ಸಾರಾಂಶ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ೪೩ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ನಿರ್ಮಾಣ ಮಾಡುವ ಸಲುವಾಗಿ ನಿವೇಶನಗಳನ್ನು ಗುರ್ತಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆ ಕರೆದು ನಿವೇಶನ ಕಾಯ್ದಿರಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ೧೨ ಕಡೆ ಜಾಗ ಅಂತಿಮಗೊಳಿಸಿ, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಇಂದಿನ ಸಭೆಯಲ್ಲಿ ಬಾಕಿಯಿರುವ ೨೯ ಜಾಗ ಗಳನ್ನು ಗುರ್ತಿಸುವ ಕೆಲಸವಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ೪೩ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ನಿರ್ಮಾಣ ಮಾಡುವ ಸಲುವಾಗಿ ನಿವೇಶನಗಳನ್ನು ಗುರ್ತಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆ ಕರೆದು ನಿವೇಶನ ಕಾಯ್ದಿರಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ತಾಲೂಕಿನಲ್ಲಿ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಮಿಷನ್‌ನಡಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ನಿರ್ಮಾಣಕ್ಕಾಗಿ ಸರ್ಕಾರಿ ಜಾಗದ ಬಗ್ಗೆ ಮಾಹಿತಿ ಪಡೆಯಲು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕಿನಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಡಿಯಲ್ಲಿ ಕಾರ್ಯ ನಿರ್ವಹಿಸಲಿರುವ ಗ್ರಾಮ ಠಾಣಾ ಜಾಗ, ಇಲ್ಲವೇ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಿಗಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಂದಾಯ ಜಾಗವನ್ನು ಗುರ್ತಿಸುವ ಕೆಲಸವಾಗಬೇಕಿದೆ. ಇದಕ್ಕಾಗಿ ಎರಡು ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸಿ, ತಾಲೂಕಿನಲ್ಲಿ ನಿರ್ಮಾಣವಾಗಲಿರುವ ೪೩ ಉಪಕೇಂದ್ರಗಳಿಗೂ ಜಾಗ ಅಂತಿಮ ಗೊಳಿಸಿ, ಜಾಗದ ಅಗತ್ಯ ದಾಖಲೆ ಗಳನ್ನು ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಆರೋಗ್ಯ ಇಲಾಖೆಗೆ ಒದಗಿಸಬೇಕು ಎಂದು ತಿಳಿಸಿದರು.ಸೇವೆ ನೀಡುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರ ಸರ್ಕಾರವು ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ನಿರ್ಮಾಣ ಮಾಡಲು ಮುಂದಾಗಿದೆ. ತಾಲೂಕು ಆಡಳಿತ ಗುರ್ತಿಸಿ ಕೊಡಲಾದ ಜಾಗದಲ್ಲಿ ೬೫ ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಈಗಾಗಲೇ ಹುಲ್ಲೇನಹಳ್ಳಿ ಮತ್ತು ಸಬ್ಬನಹಳ್ಳಿ ಗ್ರಾಮಗಳಲ್ಲಿ ಜಾಗ ಅಂತಿಮಗೊಳಿಸಿ, ಟೆಂಡರ್ ಪ್ರಕ್ರಿಯೆ ಮುಗಿದು ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇನ್ನುಳಿದಂತೆ ೧೨ ಕಡೆ ಜಾಗ ಅಂತಿಮಗೊಳಿಸಿ, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಇಂದಿನ ಸಭೆಯಲ್ಲಿ ಬಾಕಿಯಿರುವ ೨೯ ಜಾಗ ಗಳನ್ನು ಗುರ್ತಿಸುವ ಕೆಲಸವಾಗಿದೆ ಎಂದರು.ಈ ಯೋಜನೆಯನ್ನು ತಾಲೂಕಿನಲ್ಲಿ ಫಲಪ್ರದವಾಗಿ ಮಾಡುವ ಅವಶ್ಯಕತೆಯಿದೆ. ಇದರಲ್ಲಿ ಅಧಿಕಾರಿಗಳು ಹೆಚ್ಚು ಮುತುವರ್ಜಿಯಿಂದ ಕೆಲಸಕ್ಕೆ ಮುಂದಾಗಬೇಕು. ಈ ಮೂಲಕ ಆರೋಗ್ಯ ಇಲಾಖೆಗೆ ಶಕ್ತಿ ತುಂಬಿ ಗ್ರಾಮೀಣ ಜನರ ಸುಸ್ಥಿರ ಆರೋಗ್ಯಕ್ಕೆ ಕಾರಣವಾಗಲಿದೆ. ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಸಂಯೋಜನಾಧಿಕಾರಿಗಳು, ಎ.ಎನ್.ಎಂ.ಗಳು ಕಾರ್ಯ ನಿರ್ವಹಿಸಲಿದ್ದಾರೆ. ಕೇಂದ್ರದಲ್ಲಿ ಆರೋಗ್ಯ ಸೇವೆ, ಸಾಮೂಹಿಕ ಚುಚ್ಚುಮದ್ದು ಅಭಿಯಾನದಂತಹ ಕಾರ್ಯಗಳು ನಡೆಯಲಿವೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶಂಕರಪ್ಪ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ತೇಜಸ್ವಿನಿ, ಯೋಜನೆಯ ನೋಡಲ್ ಅಧಿಕಾರಿ ಪುಟ್ಟಸ್ವಾಮಿ ಹಾಜರಿದ್ದರು.