ಸೆ.13ರಂದು ಜಿಲ್ಲಾದ್ಯಂತ ಲೋಕ್‌ ಅದಾಲತ್‌

| Published : Aug 23 2025, 02:00 AM IST

ಸಾರಾಂಶ

ಸೆ.೧೩ರಂದು ನಡೆಯುತ್ತಿರುವ ರಾಷ್ಟ್ರೀಯ ಲೋಕಾ ಅದಾಲತ್ ೨೦೨೫ರ ಮೂರನೇ ಅದಾಲತ್ ಆಗಿದ್ದು, ಈ ಅದಾಲತ್ ತುಮಕೂರಿನಲ್ಲಿ ಮಾತ್ರವಲ್ಲ ರಾಷ್ಟ್ರ ವ್ಯಾಪ್ತಿಯಲ್ಲಿ ನಡೆಯುತ್ತದೆ ಎಂದು ತುಮಕೂರಿನ ಹಿರಿಯ ಸಿವಿಲ್ ನ್ಯಾಯಧೀಶರಾದ ನೂರುನ್ನೀಸಾ ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಕೊರಟಗೆರೆ

ಸೆ.೧೩ರಂದು ನಡೆಯುತ್ತಿರುವ ರಾಷ್ಟ್ರೀಯ ಲೋಕಾ ಅದಾಲತ್ ೨೦೨೫ರ ಮೂರನೇ ಅದಾಲತ್ ಆಗಿದ್ದು, ಈ ಅದಾಲತ್ ತುಮಕೂರಿನಲ್ಲಿ ಮಾತ್ರವಲ್ಲ ರಾಷ್ಟ್ರ ವ್ಯಾಪ್ತಿಯಲ್ಲಿ ನಡೆಯುತ್ತದೆ ಎಂದು ತುಮಕೂರಿನ ಹಿರಿಯ ಸಿವಿಲ್ ನ್ಯಾಯಧೀಶರಾದ ನೂರುನ್ನೀಸಾ ತಿಳಿಸಿದರು. ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತುಮಕೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕ ಅದಾಲತ್, ಮಧ್ಯಸ್ಥಿಕೆ ಖಾಯಂ ಜನತಾ ನ್ಯಾಯಲಯ ವ್ಯವಸ್ಥೆ ಮೂಲಕ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥ ಮಾಡಿಕೊಳ್ಳಬಹುದು ಎಂದರು. ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಾದ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗ, ವಿದ್ಯುತ್, ಕಳ್ಳತನ, ರಾಜಿ ಆಗಬಲ್ಲ ಅಪರಾಧ, ವೈವಾಹಿಕ, ಸಿವಿಲ್, ರಿಯಲ್ ಎಸ್ಟೇಟ್ ಹಾಗೂ ಜಿಲ್ಲಾ ಗ್ರಾಹಕರ ಪ್ರಕರಣಗಳನ್ನು ಅದಾಲತ್‌ನಲ್ಲಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ಅದಾಲತ್‌ನಿಂದ ನ್ಯಾಯಾಲಯದ ಮೇಲಿನ ಹೊರೆ ಕಡಿಮೆಯಾಗುತ್ತದೆ. ತುಮಕೂರು ಜಿಲ್ಲೆಯ ಸುಮಾರು ೫೦ಕೋರ್ಟ್‌ಗಳಲ್ಲಿ ನಡೆಯುತ್ತಿದೆ. ಅದಾಲತ್‌ನಿಂದ ನ್ಯಾಯಾಲಯದ ಕುರಿತು ಜನರ ಮನೋಭಾವನೆ ಬದಲಾಗಲು ಅವಕಾಶವಿದೆ. ಇದರಿಂದ ಜನರಿಗೆ ಆಗುವ ಲಾಭಗಳ ಕುರಿತು ಜಾಗೃತಿ ಮೂಡಿಸಿ ಉಚಿತ ಕಾನೂನು ನೆರವು ನೀಡಲಾಗುತ್ತದೆ ಎಂದು ಹೇಳಿದರು.ಕೊರಟಗೆರೆ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಹರೀಶ್‌ಕುಮಾರ್ ಮಾತನಾಡಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದ ಮೆರೆಗೆ ಲೋಕಾ ಅದಾಲತ್‌ನಲ್ಲಿ ಕಕ್ಷಿದಾರರಿಗೆ ಕಾನೂನು ಅರಿವು ಮೂಲಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯಾವ ರೀತಿ ರೂಪುರೇಷೆಗಳನ್ನು ಸಿದ್ದತೆ ಮಾಡಿಕೊಂಡಿದ್ದು, ರಾಜೀ ಸಂಧಾನದಿಂದ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ಸಂಬಂಧ ಮತ್ತು ಸಮಯವನ್ನು ಕಕ್ಷಿದಾರರು ಉಳಿಸಿಕೊಳ್ಳಬಹುದು ಎಂದು ಹೇಳಿದರು. ಎಲ್ಲಿಯವರೆಗೂ ಮನುಷ್ಯ ಇರುತ್ತಾನೋ ಅಲ್ಲಿಯವರೆಗೆ ವ್ಯಾಜ್ಯಗಳಿರುತ್ತವೆ. ಆದರೆ ಕಕ್ಷಿದಾರರು ಆದಷ್ಟು ಕೋರ್ಟಿಗೆ ಬರುವುದನ್ನು ಕಡಿಮೆ ಮಾಡಬೇಕು. ಬಹಳಷ್ಟು ವ್ಯಾಜ್ಯಗಳನ್ನು ನಮ್ಮಲ್ಲೇ ಇತ್ಯರ್ಥಪಡಿಸಿಕೊಳ್ಳಬಹುದು. ಮಧ್ಯಸ್ಥಿಕೆ ವಹಿಸುವ ಮೂಲಕ, ರಾಜೀ ಮಾಡುವ ಮೂಲಕ, ಅನೇಕ ಸಮಸ್ಯೆಗಳು, ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದರು. ಈ ವೇಳೆ ಮಧುಗಿರಿ ಮತ್ತು ಕೊರಟಗೆರೆ ನ್ಯಾಯಧೀಶೆ ಪ್ರಮೀಳಾ, ವಕೀಲರ ಸಂಘದ ಅಧ್ಯಕ್ಷ ಎಂ.ಎಲ್ ಸಂತೋಷ್, ಕಾರ್ಯದರ್ಶಿ ಮಂಜುನಾಥ್, ಹಿರಿಯ ವಕೀಲ ಟಿ.ಕೃಷ್ಣಮೂರ್ತಿ, ಬಿ.ಎಲ್.ನಾಗರಾಜು, ಎಂ.ಸಿ ಮಲ್ಲಿಕಾರ್ಜುನಯ್ಯ, ಲಕ್ಷ್ಮೀ ಸಂತೋಷ್, ಜಿ.ಎಂ.ಕೃಷಮೂರ್ತಿ, ಬಿ.ಎ ಪುಟ್ಟರಾಜಯ್ಯ, ಶಿವರಾಮಯ್ಯ, ಎಸ್, ಸಂಜೀವರಾಜು, ನರಸಿಂಹರಾಜು, ತಿಮ್ಮರಾಜು, ಆರುಂಧತಿ, ಹುಸೇನ್‌ಪಾಷ, ಸೇರಿದಂತೆ ಇತರರು ಇದ್ದರು.