ಸಾರಾಂಶ
ಅಂಗನವಾಡಿ ಮಕ್ಕಳಿಗೆ ಸರಿಯಾಗಿ ಆಹಾರ ವಿತರಣೆ ಮಾಡುತ್ತಿಲ್ಲ. ಜತೆಗೆ ವಯಸ್ಕ ಮಕ್ಕಳನ್ನು ಅನಧಿಕೃತವಾಗಿ ಹಾಜರಿ ಪುಸ್ತಕದಲ್ಲಿ ದಾಖಲೆ ಮಾಡಿಕೊಂಡು ಇಲಾಖೆಗೆ ಮೋಸ ಮಾಡುತ್ತಿದ್ದಾರೆ ಎಂದು ಜನರು ಅಂಗನವಾಡಿಗೆ ಬೀಗ ಹಾಕಿ ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ನಾಲತವಾಡ
ಅಂಗನವಾಡಿ ಮಕ್ಕಳಿಗೆ ಸರಿಯಾಗಿ ಆಹಾರ ವಿತರಣೆ ಮಾಡುತ್ತಿಲ್ಲ. ಜತೆಗೆ ವಯಸ್ಕ ಮಕ್ಕಳನ್ನು ಅನಧಿಕೃತವಾಗಿ ಹಾಜರಿ ಪುಸ್ತಕದಲ್ಲಿ ದಾಖಲೆ ಮಾಡಿಕೊಂಡು ಇಲಾಖೆಗೆ ಮೋಸ ಮಾಡುತ್ತಿದ್ದಾರೆ. ಅಲ್ಲದೆ, ಗರ್ಭಿಣಿಯರು, ಬಾಣಂತಿಯರಿಗೂ ಆಹಾರ ವಿತರಿಸದ ಗಚ್ಚಿನ ಬಾವಿ 16ನೇ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಸೋಮವಾರದಿಂದ ಕೇಂದ್ರಕ್ಕೆ ಬೀಗ ಜಡಿದಿದ್ದರು. ಇದಾದ ಎರಡು ದಿನಗಳ ನಂತರ ಬುಧವಾರ ಆಗಮಿಸಿದ ಸಿಡಿಪಿಒ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು.ಹಲವಾರು ದಿನಗಳಿಂದ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿನ್ನಮ್ಮ ಅರಳಿಚಂಡಿ ಎನ್ನುವ ಕಾರ್ಯಕರ್ತೆ, ಮೊಟ್ಟೆ ಹಾಗೂ ಮಕ್ಕಳ ಆಹಾರ ವಿತರಿಸಿಲ್ಲ. ಫಲಾನುಭವಿಗಳು ಈ ಕುರಿತು ಕೇಂದ್ರಕ್ಕೆ ತೆರಳಿ ವಿಚಾರಿಸಿದರೂ ಕಾರ್ಯಕರ್ತೆ ಸ್ಪಂದಿಸುತ್ತಿಲ್ಲ. ಆಹಾರ ವಿತರಿಸದೇ ವಿತರಿಸಿದ್ದೇನೆ ಎಂದು ಮೇಲಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಹೀಗಿದ್ದರೂ ಮೇಲ್ವಿಚಾರಕಿಯರು ಮೌನವೇಕೆ ವಹಿಸಿದ್ದಾರೆ ಎಂದು ಆಕ್ರೋಶಗೊಂಡು ಸಿಡಿಪಿಒ ಎಸ್.ಡಿ.ಕುಂಬಾರ ಅವರನ್ನು ಪ್ರಶ್ನಿಸಿದರು. ಇಂತಹ ಕಾರ್ಯಕರ್ತೆ ನಮ್ಮ ಕೇಂದ್ರಕ್ಕೆ ಬೇಡ ಎಂದು ಪಟ್ಟುಹಿಡಿದರು.
ನಿತ್ಯ ಕೇಂದ್ರದಲ್ಲಿ 10-12 ಮಕ್ಕಳು ಮಾತ್ರ ಇರುತ್ತಾರೆ. ಈ ವಿಷಯ ಮೇಲ್ವಿಚಾರಕಿಯರಿಗೆ ಗೊತ್ತಿದ್ದರೂ ಗೊತ್ತಿಲ್ಲದಂತೆ ಇದ್ದಾರೆ. ಹೀಗಾದರೆ ಮಕ್ಕಳಿಗೆ, ಗರ್ಭಿಣಿಯರಿಗೆ ಆಹಾರ ಸಿಗುತ್ತದೆಯೇ ಎಂದು ಪ್ರಶ್ನಿಸಿದರು.ಸರ್ಕಾರದ ನಿಯಮದಂತೆ ಮಾಸಿಕ ಪೌಷ್ಟಿಕ ಆಹಾರ ಶಿಬಿರ, ಬಾಲ ವಿಕಾಸ ಮಕ್ಕಳ ಪಾಲಕರ ಸಭೆ ಈವರೆಗೂ ನಡೆಸಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಕೇವಲ ಹೆಸರಿಗೆ ಮಾತ್ರ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದು ಹಳೆಯ ಫೋಟೋಗಳನ್ನೇ ತಮಗೆ ಒದಗಿಸುತ್ತಿದ್ದಾರೆ. ಈವರೆಗೆ ಯಾವ ಪಾಲಕರನ್ನು ಸಹ ಕಾರ್ಯಕ್ರಮಕ್ಕೆ ಕರೆದಿಲ್ಲ ಇದಕ್ಕೆ ತಮ್ಮ ಕ್ರಮವೇನು ಎಂದು ಪ್ರಶ್ನಿಸಿದರು.ಕ್ರಮದ ಭರವಸೆ:ಸ್ಥಳೀಯರ ಆರೋಪದ ಹಿನ್ನೆಲೆಯಲ್ಲಿ ಸಿಡಿಪಿಒ ಎಸ್.ಡಿ.ಕುಂಬಾರ ಜೊತೆಯಲ್ಲಿದ್ದ ಹಿರಿಯ ಮೇಲ್ವಿಚಾರಕಿ ಬಿ.ಎನ್ ತಳಗದ, ವಿಬಿಎಸ್ ಮೇಟಿಯ ಅವರನ್ನುದ್ದೇಶಿಸಿ ಮಾತನಾಡಿ, ಕಳೆದ ಹಲವು ತಿಂಗಳಿಂದಲೂ ಫಲಾನುಭವಿಗಳಿಗೆ ಮೊಟ್ಟೆ ಆಹಾರ ವಿತರಣೆಯಾಗಿಲ್ಲ ಎನ್ನುವ ಗಂಭೀರ ಸಮಸ್ಯೆಯನ್ನು ಪರಿಗಣಿಸಿದ ಸಿಡಿಪಿಒ ಅವರು ಫಲಾನುಭವಿ ಹಾಗೂ ಮಕ್ಕಳ ಹಾಜರಾತಿ ಪುಸ್ತಕದೊಂದಿಗೆ ಅವರ ಮನೆಗಳಿಗೆ ತೆರಳಿ ಪಾಲಕರ ಅಭಿಪ್ರಾಯ ಸಂಗ್ರಹಿಸಿ ನನಗೆ ಒದಗಿಸಬೇಕು. ನಂತರ ಮುಂದಿನ ಕ್ರಮಕ್ಕೆ ಮೇಲಧಿಕಾರಿಗಳಿಗೆ ಕಳುಹಿಸುತ್ತೇನೆ. ಹಾಗೂ ತಕ್ಷಣವೇ ದೂರಿನನ್ವಯ ಕಾರ್ಯಕರ್ತೆಯನ್ನು ಬೇರೆಡೆ ವರ್ಗಾಯಿಸುತ್ತೇನೆ ಎಂದು ಭರವಸೆ ನೀಡಿದರು.ಅಂಗನವಾಡಿ ಕಾರ್ಯಕರ್ತೆ ಮೇಲೆ ಕ್ರಮ ವಹಿಸಬೇಕು ಎಂದು ಬೀಗ ಜಡಿದಿದ್ದ ನಿವಾಸಿಗಳಿಗೆ ಸಿಡಿಪಿಒ, ಸದ್ಯ ನಿಮ್ಮ ಅಂಗನವಾಡಿ ಕೇಂದ್ರಕ್ಕೆ ಬೇರೆ ಕಾರ್ಯಕರ್ತೆಯನ್ನು ಹಾಕಲಾಗುವುದು ಎಂದು ಭರವಸೆ ನೀಡಿದ ಬಳಿಕ ಬೀಗವನ್ನು ಮೇಲ್ವಿಚಾರಕಿಗೆ ಹಸ್ತಾಂತರಿಸಿದರು.
ಈ ವೇಳೆ ಕರವೇ ತಾಲೂಕಾಧ್ಯಕ್ಷ ಮಲ್ಲು ಗಂಗನಗೌಡ್ರ(ಮಣಿಕಂಠ), ಈರಣ್ಣ ಮಳ್ಳೆತ್ತಿ, ಅಪ್ಪಣ್ಣ ಗಂಗು ಗಂಗನಗೌಡ್ರ, ಜಗದೀಶ ಹಾದಿಮನಿ, ಸಂಗಮೇಶ ಮಸ್ಕಿ, ಸಂತೋಷ ಹಂಪನಗೌಡ್ರ, ಶೇಖು ಗಂಗನಗೌಡ್ರ, ಶಿವಪ್ಪ ಮುದಗಲ್, ಗುಂಡಪ್ಪ ಬಾವಿಕಟ್ಟಿ, ಶರಣಪ್ಪ ಹೆಸರೂರು, ಪ್ರಮೀಳಾ ಅಪ್ಪೋಜಿ, ಗುರುಬಾವಿ ಮಳ್ಳೆತ್ತಿ, ಸಂಗಮ್ಮ ವಾಲಿ, ಸರಸ್ವತಿ ಹಾದಿಮನಿ, ಮಡಿವಾಳಮ್ಮ ಪೂಜಾರಿ, ರೇಣುಕಾ ಗಂಗನಗೌಡ್ರ, ಪಾರ್ವತಿ ಹೊಸಮನಿ, ಅಮರಮ್ಮ ಬಾವಿಕಟ್ಟಿ ಇದ್ದರು.