ಸಾರಾಂಶ
ತಾಲೂಕಿನ ಜನ ಸಂಪೂರ್ಣ ತಾಲೂಕು ಬಂದ್ ಮಾಡುವ ಮೂಲಕ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಈ ಅವಿರತ ಹೋರಾಟದ ಫಲವಾಗಿ ಈ ಬಾರಿ ಸರಕಾರ ಕೋರ್ಟ್ ಸ್ಥಾಪಿಸಲು ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಜೋಯಿಡಾ
ಉ.ಕ. ಜಿಲ್ಲಾ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಅವರು ಇಂದು ಜೋಯಿಡಾ ನಗರಕ್ಕೆ ಭೇಟಿ ನೀಡಿ ಹೊಸದಾಗಿ ಕೋರ್ಟ್ ಸ್ಥಾಪಿಸಲು ನಿವೇಶನ ಹಾಗೂ ತಾತ್ಕಾಲಿಕ ವ್ಯವಸ್ಥೆಗೆ ಇಮಾರತು ಬಗ್ಗೆ ಸರ್ವೇಕ್ಷಣೆ ಮಾಡಿದರು.ಕಳೆದ ಅನೇಕ ವರ್ಷಗಳಿಂದ ಇಲ್ಲಿಯ ''ಕಾಳಿ ಬ್ರಿಗೇಡ್'' ಸಂಘಟನೆ ಕೋರ್ಟ್‌ಗಾಗಿ ಹೋರಾಟ ಮಾಡುತ್ತ ಬಂದಿದೆ. ತಾಲೂಕಿನ ಜನ ಸಂಪೂರ್ಣ ತಾಲೂಕು ಬಂದ್ ಮಾಡುವ ಮೂಲಕ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಈ ಅವಿರತ ಹೋರಾಟದ ಫಲವಾಗಿ ಈ ಬಾರಿ ಸರಕಾರ ಕೋರ್ಟ್ ಸ್ಥಾಪಿಸಲು ಮುಂದಾಗಿದೆ. ಈ ಹಿಂದೆ ಅನೇಕ ಸಲ ಮುಖ್ಯಮಂತ್ರಿ, ಕಾನೂನು ಸಚಿವ, ಮುಖ್ಯ ನ್ಯಾಯಾಧೀಶರಲ್ಲಿ ಮನವಿ ಮಾಡಿ, ಕೋರ್ಟ್‌ಗಾಗಿ ಆಗ್ರಹ ಮಾಡಲಾಗಿತ್ತು. ಸ್ಥಳೀಯ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ರಾದ ಆರ್.ವ್ಹಿ. ದೇಶಪಾಂಡೆ ಕೂಡ ಮುತುವರ್ಜಿಯಿಂದ ಸರಕಾರಕ್ಕೆ ಪತ್ರ ಬರೆದಿದ್ದರು. ಇಡೀ ರಾಜ್ಯದಲ್ಲಿ ಕೋರ್ಟ್ ಇಲ್ಲದ ತಾಲೂಕು ಜೋಯಿಡಾ ಮಾತ್ರ ಆಗಿದೆ. ೨೦೨೦ರಲ್ಲಿ ಆಗಿನ ಜಿಲ್ಲಾ ಸತ್ರ ನ್ಯಾಯಾಧೀಶರು ಸ್ಥಳ ಪರಿಶೀಲನೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಕೋವಿಡ್ ಕಾರಣಕ್ಕೆ ನನೆಗುದಿಗೆ ಬಿದ್ದಿತು. ಈಗ ಮತ್ತೆ ಚಾಲನೆ ಸಿಕ್ಕಿದೆ. ಇವತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಸ್ಥಳ ಸರ್ವೇಕ್ಷಣೆ ಮಾಡಿ ಆದಷ್ಟು ಬೇಗ ನ್ಯಾಯಾಲಯದ ಪ್ರಕ್ರಿಯೆ ಪ್ರಾರಂಭಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ದಾಂಡೇಲಿ ಜೆಎಂಎಫ್‌ಸಿ ನ್ಯಾಯಾಧೀಶರು, ತಹಸೀಲ್ದಾರ್ ಮಂಜುನಾಥ ಮುನವಳ್ಳಿ, ಹಾಗೂ ಕೋರ್ಟ್ ಸಿಬ್ಬಂದಿ, ದಾಂಡೇಲಿ ಮತ್ತು ಜೋಯಿಡಾ ಭಾಗದ ವಕೀಲರು, ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನಿಲ್ ದೇಸಾಯಿ, ಮಾಜಿ ಮುಖ್ಯ ಸಂಚಾಲಕ ರವಿ ರೇಡಕರ್ ಇತರರು ಉಪಸ್ಥಿತರಿದ್ದರು. ಲೋಕೋಪಯೋಗಿ ಇಲಾಖೆ, ಸರ್ವೇ ಇಲಾಖೆ, ಕಂದಾಯ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.