ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುಕಲ್ಲು ಒಡೆದು ಜೀವನ ಸಾಗಿಸುವ ನಮಗೆ ಯಲಹಂಕ ಗ್ರಾಮದ ಮನು ಎಂಬುವವರು ಪ್ರತಿ ತಿಂಗಳು ಇಂತಿಷ್ಟು ಹಣ ಕೊಡಬೇಕು. ಇಲ್ಲದಿದ್ದಲ್ಲಿ ಕಲ್ಲು ಒಡೆಯಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತಿದ್ದಾರೆ ಎಂದು ಬೋವಿ ಸಮಾಜದ ಕಲ್ಲು ಕೆಲಸಗಾರ ಚಂದ್ರು ಆರೋಪಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಅಜ್ಜ, ತಂದೆಯವರ ಕಾಲದಿಂದಲೂ ಕಲ್ಲು ಒಡೆದು ಜೀವನ ಸಾಗಿಸುತಿದ್ದೇವೆ. ಆದರೆ ಕೆಲ ವರ್ಷಗಳ ಹಿಂದಿನಿಂದ ಯಲಹಂಕ ಗ್ರಾಮದ ಸರ್ಕಾರಿ ಕರಾಬು ಜಾಗದಲ್ಲಿ ಅನಧಿಕೃತವಾಗಿ ಕಲ್ಲು ಒಡೆಯುತ್ತಿದ್ದೆವು. ಈ ಸಂದರ್ಭ ಅದೇ ಗ್ರಾಮದ ಮನು ಎಂಬುವವರು ಪ್ರತಿ ತಿಂಗಳು ಇಂತಿಷ್ಟು ಎಂದು ಹಣ ಪಡೆಯುತಿದ್ದರು. ಆದರೆ ವಿಷಯ ತಿಳಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ರೀತಿ ಅನಧಿಕೃತವಾಗಿ ಕಲ್ಲು ಒಡೆಯುವುದು ಕಾನೂನು ಬಾಹಿರವಾಗಿದ್ದು, ಅಧಿಕೃತವಾಗಿ ಇಲಾಖೆಯಿಂದ ಅನುಮತಿ ಪಡೆದು ಕಲ್ಲು ಒಡೆಯಿರಿ. ಇಲ್ಲದಿದ್ದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಿಳಿ ಹೇಳಿದ್ದರು. ಪರವಾನಗಿಗಾಗಿ ನಾವು ಅಧಿಕೃತವಾಗಿ ಇಲಾಖೆಗೆ ಅರ್ಜಿ ಸಲ್ಲಿಸಿ ಅನುಮತಿಗಾಗಿ ಕಾಯುತಿದ್ದೇವೆ. ಆದರೆ ಮೊದಲು ನಮ್ಮಿಂದ ಅನಧಿಕೃತವಾಗಿ ಹಣ ಪಡೆಯುತಿದ್ದ ಮನು ಎಂಬುವವರು ಈಗ ಮೊದಲಿನಂತೆ ನನಗೆ ಹಣ ಕೊಟ್ಟರೆ ಕಲ್ಲು ಒಡೆಯಲು ಬಿಡುತ್ತೇನೆ. ಇಲ್ಲದಿದ್ದಲ್ಲಿ ಸ್ಥಳಕ್ಕೆ ಹೋಗಲು ಬಿಡುವುದಿಲ್ಲ ಎಂದು ಹೆದರಿಸುತಿದ್ದಾರೆ. ಆದರೆ ನಾವು ಸರ್ಕಾರದ ನಿಯಮದಂತೆ ರಾಯಲ್ಟಿ ಕಟ್ಟಿ ಕಲ್ಲು ಒಡೆಯಲು ಬದ್ಧರಾಗಿದ್ದು ಇತರೆ ಗ್ರಾಮಸ್ಥರು ಸಂಪೂರ್ಣ ಬೆಂಬಲಿಸಿದರೂ ಮನು ಎಂಬುವವರು ಮಾತ್ರ ನನಗೆ ಹಣ ಕೊಡದೆ ಕಲ್ಲು ಒಡೆಯಲು ಬಿಡುವುದಿಲ್ಲ. ಮತ್ತು ನಿಮ್ಮ ವಿರುದ್ಧ ಕೇಸ್ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕುತಿದ್ದಾರೆ. ಆದ್ದರಿಂದ ನಮಗೆ ಇವರಿಂದ ರಕ್ಷಣೆ ಬೇಕು. ಜತೆಗೆ ಅನುಮತಿ ಪಡೆಯುವವರೆಗೂ ಅನಧಿಕೃತವಾಗಿ ಕಲ್ಲು ಒಡೆಯುವುದಿಲ್ಲ ಎಂದರು. ಸುದ್ದಿಗೋಷ್ಟಿಯಲ್ಲಿ ಬೋವಿ ಸಮಾಜದ ಹೊಸ ನಗರದ ಕಲ್ಲು ಕೆಲಸಗಾರರಾದ ಅರುಣ್, ಧರ್ಮರಾಜು, ಬಾಬು, ಸುರೇಶ್ ಇದ್ದರು.