಳ ಬಹಳಷ್ಟು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ಅವಕಾಶ ದೊರೆಯದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದು ಪ್ರಾದೇಶಿಕ ಅಸಮತೋಲನಕ್ಕೂ ಕಾರಣವಾಗಿದೆ. ರಾಜ್ಯಾದ್ಯಂತ ಆನ್‌ಲೈನ್ ಪರೀಕ್ಷೆ ನಡೆಸಿ ಮೇರಿಟ್ ಹಾಗೂ ಜಾತಿವಾರು ಲೆಕ್ಕಾಚಾರದ ಮೇಲೆ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಕೊಡಲಾಗುತ್ತಿದೆ. ಇದರಿಂದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಅತ್ಯಂತ ಹಿಂದುಳಿದ ತಾಲೂಕುಗಳ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಶಾಸಕ ರಾಯರೆಡ್ಡಿ ಸಿಎಂಗೆ ಪತ್ರ ಬರೆದಿದ್ದರು. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮೀಸಲಾತಿ ಹಂಚಿಕೆ ಕುರಿತು ಪ್ರಸ್ತಾಪಿಸಲಾಗಿತ್ತು.

ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್, ವಾಜಪೇಯಿ ಸೇರಿದಂತೆ ಇತರ ವಸತಿ ಶಾಲೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಆದ್ಯತೆ ಮೇಲೆ ವಸತಿ ನಿಲಯಗಳಲ್ಲಿ ಪ್ರವೇಶ ಕಲ್ಪಿಸಿಕೊಡುವಂತೆ ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರು ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರ ಗ್ರೀನ್ ಸ್ನೀಗಲ್ ನೀಡಿದೆ.

ಇದರಿಂದ ರಾಜ್ಯದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ತಮ್ಮ ತಾಲೂಕಿನಲ್ಲಿರುವ ವಸತಿ ಶಾಲೆಗಳಲ್ಲಿ ಅವಕಾಶ ದೊರೆತಂತಾಗಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿನ ವಸತಿ ಶಾಲೆಗಳಲ್ಲಿ ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದಿಂದ ೬ ನೇ ತರಗತಿಗೆ ಈಗಾಗಲೇ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿವೆ. ಈ ಹಿನ್ನೆಲೆ ಸ್ಥಳೀಯ ಅಭ್ಯರ್ಥಿಗಳಿಗೆ ಶೇ. ೭೫ ಹಾಗೂ ಜಿಲ್ಲೆಯ ಅನ್ಯ ತಾಲೂಕಿನ ಅಭ್ಯರ್ಥಿಗಳಿಗೆ ಶೇ.೨೫ರ ಅನುಪಾತ ಜಾರಿ ಮಾಡಿ ಸರ್ಕಾರ ರಾಜ್ಯಾದ್ಯಂತ ಏಕರೂಪ ಆದೇಶ ಜಾರಿ ಮಾಡಿದೆ.

ಆದೇಶದಿಂದ ಇನ್ನು ಮುಂದೆ ಪಾಲಕರು ತಮ್ಮ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಚುನಾಯಿತ ಪ್ರತಿನಿಧಿಗಳ ಶಿಫಾರಸ್ಸು ಪತ್ರ ಪಡೆಯುವುದಕ್ಕೆ ಅಲೆದಾಟ ನಡೆಸುವುದು ತಪ್ಪಿದಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಸಿಎಂಗೆ ಪತ್ರ ಬರೆದಿದ್ದೆ. ನನ್ನ ಪತ್ರಕ್ಕೆ ಸ್ಪಂದಿಸಿರುವ ಸಿಎಂ ರಾಜ್ಯದ ನಾನಾ ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ಅನ್ವಯವಾಗುವ ನಿಟ್ಟಿನಲ್ಲಿ ಏಕರೂಪದ ಆದೇಶ ಹೊರಡಿಸಿದ್ದಾರೆ. ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಆದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಅವಕಾಶ ದೊರೆಯಲಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.