ಸಾರಾಂಶ
ಮಳೆಗಾಲದಲ್ಲಿ ಕೊಳಚೆ ನೀರು ಮನೆಯ ಮುಂದೆ ಹರಿಯುತ್ತದೆ. ನಗರಸಭಾ ಅಧಿಕಾರಿಗಳಿಗೆ, ಸದಸ್ಯರು ಹಾಗೂ ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾತ್ಕಾಲಿಕವಾಗಿ ಬಡಾವಣೆಯಲ್ಲಿನ ಎಸ್‌ಟಿಪಿ ಘಟಕವನ್ನು ಸ್ವಚ್ಛಗೊಳಿಸುವ ಮೂಲಕ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ನಗರದ ಒಂದನೇ ವಾರ್ಡ್ ರಾಜೀವ್ ಗಾಂಧಿ ಬಡಾವಣೆ ವ್ಯಾಪ್ತಿಯ ಚಂದ್ರಮೌಳೇಶ್ವರ ಬಡಾವಣೆಯಲ್ಲಿ ಚರಂಡಿ ಅವ್ಯವಸ್ಥೆ ವಿರುದ್ಧ ಸ್ಥಳೀಯರು ಸೋಮವಾರ ದೊಡ್ಡಬಳ್ಳಾಪುರ ನಗರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಮುಖಂಡರು, ಕಳೆದ 4 ವರ್ಷಗಳಿಂದಲೂ ಸಮಸ್ಯೆ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆಗಾಲದಲ್ಲಿ ಕೊಳಚೆ ನೀರು ಮನೆಯ ಮುಂದೆ ಹರಿಯುತ್ತದೆ. ನಗರಸಭಾ ಅಧಿಕಾರಿಗಳಿಗೆ, ಸದಸ್ಯರು ಹಾಗೂ ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾತ್ಕಾಲಿಕವಾಗಿ ಬಡಾವಣೆಯಲ್ಲಿನ ಎಸ್‌ಟಿಪಿ ಘಟಕವನ್ನು ಸ್ವಚ್ಛಗೊಳಿಸುವ ಮೂಲಕ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಈ ಭಾಗಕ್ಕೆ ಒಳಚರಂಡಿ ಸಂಪರ್ಕ ಕಲ್ಪಿಸಿ ಶಾಶ್ವತ ಪರಿಹಾರ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದರು.ಸಮಸ್ಯೆಗೆ ಶೀಘ್ರ ಪರಿಹಾರದ ಭರವಸೆ:
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ವಡ್ಡರಹಳ್ಳಿ ಮಾತನಾಡಿ, ಸಮಸ್ಯೆ ಪರಿಹರಿಸಲು ಸ್ಥಳೀಯವಾಗಿ ಎಸ್ ಟಿ ಪಿ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಮಳೆ ಹೆಚ್ಚಾದಾಗ ಈ ಘಟಕವು ಸಂಪೂರ್ಣ ತುಂಬಿಹೋಗುತ್ತದೆ. ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರಕ್ಕೆ ಮೂರು ಹಂತದ ಒಳಚರಂಡಿ ಯೋಜನೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ತಾತ್ಕಾಲಿಕ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು ಎಂದರು.ನಗರಸಭೆ ಎಇಇ ರಾಮೇಗೌಡ, ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಗೆ ಪೂರಕವಾಗಿ ಅನುದಾನ ಬಂದ ಕೂಡಲೇ ಶಾಶ್ವತ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಸ್ಥಳೀಯರಾದ ವಸಂತ್ ಕುಮಾರ್, ನಾಗೇಶ್, ರವಿಕುಮಾರ್, ಕೆಂಪೇಗೌಡ, ಸೌಮ್ಯ, ಪ್ರಿಯಾಂಕ, ಮಂಜುಳಾ, ಶ್ರೀನಿವಾಸ, ಮಂಜುನಾಥ ಮತ್ತಿತರರು ಇದ್ದರು.