ಚೌಲಗೆರೆ ಟೋಲ್‌ನಲ್ಲಿ ಸ್ಥಳೀಯರಿಂದಲೂ ಟೋಲ್ ವಸೂಲಿ

| Published : Jan 03 2025, 12:30 AM IST

ಸಾರಾಂಶ

ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ ಚೌಲಗೆರೆ ಟೋಲ್‌ನಲ್ಲಿ, ಸ್ಥಳೀಯರಿಂದ ಟೋಲ್ ವಸೂಲಿ ಮಾಡುತ್ತಿದ್ದು ಈ ಬಗ್ಗೆ ಸ್ಥಳೀಯರು ಹಾಗೂ ಟೋಲ್ ಸಿಬ್ಬಂದಿ ನಡುವೆ ಪ್ರತಿನಿತ್ಯ ಜಗಳವಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ತಾಲೂಕು ಕರವೇ ಅಧ್ಯಕ್ಷ ಎಚ್ ವಿ ರಾಘವೇಂದ್ರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸ್ಥಳೀಯರಿಂದ ಯಾವುದೇ ಕಾರಣಕ್ಕೂ ಸುಂಕ ವಸೂಲಿ ಮಾಡಿದಂತೆ ಅಧಿಕಾರಿಗಳಿಗೆ ತಿಳಿಸಿದರು. ಟೋಲ್‌ನಲ್ಲಿ ಪ್ರತಿದಿನ ವಸೂಲಾತಿಗೆ ಸಂಬಂಧವಾಗಿ ಒಂದಿಲ್ಲೊಂದು ಜಗಳಗಳು ನಡೆಯುತ್ತಿದ್ದು, ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ ಚೌಲಗೆರೆ ಟೋಲ್‌ನಲ್ಲಿ, ಸ್ಥಳೀಯರಿಂದ ಟೋಲ್ ವಸೂಲಿ ಮಾಡುತ್ತಿದ್ದು ಈ ಬಗ್ಗೆ ಸ್ಥಳೀಯರು ಹಾಗೂ ಟೋಲ್ ಸಿಬ್ಬಂದಿ ನಡುವೆ ಪ್ರತಿನಿತ್ಯ ಜಗಳವಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ತಾಲೂಕು ಕರವೇ ಅಧ್ಯಕ್ಷ ಎಚ್ ವಿ ರಾಘವೇಂದ್ರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸ್ಥಳೀಯರಿಂದ ಯಾವುದೇ ಕಾರಣಕ್ಕೂ ಸುಂಕ ವಸೂಲಿ ಮಾಡಿದಂತೆ ಅಧಿಕಾರಿಗಳಿಗೆ ತಿಳಿಸಿದರು.

ಕಳೆದ ಡಿಸೆಂಬರ್ 23ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ಶ್ರೇಯಸ್ ಪಟೇಲ್ ಅಧ್ಯಕ್ಷತೆಯಲ್ಲಿ, ಕರವೇ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು,ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ, ಕಂದಲಿಯಿಂದ ಬಾಗೆ ಗ್ರಾಮದವರೆಗೂ, ಸುಮಾರು 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನರಿಂದ, ಸುಂಕ ವಸೂಲಾತಿ ಮಾಡಬಾರದು, ಹಾಗೂ ಶೀಘ್ರ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಈವರೆಗೆ ಇದು ಕಾರ್ಯರೂಪಕ್ಕೆ ಬಂದಿಲ್ಲ. ಟೋಲ್‌ನಲ್ಲಿ ಪ್ರತಿದಿನ ವಸೂಲಾತಿಗೆ ಸಂಬಂಧವಾಗಿ ಒಂದಿಲ್ಲೊಂದು ಜಗಳಗಳು ನಡೆಯುತ್ತಿದ್ದು, ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಜಿಲ್ಲಾ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ, ಕವಡೆ ಕಾಸಿನ ಬೆಲೆ ಇಲ್ಲವೇ, ಹೀಗಾದರೆ ಜನರು ಯಾರ ಬಗ್ಗೆ ನಂಬಿಕೆಯಿಡಬೇಕೆಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಸಂಬಂಧವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಎಚ್ ವಿ ರಾಘವೇಂದ್ರ, ಕಳೆದ ತಿಂಗಳು ನಡೆದ ಸಭೆಯಲ್ಲಿ ಕೈಗೊಂಡ ಯಾವ ತೀರ್ಮಾನಕ್ಕೂ ಈ ಟೋಲ್‌ನ ಗುತ್ತಿಗೆ ಪಡೆದಿರುವವರು ಬೆಲೆ ಕೊಡುತ್ತಿಲ್ಲ.ಇದರಿಂದಾಗಿ ಇಲ್ಲಿ ಪ್ರತಿದಿನ ಸ್ಥಳೀಯರು ಹಾಗೂ ಟೋಲ್ ಸಿಬ್ಬಂದಿಯ ನಡುವೆ ಒಂದಿಲ್ಲೊಂದು ಜಗಳ ನಡೆಯುತ್ತಿದೆ. ಅಧಿಕಾರಿಗಳು ಈವರೆಗೂ ಸಂಬಂಧಪಟ್ಟ ಗ್ರಾಮಗಳ ಪಟ್ಟಿಯನ್ನೇ ಇವರಿಗೆ ನೀಡಿಲ್ಲ. ಟೋಲ್‌ನಿಂದ ತಪ್ಪಿಸಿಕೊಳ್ಳಲು ಆಲೂರು ಮಾರ್ಗವಾಗಿ ವಾಹನಗಳು ಸಂಚರಿಸಿದರೆ ಕಿರಿದಾದ ರಸ್ತೆಯಲ್ಲಿ ಅಪಘಾತ, ಅನಾಹುತಗಳು ಸಂಭವಿಸುತ್ತವೆ. ಅಲ್ಲದೇ ಭಾರಿ ವಾಹನಗಳು ಸಂಚರಿಸಿದರೆ ರಸ್ತೆ ಹಾಳಾಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಆಲೂರು ಮುಖ್ಯ ರಸ್ತೆಯಲ್ಲಿ ಪ್ರತಿನಿತ್ಯ ಭಾರಿ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಇದರಿಂದಾಗಿ ಕೇವಲ ಒಂದು ವಾರದಲ್ಲಿ ರಸ್ತೆ ಹಾಳಾಗಿದೆ. ಸಂಸದರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶೀಘ್ರ ಇತ್ತ ಗಮನಹರಿಸಿ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡದಿದ್ದರೆ, ವಿಧಿ ಇಲ್ಲದೆ ಪುನಃ ನಾವು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅವರು ತಿಳಿಸಿದರು.