ಚಿಕ್ಕಮಗಳೂರು ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ಸ್ವಯಂ ಚಾಲಿತ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥ ನಿರ್ಮಾಣಕ್ಕೆ ಒಂದಲ್ಲಾ ಒಂದು ಅಡ್ಡಿ ಎದುರಾಗುತ್ತಿದ್ದು, ಸದ್ಯಕ್ಕೆ ಯೋಜನೆ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
ನಾಲ್ಕು ವರ್ಷದಿಂದ ಪ್ರಯತ್ನ ।ನಿಲ್ಲದೆ ಅಡ್ಡಿ , ಅಡಚಣೆ । ಸಮತಟ್ಟಾದ ಜಾಗ ಅಗತ್ಯ
ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ಸ್ವಯಂ ಚಾಲಿತ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥ ನಿರ್ಮಾಣಕ್ಕೆ ಒಂದಲ್ಲಾ ಒಂದು ಅಡ್ಡಿ ಎದುರಾಗುತ್ತಿದ್ದು, ಸದ್ಯಕ್ಕೆ ಯೋಜನೆ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.ಕಳೆದ ಮೂರು ನಾಲ್ಕು ವರ್ಷದಿಂದ ಚಿಕ್ಕಮಗಳೂರು ನಗರದಲ್ಲಿ ಸ್ವಯಂ ಚಾಲಿತ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಈ ಹಿಂದೆ ಕುರುವಂಗಿ ಗ್ರಾಮದ ವ್ಯಾಪ್ತಿಯಲ್ಲಿ ಜಿಲ್ಲಾಡಳಿಕಾರಿ ಕಚೇರಿ ನಿರ್ಮಾಣಕ್ಕೆ ಮುಂದಾದ ಜಾಗಕ್ಕೆ ಹೊಂದಿಕೊಂಡಿರುವ ಸುಮಾರು 10 ಎಕರೆ ಜಾಗವನ್ನು ನಿಗದಿ ಪಡಿಸಲಾಗಿತ್ತು.
ಅದಕ್ಕಾಗಿ 2025ರಲ್ಲಿ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ₹7 ಕೋಟಿ ಸಹ ಅನುದಾನ ನೀಡಲಾಗಿತ್ತು. ಪಥ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾರ್ಯವನ್ನು ಕೆಎಸ್‌ಆರ್‌ಟಿಸಿ ಸಂಸ್ಥೆಯೇ ಮಾಡಬೇಕಾಗಿರುವುದರಿಂದ ಸ್ಥಳ ಪರಿಶೀಲನೆ ನಡೆಸಿ ಸುಮಾರು ₹14 ಕೋಟಿ ವೆಚ್ಚದ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೇವಲ ₹7 ಕೋಟಿ ಅನುದಾನ ಮೀಸಲಿಟ್ಟಿತ್ತು. ಈ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಬರೋಬ್ಬರಿ ಒಂದು ವರ್ಷ ಪೂರ್ಣಗೊಂಡಿತ್ತು. ಅಷ್ಟರಲ್ಲಿ ರಾಜ್ಯ ಸರ್ಕಾರಕ್ಕೆ 2026ರ ನೇ ಸಾಲಿನ ಬಜೆಟ್ ಮಂಡಿಸಿ ₹7 ಕೋಟಿ ಇದ್ದ ಅನುದಾನವನ್ನು ₹6 ಕೋಟಿ ಗೆ ಇಳಿಸಿ ಪರಿಷ್ಕರಿಸಿದೆ. ಈ ಮೊತ್ತದಲ್ಲಿ ಯೋಜನೆ ಅನುಷ್ಠಾನ ಅಸಾಧ್ಯ ಎಂಬ ಕಾರಣಕ್ಕೆ ಸಾರಿಗೆ ಇಲಾಖೆ ಆಯುಕ್ತರು, ಜಿಲ್ಲಾಡಳಿತಕ್ಕೆ ಪತ್ರ ಬರೆದು ಪರ್ಯಾಯ ಸ್ಥಳ ನೀಡುವಂತೆ ಕೋರಿದೆ.ಬೆಟ್ಟ-ಗುಡ್ಡ ಬೇಡ, ಸಮತಟ್ಟಾದ ಜಾಗ ಕೊಡಿ:
ಚಾಲನಾ ಪಥ ನಿರ್ಮಾಣಕ್ಕೆ ನಿಗದಿಗೊಳಿಸಿದ್ದ ಸ್ಥಳವು ಕಡಿದಾದ ಬೆಟ್ಟ-ಗುಡ್ಡ ಕೂಡಿದೆ. ಆ ಸ್ಥಳಲ್ಲಿ ಯೋಜನೆ ಅನುಷ್ಠಾನಕ್ಕೆ ದುಪ್ಪಟ್ಟು ಹಣ ಬೇಕಾಗಲಿದೆ. ಹೀಗಾಗಿ, ಪರ್ಯಾಯ ಸ್ಥಳ ಕೊಟ್ಟರೆ ಯೋಜನೆ ಅನುಷ್ಠಾನ ಮಾಡಬಹುದಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಇದೀಗ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಜತೆಗೆ, ಕಡಿದಾಟ ಬೆಟ್ಟ-ಗುಡ್ಡ ಇಲ್ಲದ ಸಮತ ಟ್ಟಾಗಿರುವ ಸ್ಥಳ ಕೊಟ್ಟರೆ ಯೋಜನೆ ಅನುಷ್ಠಾನ ಸುಲಭವಾಗಲಿದೆ. ವೆಚ್ಚದ ಪ್ರಮಾಣವೂ ಕಡಿಮೆಯಾಗಲಿದೆ. ಇನ್ನೂ ಚಿಕ್ಕಮಗಳೂರು ನಗರದಿಂದ ಸುಮಾರು 10 ಕಿ.ಮೀ ದೂರವಾದರೂ ಪರವಾಗಿಲ್ಲ. ಆದರೆ, ಸಮತಟ್ಟಾದ ಸ್ಥಳ ಬೇಕಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಡಳಿತ ಅಧಿಕಾರಿಗಳು ಪರ್ಯಾಯ ಜಾಗ ಹುಡುಕಾಟಕ್ಕೆ ಮುಂದಾಗಿದ್ದಾರೆ.ಹೊಸ ಎರಡು ಸ್ಥಳ ವೀಕ್ಷಣೆ
ಈಗಾಗಲೇ ಎರಡು ಸ್ಥಳಕ್ಕೆ ಚಿಕ್ಕಮಗಳೂರು ತಹಸೀಲ್ದಾರ್, ಸಾರಿಗೆ ಇಲಾಖೆ ಹಾಗೂ ಯೋಜನೆ ಅನುಷ್ಠಾನ ಗೊಳಿಸಬೇಕಾದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಆದರೆ, ಸ್ಥಳ ಸೂಕ್ತ ವಾಗಿಲ್ಲದ ಕಾರಣಕ್ಕೆ ಬೇರೆ ಸ್ಥಳಕ್ಕೆ ತಲಾಶ್ ನಡೆಸಲಾಗುತ್ತಿದೆ.---ಬಾಕ್ಸ್---
ಬಳಕೆಯಾದ ಸರ್ಕಾರಿ ಮಂಜೂರು ಜಾಗ ವಾಪಾಸ್‌ಗೆ ಚಿಂತನೆಚಿಕ್ಕಮಗಳೂರು ನಗರದ ಸುತ್ತಮುತ್ತ ವಿವಿಧ ಕಾರಣಕ್ಕೆ ಸರ್ಕಾರದಿಂದ ಮಂಜೂರು ಮಾಡಲಾದ ಜಾಗಗಳ ಪೈಕಿ ಬಳಕೆ ಯಾಗದಿರುವ ಜಾಗ ಸಾಕಷ್ಟು ಇದೆ. ಈ ಪೈಕಿ ಸ್ವಯಂ ಚಾಲಿತ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥ ನಿರ್ಮಾಣಕ್ಕೆ ಸೂಕ್ತವಾದ ಜಾಗ ಇರುವುದು ಕಂಡು ಬಂದರೆ ಅದನ್ನು ವಾಪಾಸ್ ಪಡೆವ ಬಗ್ಗೆಯೂ ಜಿಲ್ಲಾಡಳಿತ ಚಿಂತನೆ ನಡೆಸಲಾಗಿದೆ. ಜತೆಗೆ, ಪರಿಶೀಲನೆ ಕಾರ್ಯ ಸಹ ಶುರು ಮಾಡಲಾಗಿದೆ. -- ಕೋಟ್ --
ಸ್ವಯಂ ಚಾಲಿತ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥ ನಿರ್ಮಾಣಕ್ಕೆ ಮಂಜೂರಾದ ಜಾಗದಲ್ಲಿ ನಿರ್ಮಾಣ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಬದಲಿ ಜಾಗ ನೀಡುವಂತೆ ಜಿಲ್ಲಾಡಳಿತ ಕ್ಕೆ ಮನವಿ ಸಲ್ಲಿಸಲಾಗಿದೆ.- ರಾಕೇಶ್ ಕುಮಾರ್, ಆರ್ ಟಿಒ, ಚಿಕ್ಕಮಗಳೂರು
(ಸೂಕ್ತ ಪೋಟೋ ಕಡ್ಡಾಯವಾಗಿ ಬಳಸಿ)