ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ

| Published : Apr 11 2025, 12:35 AM IST

ಸಾರಾಂಶ

ಕಳೆದ ಸಲ ದಿನಕ್ಕೆ ₹೩೪೯ ನೀಡಲಾಗುತಿತ್ತು. ಏ.೧ರಿಂದ ನರೇಗಾ ಯೋಜನೆಯಡಿ ಕಾಮಗಾರಿ ನಿರ್ವಹಿಸುವ ಕೂಲಿಕಾರರಿಗೆ ದಿನಕ್ಕೆ ₹೩೭೦ ನೀಡಲಾಗುತ್ತದೆ. ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಿ, ದೀರ್ಘ ಕಾಲ ಬಾಳಿಕೆ ಬರುವ ಸಮುದಾಯ ಸ್ವತ್ತುಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸುವ ಮೂಲಕ ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ನರೇಗಾ ಸಹಕಾರಿಯಾಗಿದೆ.

ಕೊಪ್ಪಳ(ಯಲಬುರ್ಗಾ):

ನರೇಗಾ ಯೋಜನೆಯಡಿ ನಾನಾ ಕಾಮಗಾರಿ ಆರಂಭಿಸಲಾಗಿದ್ದು, ಕೂಲಿಕಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಪಂ ನರೇಗಾ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಹೇಳಿದರು.

ತಾಲೂಕಿನ ಮುರಡಿ ಗ್ರಾಪಂ ವ್ಯಾಪ್ತಿಯ ನರಸಾಪುರ ಗ್ರಾಮದಲ್ಲಿ 2025-26ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕಳೆದ ಸಲ ದಿನಕ್ಕೆ ₹೩೪೯ ನೀಡಲಾಗುತಿತ್ತು. ಏ.೧ರಿಂದ ನರೇಗಾ ಯೋಜನೆಯಡಿ ಕಾಮಗಾರಿ ನಿರ್ವಹಿಸುವ ಕೂಲಿಕಾರರಿಗೆ ದಿನಕ್ಕೆ ₹೩೭೦ ನೀಡಲಾಗುತ್ತದೆ. ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಿ, ದೀರ್ಘ ಕಾಲ ಬಾಳಿಕೆ ಬರುವ ಸಮುದಾಯ ಸ್ವತ್ತುಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸುವ ಮೂಲಕ ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ನರೇಗಾ ಸಹಕಾರಿಯಾಗಿದೆ ಎಂದರು.

ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸ ನೀಡಲಾಗುತ್ತಿದೆ‌. ಅರ್ಹ ಕುಟುಂಬಕ್ಕೆ ₹ 5 ಲಕ್ಷ ಮಿತಿಯೊಳಗೆ ವೈಯಕ್ತಿಕ ಕಾಮಗಾರಿ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಪುರುಷ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ‌ವೇತನ ನೀಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ. 50ರಷ್ಟು ರಿಯಾಯಿತಿ ಇದೆ ಎಂದರು.

ನರೇಗಾದಡಿ ವೈಯಕ್ತಿಕ ಕಾಮಗಾರಿಗಳಾದ ಬಚ್ಚಲು ಗುಂಡಿ, ಎರೆಹುಳು ತೊಟ್ಟಿ, ದನದ ಕೊಟ್ಟಿಗೆ, ಕುರಿಶೆಡ್, ಕೋಳಿಶೆಡ್, ತೋಟಗಾರಿಕಾ ಬೆಳೆಗಳಾದ ಮಾವು, ಸೀಬೆ, ಪೇರಲ, ಪಪ್ಪಾಯ, ದಾಳಿಂಬೆ ಹಾಗೂ ಇನ್ನಿತರೆ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರು.

ಬಳಿಕ ಶಾಲಾಭಿವೃದ್ಧಿ ಕಾಮಗಾರಿಗಳಾದ ಶೌಚಾಲಯ, ಅಡುಗೆ ಕೋಣೆ, ಶಾಲಾ ತಡೆಗೋಡೆ ಮುಂತಾದ ಕಾಮಗಾರಿ ಪರಿಶೀಲನೆ ನಡೆಸಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಪಿಡಿಒ ಪುಷ್ಪಲತಾ ಅವರಿಗೆ ಸೂಚಿಸಿದರು.

ಈ ಸಂದರ್ಭ ತಾಪಂ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಪಿಡಿಒ ಪುಷ್ಪಲತಾ, ತಾಂತ್ರಿಕ ಸಹಾಯಕ ವಿಜಯ್ ಬಳಿಗಾರ, ಡಿಇಒ ರಮೇಶ, ಬಿಎಫ್‌ಟಿ ಬಸೆಟೆಪ್ಪ ಅಂಗಡಿ, ಕಾಯಕ ಬಂಧುಗಳು, ಕೂಲಿಕಾರರಿದ್ದರು.