ಹಿರೀಸಾವೆ ಹೊರವಲಯದಲ್ಲಿ ಸ್ಮಶಾನಕ್ಕೆ ಸ್ಥಳ ನಿಗದಿ

| Published : Aug 26 2025, 01:03 AM IST

ಸಾರಾಂಶ

ಎಚ್. ಹೊನ್ನೇನಹಳ್ಳಿ ಗ್ರಾಮದ ಬಳಿ ಶ್ರೀ ಮಸಳಿಕಮ್ಮ ದೇಗುಲ ಸೇರಿದಂತೆ ವ್ಯಾಪ್ತಿಯ ಜಮೀನಿಗೂ ಅನುಕೂಲವಾಗುವಂತೆ ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೂ ಸಹ ಚಾಲನೆ ನೀಡಲಾಗಿದೆ ಎಂದರು. ಹಿರೀಸಾವೆ ಗ್ರಾಮ, ಕಾಲನಿ ಹಾಗೂ ಎಲ್ಲ ಬಡಾವಣೆಗಳಿಗೂ ಪ್ರತ್ಯೇಕವಾಗಿ ಗ್ರಾಮ ಪಂಚಾಯಿತಿ ಮೂಲಕ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳ ನಿರ್ವಹಣೆ ಹಾಗೂ ಚರಂಡಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅನುದಾನಗಳ ಲಭ್ಯತೆಯ ಅನುಗುಣವಾಗಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸ್ಥಳೀಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಿರೀಸಾವೆಯ ಹೊರ ವಲಯದಲ್ಲಿ ಸ್ಮಶಾನಕ್ಕೆ ಸ್ಥಳ ಗುರುತಿಸಿ ಕಾಯ್ದಿರಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ತಾಲೂಕಿನ ಹಿರೀಸಾವೆ ಗ್ರಾಮದ ಜನತಾ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಇಲ್ಲಿಯ ನಿವಾಸಿಗಳಿಗೆಂದೆ ಪ್ರತ್ಯೇಕವಾಗಿ ಅಗತ್ಯ ಸೌಲಭ್ಯಗಳೊಂದಿಗೆ ಸ್ಮಶಾನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಸಾವು-ನೋವು ಸಂಭವಿಸಿದರೆ ಜಮೀನು ಉಳ್ಳ ಕುಟುಂಬಗಳಿಗೆ ಸಮಸ್ಯೆಯಾಗುವುದಿಲ್ಲ, ಆದರೆ ಜಮೀನು ಇಲ್ಲದೆ ಇರುವ ಸಮುದಾಯಗಳಿಗೆ ಅಂತ್ಯಸಂಸ್ಕಾರ ಕಾರ್ಯ ನೆರವೇರಿಸಲು ಅಗತ್ಯ ಸ್ಥಳ ಇಲ್ಲದಾಗಿದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸ್ಮಶಾನದ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಎಚ್. ಹೊನ್ನೇನಹಳ್ಳಿ ಗ್ರಾಮದ ಬಳಿ ಶ್ರೀ ಮಸಳಿಕಮ್ಮ ದೇಗುಲ ಸೇರಿದಂತೆ ವ್ಯಾಪ್ತಿಯ ಜಮೀನಿಗೂ ಅನುಕೂಲವಾಗುವಂತೆ ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೂ ಸಹ ಚಾಲನೆ ನೀಡಲಾಗಿದೆ ಎಂದರು. ಹಿರೀಸಾವೆ ಗ್ರಾಮ, ಕಾಲನಿ ಹಾಗೂ ಎಲ್ಲ ಬಡಾವಣೆಗಳಿಗೂ ಪ್ರತ್ಯೇಕವಾಗಿ ಗ್ರಾಮ ಪಂಚಾಯಿತಿ ಮೂಲಕ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳ ನಿರ್ವಹಣೆ ಹಾಗೂ ಚರಂಡಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅನುದಾನಗಳ ಲಭ್ಯತೆಯ ಅನುಗುಣವಾಗಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಹೋಬಳಿ ಕೇಂದ್ರ ಹಿರೀಸಾವೆ ಗ್ರಾಮವು ದಿನದಿಂದ ದಿನಕ್ಕೆ ಹೆಚ್ಚು ಜನವಸತಿಯೊಂದಿಗೆ ಹಾಗೂ ವಾಣಿಜ್ಯ ಮತ್ತು ವ್ಯವಹಾರ ಕೇಂದ್ರವಾಗಿ ತಾಲೂಕು ಹಂತಕ್ಕೆ ಬೆಳೆಯುತ್ತಿದೆ. ಇದಕ್ಕೆ ಅನುಗುಣವಾಗಿ ಅಗತ್ಯ ಸೌಕರ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹೆಚ್ಚಿನ ಅನುದಾನ ತಂದು ಸರ್ವತೋಮುಖ ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಬೋರಯ್ಯ, ಮಾಜಿ ಅಧ್ಯಕ್ಷ ಎಚ್ .ಈ.ಬೋರಯ್ಯ, ಹಿರೀಸಾವೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ.ಮಹೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್. ಎಸ್.ರವಿಕುಮಾರ್, ಪ್ರಮುಖರಾದ ಬಾಬು, ವೆಂಕಟೇಶ್ ಹಾಗೂ ಇನ್ನಿತರರು ಇದ್ದರು.