ಸಾರಾಂಶ
ದೋಣಿಗಾಲ್ ಗ್ರಾಮದಲ್ಲಿರುವ ಮಂಜ್ರಾಬಾದ್ ಕೋಟೆ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಕೋಟೆ ವೀಕ್ಷಣೆಗೆ ರಾಷ್ಟ್ರೀಯ ಹೆದ್ದಾರಿ ೭೫ ಹಾಗೂ ಕಲ್ಗಣೆ, ಹುಲ್ಲಹಳ್ಳಿ, ಕ್ಯಾನಹಳ್ಳಿ,ಕುಣಿಗಾಲ್ ಗ್ರಾಮ ಸಂಪರ್ಕಿಸುವ ರಾಜ್ಯ ಹೆದ್ದಾರಿ ೧೧೭ರಲ್ಲಿ ಪ್ರವಾಸಿಗರು ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಮಂಜ್ರಾಬಾಭಾದ್ ಕೋಟೆ ಪ್ರದೇಶದಲ್ಲಿ ನಿತ್ಯ ವಾಹನ ದಟ್ಟಣೆಯಾಗುತ್ತಿದ್ದು, ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ ಎಂದು ವಿವಿಧ ಗ್ರಾಮಸ್ಥರು ಶನಿವಾರ ದೋಣಿಗಾಲ್ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಮಂಜ್ರಾಬಾದ್ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ಸ್ಥಳೀಯರಿಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಆಗ್ರಹಿಸಿ ಮಲೆನಾಡು ಕರ್ನಾಟಕ ಸೇನೆ ನೇತೃತ್ವದಲ್ಲಿ ವಿವಿಧ ಗ್ರಾಮಸ್ಥರು ಶನಿವಾರ ದೋಣಿಗಾಲ್ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.ದೋಣಿಗಾಲ್ ಗ್ರಾಮದಲ್ಲಿರುವ ಮಂಜ್ರಾಬಾದ್ ಕೋಟೆ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಕೋಟೆ ವೀಕ್ಷಣೆಗೆ ರಾಷ್ಟ್ರೀಯ ಹೆದ್ದಾರಿ ೭೫ ಹಾಗೂ ಕಲ್ಗಣೆ, ಹುಲ್ಲಹಳ್ಳಿ, ಕ್ಯಾನಹಳ್ಳಿ,ಕುಣಿಗಾಲ್ ಗ್ರಾಮ ಸಂಪರ್ಕಿಸುವ ರಾಜ್ಯ ಹೆದ್ದಾರಿ ೧೧೭ರಲ್ಲಿ ಪ್ರವಾಸಿಗರು ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಮಂಜ್ರಾಬಾಭಾದ್ ಕೋಟೆ ಪ್ರದೇಶದಲ್ಲಿ ನಿತ್ಯ ವಾಹನ ದಟ್ಟಣೆಯಾಗುತ್ತಿದ್ದು, ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ. ಇದರಿಂದಾಗಿ ಸ್ಥಳೀಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಸರಿಯಾಗಿ ವಾಹನ ನಿಲುಗಡೆ ಮಾಡಿ ಎಂದು ಹೇಳಿದರೇ ಜಗಳ ಹಾಗೂ ಹಲ್ಲೆಗೆ ಮುಂದಾಗುವ ಪ್ರವಾಸಿಗರಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಆದ್ದರಿಂದ, ರಾಷ್ಟ್ರೀಯ ಹೆದ್ದಾರಿ ೭೫ ರ ಕಾಮಗಾರಿ ಮುಕ್ತಾಯಗೊಳ್ಳುವವರಗೆ ಕೋಟೆ ವೀಕ್ಷಣೆಗೆ ತಡೆ ಒಡ್ಡಬೇಕು. ತಪ್ಪಿದಲ್ಲಿ ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು. ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ವಿಖಾರ್ ಆಹಮ್ಮದ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಲೆನಾಡು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ, ಕುಣಿಗಾಲ್ ಪ್ರಸನ್ನ, ಗ್ರಾ.ಪಂ ಸದಸ್ಯರಾದ ಪ್ರತಾಪ್, ತಮ್ಮಯ್ಯ ವೀರಭದ್ರ, ಯಶವಂತ್ ಸೇರಿದಂತೆ ಹಲವರಿದ್ದರು.