ಸಾರಾಂಶ
ಕನಕಪುರ: ಕನಕಪುರ-ಬೆಂಗಳೂರು ರಸ್ತೆಯ ಸೋಮನಹಳ್ಳಿ ಬಳಿ ನಿರ್ಮಿಸಿರುವ ಟೋಲ್‌ನಲ್ಲಿ ಸ್ಥಳೀಯರಿಗೆ ವಿನಾಯ್ತಿ ನೀಡದೆ ಶುಲ್ಕ ವಿಧಿಸುತ್ತಿರುವ ಕ್ರಮ ಖಂಡಿಸಿ ರಾಜ್ಯ ರೈತ ಹಿತರಕ್ಷಣಾ ಸಂಘ ಮತ್ತು ಸ್ಥಳೀಯರ ನೇತೃತ್ವದಲ್ಲಿ 3 ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ರಸ್ತೆ ಟೋಲ್ ಶುಲ್ಕ ವಿಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಸ್ಥಳೀಯರ ಮೂಲಭೂತ ಹಕ್ಕಿಗೆ ವಿರುದ್ಧವಾಗಿ ಶುಲ್ಕ ವಿಧಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಸರ್ಕಾರಗಳು ಜನರ ಹಿತಾಸಕ್ತಿಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕೆ ಹೊರತು ಕಿತ್ತು ತಿನ್ನುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯರು ನಡೆಸುತ್ತಿರುವ ಹೋರಾಟ ನ್ಯಾಯೋಚಿತವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಟೋಲ್ ನಿರ್ಮಾಣವಾದ ದಿನದಿಂದಲೂ ಸ್ಥಳೀಯರ ಹಿತಾಸಕ್ತಿ ಕಾಪಾಡುವುದು ನನ್ನ ಕರ್ತವ್ಯ ಎಂದು ಭಾವಿಸಿ ಎಲ್ಲಾ ಸಭೆಗಳಲ್ಲಿ ನಾನು ಭಾಗವಹಿಸಿದ್ದು ಸ್ಥಳೀಯರು ಹಲವಾರು ಬಾರಿ ದಿನನಿತ್ಯ ಓಡಾಡುತ್ತಿರುತ್ತಾರೆ. ಅವರ ಬಳಿ ಶುಲ್ಕ ವಸೂಲಿ ಮಾಡುವುದು ಯಾವ ನ್ಯಾಯ? ಅಲ್ಲದೆ ಇಲ್ಲಿ ಹಲವು ಗೂಂಡಾಗಳನ್ನು ಇಟ್ಟುಕೊಂಡು ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡುತ್ತಿರುವ ಬಗ್ಗೆ ದೂರುಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಜನರ ಮೇಲೆ ಕೈ ಮಾಡಿದರೆ ನೋಡುತ್ತಾ ಕೂರುವ ಜಾಯಮಾನ ನನ್ನದಲ್ಲ ಎಂದು ಖಂಡಿಸಿದರು.ಜಯ ಕರ್ನಾಟಕ ಜನಪರ ವೇದಿಕೆಯ ಕುಮಾರಸ್ವಾಮಿ ಮಾತನಾಡಿ, ರೈತರಿಗೆ ಸಾಗುವಳಿ ನೀಡಲು 18 ಕಿಲೋ ಮೀಟರ್ ವ್ಯಾಪ್ತಿ ಎಂಬ ಕಾನೂನಿನ ನೆಪ ಹೇಳುತ್ತಾರೆ. ಆದರೆ ಟೋಲ್ ನಿರ್ಮಾಣಕ್ಕೆ ಈ ನಿಯಮ ಅನ್ವಹಿಸುವುದಿಲ್ಲವೇ? ಸರ್ಕಾರ ಇಲ್ಲಿ ಜನರನ್ನು ಹಿಂಸಿಸಿ ಟೋಲ್ ನೆಪದಲ್ಲಿ ಹಗಲು ದರೋಡೆ ಮಾಡಿ ಸಾಧನಾ ಸಮಾವೇಶ ನಡೆಸುತ್ತಿದ್ದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕೆ ಕೆಳ ಹಂತದ ಅಧಿಕಾರಿಗಳು ಆಗಮಿಸಿದಾಗ ಪ್ರತಿಭಟನಾಕಾರರು ಆಕ್ರೋಶಗೊಂಡು ರೈತ ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ ನದಿಂಪಾಷಾ, ರಾಜ್ಯ ಸಲಹೆಗಾರ ಪ್ರಶಾಂತ್ ಹೊಸದುರ್ಗ, ವೆಂಕಟೇಶ್, ಕಾಣಿಕ್, ಮಂಜು ಮೈಮೇಲೆ ಕಪ್ಪು ಇಂಜಿನ್ ಆಯಿಲ್ ಬಳಿದುಕೊಂಡು ರಸ್ತೆಗಿಳಿದ ಸಾವಿರಾರು ಜನ ಜಾನುವಾರು ಹಾಗೂ ವಾಹನಗಳನ್ನು ರಸ್ತೆಯಲ್ಲಿ ಕೂಡಿಸಿಕೊಂಡು ಮೂರು ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದರು. ಹತ್ತು ಕಿಮೀ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿತ್ತು.ಉಪ ವಿಭಾಗಾಧಿಕಾರಿಗಳು, ಹಾಗೂ ತಹಸೀಲ್ದಾರ್ ಶ್ರೀನಿವಾಸ್ ನಾಳೆ ಸಭೆ ಕರೆಯುವುದಾಗಿ ತಿಳಿಸಿದರೂ ಪ್ರತಿಭಟನಾಕಾರರು ಒಪ್ಪಲಿಲ್ಲ. ಕೊನೆಗೆ ಕೆಲವರ ಮೇಲೆ ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು. ರೈತ ಹಿತರಕ್ಷಣಾ ಸಂಘ ನಾಳಿನ ಸಭೆಯಲ್ಲಿ ಸ್ಥಳಿಯರಿಗೆ ಸರ್ವೀಸ್ ರಸ್ತೆ ಒದಗಿಸಿ ಕೊಡಲು ಮುಂದಾಗದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡ ಪುಟ್ಟಸ್ವಾಮಿ, ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು, ವಿಜಯ್ ಕುಮಾರ್, ಪವನ್ ಕುಮಾರ್, ಮಂಜುನಾಥ್, ಸಂಪತ್, ದಲಿತ ಸಂಘಟನೆ ಪವಿತ್ರಾ, ತಬಸುಮ್ ಪಾಲ್ಗೊಂಡಿದ್ದರು.(ಒಂದು ಫೋಟೋವನ್ನು ಪ್ಯಾನಲ್‌ನಲ್ಲಿ ಬಳಸಿ)
ಕೆ ಕೆ ಪಿ ಸುದ್ದಿ 01:ಕನಕಪುರ-ಬೆಂಗಳೂರು ರಸ್ತೆಯ ಸೋಮನಹಳ್ಳಿ ಬಳಿ ನಿರ್ಮಿಸಿರುವ ಟೋಲ್‌ನಲ್ಲಿ ಸ್ಥಳೀಯರಿಗೆ ವಿನಾಯ್ತಿ ನೀಡದೆ ಶುಲ್ಕ ವಿಧಿಸುತ್ತಿರುವ ಕ್ರಮ ಖಂಡಿಸಿ ರಾಜ್ಯ ರೈತ ಹಿತರಕ್ಷಣಾ ಸಂಘ ಮತ್ತು ಸ್ಥಳೀಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.