ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ನಮಗಿರೋದು ಮೂರು ಮುಕ್ಕಾಲು ಜಮೀನು ಅದರಲ್ಲೆ ಜೀವನ ಮಾಡಬೇಕು ಕ್ರಷರ್‌ನಿಂದ ಬರುವ ದೂಳು ಈ ಭಾಗದ ರೈತರ ಬದುಕನ್ನು ಕಿತ್ತುಕೊಳ್ಳುತ್ತೆ ನೀವು 40 ಜನರಿಗೆ ಉದ್ಯೋಗ ಕೊಡಬಹುದು ಇದರಿಂದ 4000 ಜನರ ಜೀವನ ಹಾಳಾಗುತ್ತೆ ನಾವ್ಯಾರು ಕ್ರಷರ್ ಕೇಳಿಲ್ಲ ಬಲವಂತವಾಗಿ ಅನುಮತಿ ಕೊಟ್ಟರೆ ತಾಲೂಕು ಕಚೇರಿ ಎದುರು ಬಂದು ವಿಷ ಕುಡಿತೀವಿ ಎಂದು ತಾಲೂಕಿನ ಕಬ್ಬಳ ಗ್ರಾಮದ ಬಳಿ ಗಣಿಗಾರಿಕೆ ಯೋಜನಾ ಸ್ಥಳದಲ್ಲಿ ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ಸ್ಥಳೀಯರ ಅರುಹಿತ ಆಕ್ರೋಶದ ಮಾತುಗಳು.ತಾಲೂಕಿನ ಕಬ್ಬಳ ಗ್ರಾಮದ ಬಳಿ ಸರ್ವೇ ನಂ.19 (ಹೊಸ ಸರ್ವೇ ನಂ.127)ರಲ್ಲಿ 19 ಎಕರೆ ಸರ್ಕಾರಿ ಗೋಮಾಳ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಕೋರಿ ತಿರುಮಲ ಸ್ಟೋನ್ ಕ್ರಷರ್ ಮತ್ತು ಎಂ ಸ್ಯಾಂಡ್ ಯೂನಿಟ್‌ನ ಮಾಲೀಕ ಷಣ್ಮುಖ ಬೋವಿ ಸರ್ಕಾರಕ್ಕೆ 2023ರ ನವಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕಂದಾಯ ಅರಣ್ಯ ಇಲಾಖೆಗಳು 2024ರ ನವಂಬರ್‌ನಲ್ಲಿ ನಿರಪೇಕ್ಷಾಣಾ ಪತ್ರಗಳನ್ನು ನೀಡಲಾಗಿದೆ ಆದರೆ ಪರಿಸರ ಇಲಾಖೆಯ ಅನುಮತಿಗಾಗಿ ಸ್ಥಳೀಯರ ಅಭಿಪ್ರಾಯ ಅಗತ್ಯವಿರುವ ಕಾರಣ ಈ ಸಂಬಂಧ ಗುರುವಾರ ಸಾರ್ವಜನಿಕರ ಆಲಿಕೆ ಸಭೆ ಕರೆಯಲಾಗಿತ್ತು, ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿ ಕೆ.ವೆಂಕಟೇಶ್ ಅವರು ರೈತರು ಮತ್ತು ಸಾರ್ವಜನಿಕರು ತಮ್ಮ ಅಭಿಪ್ರಾಯ ಮಂಡಿಸುವಂತೆ ಹೇಳುತ್ತಿದ್ದಂತೆ ಆರಂಭದಿಂದಲೇ ರೈತರು ಕಲ್ಲುಗಣಿಗಾರಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದರು.
ಉದ್ದೇಶಿತ ಗಣಿಗಾರಿಕೆ ಸ್ಥಳದಿಂದ ಕೇವಲ 500 ಮೀ. ದೂರದಲ್ಲಿ ಇತಿಹಾಸ ಪ್ರಸಿದ್ಧ ರಂಗನಾಥಸ್ವಾಮಿ ದೇಗುಲವಿದೆ. ಈ ಪ್ರದೇಶದಲ್ಲಿ ನೂರಾರು ಕೃಷ್ಣಮೃಗಗಳು ನವಿಲುಗಳು ಸೇರಿದಂತೆ ಇತರೆ ಪ್ರಾಣಿಗಳು ವಾಸವಾಗಿವೆ. ಈ ಸ್ಥಳಕ್ಕೆ ಹೊಂದಿಕೊಂಡಂತೆ ನೂರಾರು ರೈತರ ಜಮೀನುಗಳು, ತೋಟಗಳು ಇದ್ದು, ಗಣಿಗಾರಿಕೆಯಿಂದ ಬರುವ ಧೂಳಿನಿಂದ ಬೆಳೆಗಳು ಹಾಳಾಗುತ್ತವೆ. ಅಂತರ್ಜಲ ಕುಸಿಯಲಿದೆ. 30-40 ವರ್ಷಗಳಿಂದ ಜಮೀನಿನಲ್ಲಿನ ಕಲ್ಲುಗಳನ್ನು ತೆಗೆದು, ಹದ ಮಾಡಿ, ಲಕ್ಷಾಂತರ ರು.ಸಾಲ ಮಾಡಿ ಕೊಳವೆ ಬಾವಿ ಕೊರೆಸಿ, ಟಿಸಿ ಇಟ್ಟು ತೆಂಗಿನ ಸಸಿಗಳನ್ನು ನೆಟ್ಟಿದ್ದೇವೆ. ಇದರಿಂದ ನಮ್ಮ ಬದುಕು ಭವಿಷ್ಯದಲ್ಲಿ ಚೆನ್ನಾಗಿರುತ್ತದೆ ಎಂದು ಭಾವಿಸಿದ್ದೇವೆ. ಈಗ ಈ ಜಾಗದಲ್ಲಿ ಕಲ್ಲುಗಣಿಗಾರಿಕೆ ಆರಂಭಿಸಲು ಅವಕಾಶ ನೀಡಿದರೆ ನಮ್ಮೆಲ್ಲರ ಬದುಕು ಬೀದಿಗೆ ಬರುತ್ತದೆ ಎಂದು ರೈತರು ವಿರೋಧ ವ್ಯಕ್ತಪಡಿಸಿದರು.ಈ ಹಿಂದೆ ಬ್ರಹ್ಮಲಿಂಗೇಶ್ವರ ಕ್ರಷರ್ ಇದ್ದು ಇದರಿಂದ ಸುತ್ತಮುತ್ತಲಿನ ವಾಸದ ಮನೆಗಳ ಗೊಡೆಗಳು ಬಿರುಕು ಬಿಟ್ಟು, ಮಕ್ಕಳಲ್ಲಿ ಅಂಗವೈಕಲ್ಯತೆಗೂ ಕಾರಣವಾಗಿತ್ತು. ಇದರಿಂದ ಕ್ರಷರ್ ಅನ್ನು ಸ್ಥಗಿತಗೊಳಿಸಲಾಯಿತು, ಈಗ ಮತ್ತೆ ಕ್ರಷರ್ ಆರಂಭಿಸಿದರೆ ಸಮಸ್ಯೆ ಮರುಕಳಿಸುವ ಆತಂಕವಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಇಲ್ಲಿಯೇ ತಮ್ಮ ತೀರ್ಮಾನ ತಿಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕೆ.ವೆಂಕಟೇಶ್ ಮಾತನಾಡಿ, ಇಲ್ಲಿ ಯಾವುದೇ ತೀರ್ಮಾನ ಮಾಡುವುದಿಲ್ಲ. ಸಾರ್ವಜನಿಕರು, ರೈತರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲರ ಅಹವಾಲುಗಳನ್ನು ವರದಿ ಮಾಡಿಕೊಳ್ಳಲಾಗಿದೆ. ಅದನ್ನು ಯಥಾವತ್ತಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಶೀಘ್ರದಲ್ಲಿಯೇ ಸರ್ಕಾರ ಈ ಕುರಿತು ಪ್ರಕಟಣೆ ಹೊರಡಿಸಲಿದೆ ಎಂದು ಹೇಳಿದರು.ಮನೆ ಶೌಚಾಲಯ ಕಟ್ಟಲು ಮರಳು ಸಿಗುತ್ತಿಲ್ಲ ಎಂ ಸ್ಯಾಂಡ್ ಬೇಕೆಂದರೆ ಪಕ್ಕದ ಚಿಕ್ಕಮಗಳೂರು ಜಿಲ್ಲೆಗೆ ಹೋಗಬೇಕು ಇಲ್ಲಿಯೇ ಎಂ ಸ್ಯಾಂಡ್ ಸಿಗುವಂತಾಗಬೇಕು. ಕಲ್ಲು ಗಣಿಗಾರಿಕೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೆಲವರು ಕಲ್ಲು ಗಣಿಗಾರಿಕೆ ಪರ ಮಾತನಾಡುತ್ತಿದ್ದಂತೆ ರೈತರು ತೀವ್ರಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಯಾಯಿತು.
ಸಭೆಯಲ್ಲಿ ಹಿರಿಯ ಪರಿಸರ ಅಧಿಕಾರಿ ದಾವಣಗೆರೆ ವಲಯ ರಮೇಶ್ ಡಿ.ನಾಯಕ್, ತಹಸೀಲ್ದಾರ್ ತಿರುಪತಿ ಪಾಟೀಲ್, ಅಪ್ಪರ ಭದ್ರ ಎಂಜಿನಿಯರ್ ಸುರೇಶ್, ಜಿಯಲಿಸ್ಟ್ ಪ್ರಸನ್ನ, ಕಬ್ಬಳ ಗ್ರಾಪಂ ಪಿಡಿಒ ವಸಂತ್ ಕುಮಾರ್ ಸೇರಿದಂತೆ ಕಬ್ಬಳ, ಬೊಮ್ಮೇನಹಳ್ಳಿ, ಮಲ್ಲೇನಹಳ್ಳಿ, ಹೊಸಹಟ್ಟಿ, ತುಂಬಿನಕೆರೆ, ತುಂಬಿನಕೆರೆ ಭೋವಿಹಟ್ಟಿ, ತೊಣಚೇನಹಳ್ಳಿ ಗ್ರಾಮಗಳ ನೂರಾರು ರೈತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.ಕಂಪನಿಯ ಪರವಾಗಿ ಮಾತನಾಡುವವರು ಕೊಟ್ಯಾಧಿಪತಿಗಳು, ಅವರಿಗೆ ನಮ್ಮ ಕಷ್ಟ ಗೊತ್ತಿಲ್ಲ. ಸುಮಾರು 20 ವರ್ಷಗಳಿಂದ ಕಲ್ಲುಗಳನ್ನು ಆದು ಹಾಕಿ ಕೊಳವೆಬಾವಿ ಕೊರೆಸಿ ತೆಂಗಿನ ಸಸಿಗಳನ್ನು ನೆಟ್ಟಿದ್ದೇವೆ. ಇದಕ್ಕೆ ಅನುಮತಿ ನೀಡಿದರೆ ಸರಣಿಯಾಗಿ ತಾಲೂಕು ಕಚೇರಿ ಮುಂದೆ ನೇಣು ಹಾಕಿಕೊಳ್ಳುತ್ತೇವೆ.
-ಪವಿತ್ರ, ಕಬ್ಬಳ ಗ್ರಾಮಸ್ಥರು
ಶಾಸಕರೇ ಇದನ್ನು ಬೇಡವೆಂದಿದ್ದರೆ ನಾವು ಇಲ್ಲಿಗೆ ಬರುವುದು ಅವಕಾಶ ಬರುತ್ತಿರಲಿಲ್ಲ ಶಾಸಕರು ಈ ಸಭೆಯಲ್ಲಿ ಭಾಗವಹಿಸಬೇಕಿತ್ತು. ಈ ಹಿಂದೆ ಇಲ್ಲಿ ಸಣ್ಣ ಕ್ರಷರ್ ನೆಡೆಯುತ್ತಿತ್ತು ಅದರಿಂದ ಇಲ್ಲಿಯ ಮಕ್ಕಳು ಅಂಗವಿಕಲರಾಗಿದ್ದರು ಶಾಸಕರು ನಮ್ಮ ಕಷ್ಟ ಅರಿತುಕೊಂಡು ಇದನ್ನು ನಿಲ್ಲಿಸಲಿ ಇಲ್ಲವೆ ನಮ್ಮ ಕೈಗೆ ವಿಷದ ಬಾಟಲಿ ಕೊಡಲಿ
-ಪ್ರಸಾದ್ ಕಬ್ಬಳ