ಸಾರಾಂಶ
- ನ್ಯಾಯಾಧೀಶರ ಸಮ್ಮುಖ ರಾಜಿ ಸಂಧಾನದಿಂದ ಒಂದಾದ ಸತಿ-ಪತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 39 ವೈವಾಹಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಸಂಧಾನ ನಡೆಸಿ, ಸತಿ-ಪತಿ ಒಂದಾಗಿ ಸಹಬಾಳ್ವೆ ಮಾಡಲು ಅವಕಾಶ ಕಲ್ಪಿಸಿಕೊಡಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಸೇರಿ ಎಲ್ಲ ನ್ಯಾಯಾಧೀಶರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮತ್ತೆ ಒಂದಾದ ಜೋಡಿಗಳಿಗೆ ಗುಲಾಬಿ ನೀಡಿ, ಸುಖೀ ಜೀವನ ನಡೆಸುವಂತೆ ಶುಭ ಹಾರೈಸಿದರು.ದಾವಣಗೆರೆಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ 34 ಜೋಡಿಗಳು ಪ್ರಕರಣ ದಾಖಲಿಸಿದ್ದವು. ಅದರೆ, ಕೋರ್ಟಲ್ಲಿ ಒಂದಾಗಿ ಮತ್ತೆ ಸಹಬಾಳ್ವೆ ನಡೆಸಲು ಸಮ್ಮತಿಸಿದರು. ಹರಿಹರ ತಾಲೂಕಿನ ನ್ಯಾಯಾಲಯಗಳಲ್ಲಿ 2, ಚನ್ನಗಿರಿ, ಹೊನ್ನಾಳಿ, ಜಗಳೂರು ತಾಲೂಕು ನ್ಯಾಯಾಲಯಗಳಲ್ಲಿ ತಲಾ 1 ಪ್ರಕರಣದಲ್ಲಿ ವಿವಾಹ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಾಗಿದ್ದವು.
ಶೀಘ್ರ ನ್ಯಾಯ ತೀರ್ಮಾನ ಸಾಧ್ಯ:ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದರಿಂದ ಶೀಘ್ರದಲ್ಲಿ ನ್ಯಾಯ ತೀರ್ಮಾನ ಆಗಲಿದೆ ಎಂದರು.
ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಶಿವಪ್ಪ ಸಲಗೆರೆ ಮಾತನಾಡಿ, ಪತಿ-ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ವೈಮನಸ್ಯ ಸೃಷ್ಟಿಯಾಗುತ್ತಿದೆ. ಪ್ರತಿ ಕುಟುಂಬದಲ್ಲಿಯೂ ಒಂದಲ್ಲ ಒಂದು ರೀತಿಯ ಸಮಸ್ಯೆ ಇರುತ್ತದೆ. ಇವುಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬ ಜಾಣ್ಮೆ ಮುಖ್ಯ. ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡುವುದಕ್ಕೂ ಮುನ್ನ ಯುವಕ- ಯುವತಿಯರಲ್ಲಿ ತಿಳಿವಳಿಕೆ ನೀಡುವ ಅಗತ್ಯ ವಿದೆ. 4 ಲೋಕ್ ಅದಾಲತ್‌ಗಳಿಂದ ಒಟ್ಟು 96 ಜೋಡಿಗಳನ್ನು ಮತ್ತೆ ದಾಂಪತ್ಯಕ್ಕೆ ಒಪ್ಪಿಸಿ, ಕಳುಹಿಸಿದ್ದೇವೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿದರು. ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯ, ಆರ್.ಎನ್.ಪ್ರವೀಣಕುಮಾರ, ಶ್ರೀರಾಮ ನಾರಾಯಣ ಹೆಗಡೆ, ಟಿ.ಎಂ.ನಿವೇದಿತಾ, ಎಚ್.ಡಿ.ಗಾಯತ್ರಿ, ನಾಜಿಯಾ ಕೌಸರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ, ಭಾಗ್ಯಲಕ್ಷ್ಮೀ ಇತರರು ಇದ್ದರು.
- - - -9ಕೆಡಿವಿಜಿ36.ಜೆಪಿಜಿ:ದಾವಣಗೆರೆಯಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಇತರರು ಹಾಜರಿದ್ದರು.