ಪಾಲಿಕೆಗೆ ಲೋಕಾ ಅಧಿಕಾರಿಗಳು ದಿಢೀರ್‌ ದಾಳಿ

| Published : May 29 2024, 01:02 AM IST

ಸಾರಾಂಶ

ಕಡತ ವಿಲೇವಾರಿಯಲ್ಲಿ ವಿಳಂಬ, ನಿಗದಿತ ಶುಲ್ಕಕ್ಕಿಂತ ಹೆಚ್ಚಿಗೆ ಹಣ ವಸೂಲಿ, ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸದ ಸಿಬ್ಬಂದಿ ಸೇರಿದಂತೆ ವಿವಿಧ ದೂರುಗಳ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಡತ ವಿಲೇವಾರಿಯಲ್ಲಿ ವಿಳಂಬ, ನಿಗದಿತ ಶುಲ್ಕಕ್ಕಿಂತ ಹೆಚ್ಚಿಗೆ ಹಣ ವಸೂಲಿ, ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸದ ಸಿಬ್ಬಂದಿ ಸೇರಿದಂತೆ ವಿವಿಧ ದೂರುಗಳ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ.

ಮಹಾನಗರ ಪಾಲಿಕೆ ಕಚೇರಿ ಬಾಗಿಲು ತೆರೆಯುತ್ತಿದ್ದಂತೆ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಹನುಮಂತರಾಯ ನೇತೃತ್ವದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ನಿರಂಜನ ಪಾಟೀಲ, ರವಿಕುಮಾರ ಧರ್ಮಟ್ಟಿ ಸೇರಿದಂತೆ ಮೂವರು ಉಪಾಧೀಕ್ಷಕರು ಹಾಗೂ ಮೂವರು ಇನ್‌ಸ್ಪೆಕ್ಟರ್‌ಗಳ ತಂಡ ಪಾಲಿಕೆ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಈ ವೇಳೆ ಪೊಲೀಸ್‌ ಅಧೀಕ್ಷಕ ಹನಮಂತರಾಯ ಲೆಕ್ಕಪತ್ರ ಶಾಖೆ ಹಾಗೂ ನಗರ ಯೋಜನಾ ಶಾಖೆಯಲ್ಲಿನ ಕಡತಗಳನ್ನು ಪರಿಶೀಲನೆ ನಡೆಸಿದರು.ಪೊಲೀಸ್‌ ಇನ್‌ಸ್ಪೆಕ್ಟರ್‌ ನಿರಂಜನ ಪಾಟೀಲ ನೇತೃತ್ವದ ತಂಡ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣಾ ವಿಭಾಗದಲ್ಲಿ, ಪೊಲೀಸ್‌ ಇನ್‌ಸ್ಪೆಕ್ಟರ್ ರವಿಕುಮಾರ ಧರ್ಮಟ್ಟಿ ನೇತೃತ್ವದ ತಂಡ ಆರೋಗ್ಯ ಶಾಖೆಯಲ್ಲಿ ತಡತ ಪರಿಶೀಲನೆ ವೇಳೆ ಸಾರ್ವಜನಿಕರ ದೂರುಗಳನ್ನು ಆಲಿಸಿದರು. ಇನ್ನುಳಿದ ಅಧಿಕಾರಿಗಳು ಲೋಕೋಪಯೋಗಿ, ತೆರಿಗೆ ವಿಭಾಗ, ಆಶ್ರಯ ವಿಭಾಗ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದರು.

ಸಾರ್ವಜನಿಕ ಕುಂದುಕೊರತೆಯಲ್ಲಿನ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮಹಾನಗರ ಪಾಲಿಕೆ ಕಚೇರಿಯಲ್ಲಿ ಇಂಚಿಂಚು ಜಾಲಾಡಿದರು. ಈ ವೇಳೆ ಜನನ ಮತ್ತು ಮರಣ ಪತ್ರ ವಿತರಣೆ ಶಾಖೆಯಲ್ಲಿ ನಿಗದಿತ ಶುಲ್ಕಕ್ಕಿಂತ ಮನಬಂದಂತೆ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿರುವ ಕುರಿತು ಸ್ಥಳದಲ್ಲಿದ್ದ ಸಾರ್ವಜನಿಕರೇ ನೇರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ಹೇಳಿದರು.ಪಾಲಿಕೆ ಸಿಬ್ಬಂದಿ ವಿರುದ್ಧ ಕಿಡಿ:

ಈ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು, ಯಾವ ಪ್ರಮಾಣ ಪತ್ರಕ್ಕೆ ಎಷ್ಟು ಶುಲ್ಕ ಇದೆ ಎಂಬುವುದರ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ₹2 ರಿಂದ ₹5 ರವರೆಗೆ ಶುಲ್ಕ ಇದ್ದು, ಸಾರ್ವಜನಿಕರಿಂದ ₹20 ರಿಂದ ₹ 30 ವಸೂಲಿ ಮಾಡುತ್ತಿರುವುದು ಹಾಗೂ ಶುಲ್ಕ ಪಾವತಿಸಿದ ರಶೀದಿ ಸಾರ್ವಜನಿಕರಿಗೆ ನೀಡದಿರುವುದು ಮೇಲ್ನೋಟಕ್ಕೆ ಕಂಡು ಬಂತು. ಇದರಿಂದ ಅಸಮಾಧಾನಗೊಂಡ ಲೋಕಾಯುಕ್ತ ಅಧಿಕಾರಿಗಳು ಅಲ್ಲಿನ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಶುಲ್ಕಕ್ಕಿಂತ ಹೆಚ್ಚಿಗೆ ಪಡೆದ ಹಣ ಎಲ್ಲಿ ಹೋಗುತ್ತದೆ ಎಂದು ಪ್ರಶ್ನಿಸಿ ಬಿಸಿ ಮುಟ್ಟಿಸಿದರು.ಜತೆಗೆ ಈ ವಿಭಾಗದ ಹೊರಗಡೆ ಸಾರ್ವಜನಿಕರಿಗೆ ಕಾಣುವಂತೆ ನಿಗದಿಪಡಿಸಿದ ಶುಲ್ಕದ ಮಾಹಿತಿ ಫಲಕ ಅಳವಡಿಸಬೇಕು. ಶುಲ್ಕ ಪಾವತಿಗೆ ಕ್ಯೂಆರ್‌ ಕೋಡ್‌ ವ್ಯವಸ್ಥೆ ಮಾಡಿದಲ್ಲಿ ಶುಲ್ಕ ನೇರವಾಗಿ ಪಾಲಿಕೆ ಖಾತೆಗೆ ಜಮೆಯಾಗಲಿದೆ. ಇದರಿಂದ ಸಾರ್ವಜನಿಕರಿಗಾಗಲಿ ಅಥವಾ ಪಾಲಿಕೆ ಸಿಬ್ಬಂದಿಗಾಗಲಿ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ಎಂದರು. ಬೆಳಗ್ಗೆ 9.30ರಿಂದ ಕಡತ ಪರಿಶೀಲನೆ ಕಾರ್ಯ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು ಸಂಜೆ 5 ಗಂಟೆಯವರೆಗೂ ನಡೆಸಿದರು. ಲೋಕಾಯುಕ್ತ ಅಧಿಕಾರಿಗಳ ಶಾಕ್‌ನಿಂದಾಗಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಂಗಾಲಾಗಿದ್ದಾರೆ. ಕೆಲಸದ ನಿಮಿತ್ತ ಪಾಲಿಕೆಗೆ ಆಗಮಿಸಿದ್ದ ನಗರದ ನಿವಾಸಿ ಕಮರ್ ಬೇಗ್ ಮಿರ್ಜಾ ಮಾತನಾಡಿ, ಬೆಳಗ್ಗೆ 7ರಿಂದ ಜನರು ಪ್ರಮಾಣ ಪತ್ರಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಜನರು ಗಂಟೆಗಟ್ಟಲೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಸಿಬ್ಬಂದಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸರ್ಕಾರಿ ಶುಲ್ಕ ₹2 ರಿಂದ ₹5 ಇದ್ದರೂ ಜನರ ಕಡೆಯಿಂದ ಹೆಚ್ಚಿಗೆ ಹಣ ಪಡೆದು ರಶೀದಿ ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.ಸ್ಥಳೀಯ ನಿವಾಸಿ ಪ್ರತಾಪ ಶ್ರೇಯಕರ ಮಾತನಾಡಿ, ಇನ್ನು ಪ್ರಮಾಣ ಪತ್ರಗಳನ್ನು ಪಡೆಯಬೇಕಾದರೆ ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದು, ಸರಿಯಾಗಿ ಹೆಸರುಗಳನ್ನ ಬರೆದು ಅರ್ಜಿ ಸಲ್ಲಿಸಿದರೂ, ಅದರಲ್ಲಿ ಅನೇಕ ಲೋಪದೋಷಗಳು ಕಂಡುಬರುತ್ತವೆ. ಮತ್ತೆ ಅರ್ಜಿ ಮಾಡಿದಾಗ ಸಕಾಲದಲ್ಲಿ ಪ್ರಮಾಣ ಪತ್ರ ಸಿಗದೇ ಮತ್ತೆ ತಿರುಗಾಡುವುದರ ಜತೆಗೆ ಪರಿತಪಿಸುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.ನಗರ ಸೇವಕ ಹನುಮಂತ ಕೊಂಗಾಲಿ ಮಾತನಾಡಿ, ಪಾಲಿಕೆ ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಕೈಗೊಂಬೆಗಳಾಗಿದ್ದು, ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದರೂ ನಗರ ಸೇವಕರ ಮಾತು ಕೇಳುತ್ತಿಲ್ಲ ಎಂದು ಆರೋಪಿಸಿದರು. ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಿರ್ಮಾಣವಾಗಿದ್ದು ಮುಂದೊಂದು ದಿನ ಸಿಬಿಐ ದಾಳಿಯಾದರೂ ಆಶ್ಚರ್ಯವಿಲ್ಲ. ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.