ಇಂದಿರಾ ನಗರದ ವಿವೇಕಾನಂದ ಸಂಘದ ಗಣೇಶ್ ಉತ್ಸವ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿರುವ 21ನೇ ವರ್ಷದ ಅದ್ಧೂರಿ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಸಂಜೆ ಇಂದಿರಾ ನಗರದಲ್ಲಿ ಸಂಘದ ಧ್ವಜಾರೋಹಣ, ಸಂಘದ ಲೋಗೋ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಾಪೋಕ್ಲು: ಇಲ್ಲಿನ ಇಂದಿರಾ ನಗರದ ವಿವೇಕಾನಂದ ಸಂಘದ ಗಣೇಶ್ ಉತ್ಸವ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿರುವ 21ನೇ ವರ್ಷದ ಅದ್ಧೂರಿ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಸಂಜೆ ಇಂದಿರಾ ನಗರದಲ್ಲಿ ಸಂಘದ ಧ್ವಜಾರೋಹಣ, ಸಂಘದ ಲೋಗೋ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾಫಿ ಬೆಳೆಗಾರ ಬಿದ್ದಾಟಂಡ ದಿನೇಶ್ ಉದ್ಘಾಟಿಸಿದರು.ಪಂಚಾಯಿತಿ ಮಾಜಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ, ಯಾವುದೇ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು ವಿಘ್ನನ ನಾಶಕ ವಿನಾಯಕನಿಗೆ ಪೂಜೆ ಸಲ್ಲಿಸುತ್ತೇವೆ. ಇದು ಎಲ್ಲಾ ಸನಾತನಿಗಳು ಆಚರಿಸುವ ಹಬ್ಬ. ಇಲ್ಲಿ ಹೆಣ್ಣು, ಗಂಡು, ಎರಡೇ ಜಾತಿ ಎಲ್ಲರ ರಕ್ತವು ಕೆಂಪು. ವಿನಾಯಕ ಚತುರ್ಥಿ ಸರ್ವರನ್ನು ಒಂದುಗೂಡಿಸುವ ಹಬ್ಬ ಎಂದು ಹೇಳಿ ಶುಭ ಹಾರೈಸಿದರು.
ಸಾಮರಸ್ಯದ ಹಬ್ಬ:ಮುಖ್ಯ ಅತಿಥಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಅಂಬಿ ಕಾರ್ಯಪ್ಪ ಮಾತನಾಡಿ, ಬಾಲಗಂಗಾಧರ ತಿಲಕ್ ಅವರ ಮುಂದಾಳತ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಭಾರತೀಯರನ್ನು ಒಂದುಗೂಡಿಸಲು ಗಣೇಶ ಚತುರ್ಥಿಯನ್ನು ಮುಂಬೈನಲ್ಲಿ ಆರಂಭಿಸಲಾಯಿತು. ಇದು ಸರ್ವರನ್ನು ಒಂದುಗೂಡಿಸುವ ಸಾಮರಸ್ಯದ ಹಬ್ಬ ಎಂದರು. 2025 -26 ಸಾಲಿನಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು . ಸೈಕ್ಲಿಂಗ್ ಕೋಚ್ ಚೆರಿ ಚರ್ಮಣ, ರಾಜ್ಯಮಟ್ಟದ ಕಬಡ್ಡಿ ಆಟಗಾರ್ತಿ ಮೇಘನಾ, ಹಾಕಿ ಆಟಗಾರ್ತಿ ತನುಶ್ರೀ, ವಿದ್ಯಾರ್ಥಿಗಳಾದ ಅದ್ವಿಕ್ ಗಣಪತಿ, ದೀಕ್ಷಿತ ದೇಚಕ್ಕ , ಸರ್ವಿಕ ಮಂಜುನಾಥ್ ಹರ್ಷಿತ ಕುಶಾಲಪ್ಪ ಸಹನಾ ಪಿ. ಎಸ್., ಹಂಸಿನಿ , ಕರಣ್ಯ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸಂಘದ ಅಧ್ಯಕ್ಷ ಟಿ.ಕೆ ಶಿವ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಪೋಕ್ಲು, ಹಿಂದು ಮಲಯಾಳಿ ಸಂಘದ ಅಧ್ಯಕ್ಷ ಅನಿಲ್, ಕೆಇಬಿ ಉಪ ಇಂಜಿನಿಯರ್ ಪ್ರಸಾದ್ , ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ದಾನಿ ಮೂವೇರ ಧರಣಿ ಗಣಪತಿ, ಕವಿತಾ ದಿನೇಶ್ ಸಂಘದ ಉಪಾಧ್ಯಕ್ಷ ಆನಂದ, ಉಸ್ತುವಾರಿ ಜಲೇಂದ್ರ , ಮಾಜಿ ಅಧ್ಯಕ್ಷ ಶಶಿ, ಸದಸ್ಯ ಕಪ್ಪಸ್ವಾಮಿ, ವಿನಾಯಕ, ಶರವಣ ಸೇರಿದಂತೆ ಇತರ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.