ಲೋಕ ಅದಾಲತ್‌: ಪುನಃ ಒಂದಾದ 21 ಜೋಡಿ

| Published : Sep 15 2024, 01:56 AM IST

ಸಾರಾಂಶ

ಇಂದು ದಾಂಪತ್ಯ ಜೀವನದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಕ್ಕೂ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ದಾಖಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಕೌಟುಂಬಿಕ ನ್ಯಾಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸುವ ಜತೆಗೆ ಸೂಕ್ಷ್ಮವಾಗಿ ಗಮನಿಸಿದೆ.

ಹುಬ್ಬಳ್ಳಿ:

ಕೌಟುಂಬಿಕ ನ್ಯಾಯಾಲಯದಲ್ಲಿ ಹೆಚ್ಚಾಗಿ ಸ್ವಪ್ರತಿಷ್ಠೆ, ಮಕ್ಕಳಾಗದಿರುವುದು, ಅತ್ತೆ-ಮಾವನ ಕಿರಿಕಿರಿ ಹೀಗೆ ಹತ್ತಾರು ಬಗೆಯ ಸಣ್ಣ-ಪುಟ್ಟ ಭಿನ್ನಾಭಿಪ್ರಾಯದಿಂದಾಗಿ ವಿಚ್ಛೇದನ ಕೋರಿ ನ್ಯಾಯಾಲಯಗಳ ಮೆಟ್ಟಿಲು ಏರುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ.

ಇಂತಹ ಮನಸ್ಥಿತಿಯಿಂದಾಗಿ ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಗೆ ತಿಳಿವಳಿಕೆ, ಸಕಾರಾತ್ಮಕ ಚಿಂತನೆ ಮೂಡಿಸುವ ಮೂಲಕ ಕೌಟುಂಬಿಕ ನ್ಯಾಯಾಲಯ ನಡೆಸಿದ ಲೋಕ್ ಅದಾಲತ್‌ನಿಂದ 21 ಜೋಡಿ ಪುನಃ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಹುಬ್ಬಳ್ಳಿ ಪ್ರಧಾನ ಕೌಟುಂಬಿಕ ನ್ಯಾಯಾಲಯವು ಲೋಕ ಅದಾಲತ್‌ನಲ್ಲಿ 11 ಹಾಗೂ 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ 10 ಜೋಡಿ ದಾಂಪತ್ಯ ಜೀವನ ಸುಗಮಗೊಳಿಸಿದೆ. ಅಲ್ಲದೇ, ಜೀವನಾಂಶ ವಸೂಲಾತಿ ಸೇರಿ ಇನ್ನಿತರೆ ಒಟ್ಟು 55 ಪ್ರಕರಣಗಳನ್ನು ಸಹ ಇದೇ ವೇಳೆ ರಾಜೀ ಸಂಧಾನದೊಂದಿಗೆ ಅಂತ್ಯಗೊಳಿಸಲಾಯಿತು. ಕಳೆದ 4-5 ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಒಟ್ಟು 76 ಪ್ರಕರಣಗಳನ್ನು ಲೋಕ್‌ ಅದಾಲತ್‌ನಲ್ಲಿ ಏಕಕಾಲಕ್ಕೆ ಇತ್ಯರ್ಥ ಪಡಿಸಿರುವುದು ವಿಶೇಷ.

2 ವರ್ಷದಲ್ಲಿ ವಿಚ್ಛೇದನಕ್ಕೆ ಅರ್ಜಿ:

ಇಲ್ಲಿಯ ಶ್ರೀಸಿದ್ಧಾರೂಢ ಮಠದ ದರ್ಶನಕ್ಕೆ ಬಂದಾಗ ಹುಡುಗ-ಹುಡುಗಿ ಪರಸ್ಪರ ಪರಿಚಯಗೊಂಡ ಪ್ರೇಮಾಂಕುರಕ್ಕೆ ಬಿದ್ದು ವಿವಾಹವಾಗಿದ್ದರು. ಒಂದು ವರ್ಷದ ಅವಧಿಯಲ್ಲಿ ಸಂತೋಷದಿಂದ ಸಂಸಾರ ನಡೆಸಿ ಒಂದು ಮಗು ಕೂಡಾ ಆಗಿತ್ತು. ಇದಾದ ನಂತರ ಸಣ್ಣ-ಪುಟ್ಟ ಸಮಸ್ಯೆಯಿಂದ ಎರಡು ವರ್ಷದ ಬಳಿಕ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಿಸಿ ಇಬ್ಬರಿಗೂ ಮಗುವಿನ ಭವಿಷ್ಯಕ್ಕಾಗಿ ಒಂದಾಗಿ ಸುಖ ಸಂಸಾರ ನಡೆಸುವಂತೆ ಬುದ್ಧಿವಾದ ಹೇಳಲಾಗಿತ್ತು. ಅದರಂತೆ ಈಗ ಇಬ್ಬರು ಸುಖ ಸಂಸಾರಕ್ಕೆ ಪುನಃ ಕಾಲಿಟ್ಟಿದ್ದಾರೆ ಎಂದು 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಅರಿ ಹೇಳಿದರು.

ನಾಲ್ಕೈದು ವರ್ಷಗಳ ಪ್ರಕರಣ ಇತ್ಯರ್ಥ:

ಇಂದು ದಾಂಪತ್ಯ ಜೀವನದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಕ್ಕೂ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ದಾಖಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಕೌಟುಂಬಿಕ ನ್ಯಾಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸುವ ಜತೆಗೆ ಸೂಕ್ಷ್ಮವಾಗಿ ಗಮನಿಸಿ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಯೊಂದಿಗೆ ಪ್ರಕರಣ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಹುಬ್ಬಳ್ಳಿ ಕೌಟುಂಬಿಕ ನ್ಯಾಯಾಲಯದಲ್ಲಿ 4-5 ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳನ್ನು ಹಂತ-ಹಂತವಾಗಿ ಸಂಪೂರ್ಣವಾಗಿ ಇತ್ಯರ್ಥಪಡಿಸಲಾಗಿದೆ. ಇದೇ ವರ್ಷ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿಯೂ ನ್ಯಾಯಾಲಯಕ್ಕೆ ಹಾಜರಾದ ಮೊದಲ ದಿನವೇ ಕಕ್ಷಿದಾರರ ಮನವೊಲಿಸಿ ರಾಜೀ ಸಂಧಾನಗೊಳಿಸಿರುವುದು ಈ ನ್ಯಾಯಾಲಯದ ಮತ್ತೊಂದು ವಿಶೇಷ.ಕೋಟ್‌...

ಕುಟುಂಬದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಬರುವುದು ಸಹಜ. ಕುಟುಂಬದ ಹಿರಿಯರು, ಆಪ್ತರು ಸೂಕ್ತ ಸಲಹೆ, ಮಾರ್ಗದರ್ಶನ ನೀಡಿ ತಿದ್ದಿ ಬುದ್ಧಿ ಹೇಳಬೇಕು. ಇದು ಸಿಗದಿದ್ದಾಗ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಬರುತ್ತಿದ್ದಾರೆ. ವಕೀಲರು ಮತ್ತು ನ್ಯಾಯಾಧೀಶರು ಅದನ್ನು ಸರಿಯಾಗಿ ಅರ್ಥೈಯಿಸಿದಾಗ ಸರಿ ಹೋಗುತ್ತವೆ.

ರವೀಂದ್ರ ಅರಿ, ನ್ಯಾಯಾಧೀಶರು, 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ಹುಬ್ಬಳ್ಳಿ