ಸಾರಾಂಶ
ಕಾರವಾರ: ತಣ್ಣನೆ ಸುರಿಯುತ್ತಿದ್ದ ಮಳೆ, ಕುಳಿರ್ಗಾಳಿ, ಹದನಾದ ನಿದ್ದೆಯಲ್ಲಿರುವಾಗ ಭಯಾನಕ ಸದ್ದು, ನೆಲವೇ ಅದುರಿದ ಅನುಭವ. ಬೆಚ್ಚಿ ಬಿದ್ದು ಹೊರಗೋಡಿ ಬಂದಾಗ ಕಾಳಿ ಸೇತುವೆ ಕುಸಿದು ಬಿದ್ದಿತ್ತು. ನೀರು ಅಲ್ಲೋಲಕಲ್ಲೋಲವಾಗಿತ್ತು. ಕಗ್ಗತ್ತಲಿನಲ್ಲಿ ಚೀರಾಟ ಕೇಳಿಬರುತ್ತಿತ್ತು. ಇದು ಕಾಳಿ ಸೇತುವೆ ಸಮೀಪದ ನಿವಾಸಿಗಳು ಹಾಗೂ ಮೀನುಗಾರರು ಕಾಳಿ ಸೇತುವೆ ನದಿಗೆ ಉರುಳುತ್ತಿದ್ದಂತೆ ಕಂಡುಂಡ ಅನುಭವ. ಅಂತಹ ಪರಿಸ್ಥಿತಿಯಲ್ಲೂ ಎದೆಗುಂದದೆ ಸೂರಜ ಸಾರಂಗ, ಕರಣ ನಾವಗೆ, ಸತೀಶ ಚೋಪಡೆಕರ, ಕುಶಾಲಿ ಮೊರ್ಜೆ, ಸುದೇಶ ಸಾರಂಗ ಮತ್ತಿತರ ಮೀನುಗಾರರ ತಂಡ ಬೋಟ್ ಏರಿ ಚೀರಾಟ ಕೇಳಿಬಂದತ್ತ ಹೊರಟಿತು. ಸಮೀಪ ಹೋಗಿ ನೋಡಿದರೆ ಲಾರಿಯ ಶೇ. 90 ಭಾಗ ಮುಳುಗಿದೆ. ಕ್ಯಾಬಿನ್ ನ ಮೇಲ್ಭಾಗ ತುಸು ಮಾತ್ರ ಮೇಲಕ್ಕಿದೆ. ಅದರ ಮೇಲೇರಿ ಚಾಲಕ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾನೆ. ತಕ್ಷಣ ಆತನನ್ನು ಬೋಟಿಗೆ ಎಳೆದುಕೊಂಡು ಬರುತ್ತಿದ್ದಂತೆ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಸಾಥ್ ನೀಡಿದ್ದಾರೆ. ಗಾಯಾಳು ಚಾಲಕ ತಮಿಳುನಾಡಿನ ಬಾಲಮುರುಗನ್ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಲಗ್ಗೆ ಇಟ್ಟ ಜನರು: ಕಾಳಿ ನದಿ ಸೇತುವೆ ಕುಸಿದ ಸುದ್ದಿ ತಿಳಿದ ಜನತೆ ವೀಕ್ಷಿಸಲು ತಂಡೋಪತಂಡವಾಗಿ ಲಗ್ಗೆ ಇಟ್ಟರು. ಪೊಲೀಸರಿಗೆ ಜನತೆಯನ್ನು ನಿಯಂತ್ರಿಸುವುದೇ ಸವಾಲಾಯಿತು.ಮಧ್ಯರಾತ್ರಿ ಸೇತುವೆ ಕುಸಿದ ತರುವಾಯವೂ ನೂರಾರು ಜನರು ಆಗಮಿಸಿದ್ದರು. ನಂತರ ಬೆಳಗ್ಗೆ 6 ಗಂಟೆಗೆಲ್ಲ ಜನತೆ ಹರಿದುಬರತೊಡಗಿದರು. ಹೊಸ ಸೇತುವೆ ಕೆಳಭಾಗದ ಅಳ್ವೇವಾಡದಲ್ಲಿ, ಹೊಸ ಸೇತುವೆಯ ಮೇಲೆ, ಕುಸಿದ ಸೇತುವೆಯ ಸಮೀಪ ಫಾರೆಸ್ಟ್ ಗೆಸ್ಟ್‌ಹೌಸ್ ಹೀಗೆ ಎಲ್ಲೆಂದರಲ್ಲಿ ನಿಂತು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಮಧ್ಯಾಹ್ನದ ತನಕವೂ ಜನರು ವೀಕ್ಷಣೆಗೆ ಆಗಮಿಸುತ್ತಲೇ ಇದ್ದರು.
ಭಯದ ವಾತಾವರಣ: ಭಾರಿ ಅವಾಜ್ ಆಗಿದ್ದೆ ಹೊರಗೋಡಿ ಬಂದೆ. ನೋಡಿದ್ರೆ ಕಾಳಿ ಬ್ರಿಡ್ಜ್ ನೀರಿಗೆ ಬಿದ್ದಿದೆ. ಲಾರಿಯೊಂದು ನದಿಗೆ ಬಿದ್ದಿದೆ. ಚಾಲಕ ಸಹಾಯಕ್ಕಾಗಿ ಕೂಗಾಡುತ್ತಾ ಇದ್ದಾನೆ. ಮಧ್ಯರಾತ್ರಿ ಭಯದ ವಾತಾವರಣ ಉಂಟಾಯಿತು ಎಂದು ಸ್ಥಳೀಯರಾದ ನಾಗೇಶ್ ತಿಳಿಸಿದರು.
ಮುಂದಿದ್ದ ಲಾರಿ ಹಠಾತ್ ಕಣ್ಮರೆಯಾಯ್ತು: ಪ್ರತ್ಯಕ್ಷದರ್ಶಿ ದಲ್ವಿಂದರ ಸಿಂಗ್
ಕಾರವಾರ: ಎದುರುಗಡೆ ಇದ್ದ ಲಾರಿ ಏಕಾಏಕಿ ಕಣ್ಮರೆಯಾಯ್ತು. ಬ್ರಿಡ್ಜ್ ಕುಸಿಯುತ್ತಿತ್ತು. ತಕ್ಷಣ ನಾನು ಲಾರಿಯನ್ನು ನಿಲ್ಲಿಸಿ ರಿವರ್ಸ್ ಬಂದು ಹಿಂದುಗಡೆ ಇದ್ದ ಎರಡು ಲಾರಿ ಚಾಲಕರಿಗೆ ಮಾಹಿತಿ ನೀಡಿದೆ. ಇದರಿಂದ ಅವರೂ ರಿವರ್ಸ್ ಬಂದರು. ದೊಡ್ಡ ಅನಾಹುತ ತಪ್ಪಿತು ಎಂದು ಕಾಳಿ ಸೇತುವೆ ಕುಸಿತದ ಪ್ರತ್ಯಕ್ಷದರ್ಶಿ ಪಂಜಾಬ್‌ನ ಚಾಲಕ ದಲ್ವಿಂದರ ಸಿಂಗ್ ಭಯಾನಕ ಅನುಭವವನ್ನು ಕನ್ನಡಪ್ರಭಕ್ಕೆ ಬಿಚ್ಚಿಟ್ಟರು.ಹತ್ತಾರು ಕಿಮೀ ದೂರದಿಂದ ದಲ್ವಿಂದರ್ ಸಿಂಗ್ ತಮ್ಮ ಲಾರಿಯನ್ನು ನದಿಗೆ ಬಿದ್ದ ಲಾರಿಯ ಹಿಂದುಗಡೆಯಿಂದ ಚಾಲನೆ ಮಾಡುತ್ತಿದ್ದರು. ಕಾಳಿ ಸೇತುವೆ ಮೇಲೆ ಎದುರು ಇದ್ದ ಲಾರಿ ಚಲಿಸುತ್ತಿರುವುದು ಹಠಾತ್ ಮಾಯವಾಯಿತು. ಜತೆಗೆ ಬ್ರಿಡ್ಜ್ ಕೂಡ ಕುಸಿಯಿತು. ಸ್ವಲ್ಪ ದೂರ ಇರುವುದರಿಂದ ಅವರು ಲಾರಿಯನ್ನು ನಿಲ್ಲಿಸಿ, ರಿವರ್ಸ್ ಬಂದು ಮತ್ತೆ ಎರಡು ಲಾರಿಗಳನ್ನು ನಿಲ್ಲಿಸಿ ಮಾಹಿತಿ ನೀಡಿದ್ದಾರೆ. ಇದರಿಂದ ಅವರೂ ಅಪಾಯದಿಂದ ಪಾರಾಗುವಂತಾಯಿತು. ಜತೆಗೆ ಯಾವುದೆ ವಾಹನ ಸೇತುವೆ ಮೇಲೆ ಹೋಗದಂತೆ ತಡೆದಿದ್ದಾರೆ.
ಎಲ್ಲ ಸೇತುವೆ ಪರಿಶೀಲನೆ: ಜಿಲ್ಲಾಧಿಕಾರಿ
ಕಾರವಾರ: ಕಾಳಿ ಸೇತುವೆ ಕುಸಿದ ತರುವಾಯ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಜಿಲ್ಲೆಯ ಎಲ್ಲ ಸೇತುವೆಗಳನ್ನು ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಳಿ ನದಿಗೆ ಕಟ್ಟಲಾದ ಹಳೆ ಸೇತುವೆ ಕುಸಿತವಾಗಿದ್ದು, ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು ಬಂದಿದ್ದಾರೆ. ಸೇತುವೆಯ ಮೇಲೆ ತೆರಳುತ್ತಿದ್ದ ಒಂದು ಲಾರಿ ಮಾತ್ರ ನದಿಗೆ ಬಿದ್ದಿದ್ದು, ಚಾಲಕನನ್ನು ಮೇಲೆತ್ತಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.