ಕೇಂಬ್ರಿಡ್ಜ್ ಶಾಲೆಗೆ ಬೀಗ, ಶಾಲೆ ಆರಂಭಿಸುವಂತೆ ಮಕ್ಕಳ ಪೋಷಕರ ಪ್ರತಿಭಟನೆ

| Published : Dec 10 2024, 12:30 AM IST

ಕೇಂಬ್ರಿಡ್ಜ್ ಶಾಲೆಗೆ ಬೀಗ, ಶಾಲೆ ಆರಂಭಿಸುವಂತೆ ಮಕ್ಕಳ ಪೋಷಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ವಿವಿಧ ಗ್ರಾಮಗಳಿಂದ ಮಕ್ಕಳನ್ನು ಕೇಂಬ್ರಿಡ್ಜ್ ಶಾಲೆಗೆ ಸೇರಿಸಲಾಗಿದೆ. ಸುಮಾರು 800ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗೆ ಏಕಾಏಕಿ ಬೀಗ ಹಾಕಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಇದ್ದಕ್ಕಿದ್ದಂತೆ ಶಾಲೆ ಮುಚ್ಚಿದ್ದು, ಶಾಲಾ ಆಡಳಿತದಿಂದ ಮೂರು ದಿನಗಳಿಗೊಮ್ಮೆ ಒಂದೆರಡು ದಿನಗಳಲ್ಲಿ ಶಾಲೆ ತೆರೆಯುವುದಾಗಿ ಮೆಸೆಜ್ ಮಾಡುತ್ತಿದ್ದಾರೆ ವಿನಃ ಶಾಲೆ ಆರಂಭಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಖಾಸಗಿ ಬ್ಯಾಂಕ್‌ನಿಂದ ಪಡೆದಿದ್ದ ಸಾಲ ಮರು ಪಾವತಿಸದೇ ಕಳೆದ 10ದಿನಗಳಿಂದ ಬೀಗ ಹಾಕಿರುವ ತಾಲೂಕಿನ ಕಿರಂಗೂರು ಬಳಿಯ ಕೇಂಬ್ರಿಡ್ಜ್ ಶಾಲೆ ಎದುರು ಮಕ್ಕಳ ಪೋಷಕರು ಶಾಲೆ ಆರಂಭಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಶಾಲೆ ಎದುರು ಆಗಮಿಸಿದ ಮಕ್ಕಳ ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು ಶಾಲೆ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಘೋಷಣೆಗಳ ಕೂಗಿದರು.

ತಾಲೂಕಿನ ವಿವಿಧ ಗ್ರಾಮಗಳಿಂದ ಮಕ್ಕಳನ್ನು ಕೇಂಬ್ರಿಡ್ಜ್ ಶಾಲೆಗೆ ಸೇರಿಸಲಾಗಿದೆ. ಸುಮಾರು 800ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗೆ ಏಕಾಏಕಿ ಬೀಗ ಹಾಕಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಇದ್ದಕ್ಕಿದ್ದಂತೆ ಶಾಲೆ ಮುಚ್ಚಿದ್ದು, ಶಾಲಾ ಆಡಳಿತದಿಂದ ಮೂರು ದಿನಗಳಿಗೊಮ್ಮೆ ಒಂದೆರಡು ದಿನಗಳಲ್ಲಿ ಶಾಲೆ ತೆರೆಯುವುದಾಗಿ ಮೆಸೆಜ್ ಮಾಡುತ್ತಿದ್ದಾರೆ ವಿನಃ ಶಾಲೆ ಆರಂಭಗೊಂಡಿಲ್ಲ ಎಂದು ದೂರಿದರು.

ಮಕ್ಕಳ ವಿದ್ಯಾಭ್ಯಾಸಕ್ಕೆಂದು ಸಾಲಾ ಸೋಲ ಮಾಡಿ ಶಾಲೆಗೆ ಲಕ್ಷಾಂತರ ರು. ಶುಲ್ಕ ಕಟ್ಟಲಾಗಿದೆ. ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲದೆ, ಈಗ ರಜಾ ಘೋಷಣೆ ಮಾಡಿದರೆ ಮಕ್ಕಳ ಗತಿ ಏನು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು.

ಕಳೆದ 10 ದಿನಗಳಿಂದ ಶಾಲೆಗೆ ಬೀಗ ಹಾಕಿರುವ ಬಗ್ಗೆ ಪೋಷಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗಿದೆ ಅದರೂ ಸಹ ಯಾವೊಬ್ಬ ಅಧಿಕಾರಿಗಳು ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ದರಸಗುಪ್ಪೆ ಗ್ರಾಪಂ ಅಧ್ಯಕ್ಷ ಮುರುಳಿ, ರುಕ್ಮಾಂಗದ, ಮಂಜುನಾಥ, ಶಿವಣ್ಣ, ಗಿರೀಶ್, ಶಂಕರ್‌ಬಾಬು ಸೇರಿದಂತೆ ಹಲವಾರು ಶಾಲಾ ಮಕ್ಕಳ ಪೋಷಕರು ಹಾಜರಿದ್ದರು.