ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಯನ್ನು 4 ವರ್ಷಗಳ ನಂತರ ಮತ್ತೆ ಒಂದುಗೂಡಿಸಿದ ಪ್ರಕರಣ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಕೆ. ನಾಗೇಶ್ ಮೂರ್ತಿಯವರ ಸಮ್ಮುಖದಲ್ಲಿ ನಡೆಯಿತು.ತಾಲೂಕಿನ ಸರಗೂರು ಗ್ರಾಮದ ನರಸಿಂಹಮೂರ್ತಿ ಮತ್ತು ವಿಜಯಕುಮಾರಿ ಕುಟುಂಬ ಕಲಹದಿಂದ 2020ರಲ್ಲಿ ವಿಚ್ಛೇದನ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಶನಿವಾರ ನಡೆದ ಜನತಾ ನ್ಯಾಯಾಲಯದಲ್ಲಿ ನಡೆಸಿದ ನ್ಯಾಯಾಧೀಶರಾದ ನಾಗೇಶ ಮೂರ್ತಿ ಅವರು, ದಂಪತಿ ಹಾಗೂ ಅವರ ಸಂಬಂಧಿಕರು ಮತ್ತು ವಕೀಲರೊಂದಿಗೆ ಸಮಾಲೋಚಿಸಿ ಸಂಧಾನ ನಡೆಸಿ ದಂಪತಿ ವಿಚ್ಛೇದನಕ್ಕೆ ನೀಡಿದ ಅರ್ಜಿಯನ್ನ ಹಿಂಪಡೆದು ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಜೀವನ ಸಾಗಿಸುವುದಾಗಿ ಒಪ್ಪಿದ ಕಾರಣ ನ್ಯಾಯಮೂರ್ತಿಗಳು ನ್ಯಾಯಾಲಯದ ಕೊಠಡಿಯಲ್ಲೆ ಇಬ್ಬರು ದಂಪತಿಗಳು ಹಾರ ಬದಲಾಯಿಸಿಕೊಳ್ಳುವ ಮೂಲಕ ಒಂದುಗೂಡಿಸಿದರು. ಇಂತಹ ಘಟನೆ ಇಲ್ಲಿನ ನ್ಯಾಯಾಲಯದಲ್ಲಿ ಇದೇ ಮೊದಲ ಬಾರಿಗೆ ನಡೆದಿರುವುದು ಹರ್ಷದಾಯಕ ಎಂದು ವಕೀಲರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶ ನಾಗೇಶಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದ್ದು, ವಿಚ್ಛೇದನ ಪಡೆಯುವ ಸಂಖ್ಯೆಯೂ ಅಧಿಕವಾಗುತ್ತಿರುವುದು ಬೇಸರದ ಸಂಗತಿ. ಸ್ವಸ್ಥ ಸಮಾಜವನ್ನ ನಿರ್ಮಾಣ ಮಾಡಬೇಕಾದರೆ ಶಾಂತಿ ಸುವ್ಯವಸ್ಥೆ ಅತ್ಯವಶ್ಯಕ. ಎಲ್ಲಿ ಇವುಗಳು ನೆಲೆಸಿರುತ್ತವೆಯೋ ಅಲ್ಲಿ ಜೀವನ ಸಮೃದ್ಧಿಯಾಗಿರುತ್ತದೆ. ಸಣ್ಣಪುಟ್ಟ ವ್ಯಾಜ್ಯಗಳಿಂದ ಮನಸ್ಸುಗಳನ್ನು ಕೆಡಿಸಿಕೊಳ್ಳುವ ಬದಲು ಎಲ್ಲರೂ ಹೊಂದಾಣಿಕೆಯ ಜೀವನ ನಡೆಸಿದರೆ ಇಂತಹ ಘಟನೆಗಳು ನಡೆಯುವುದಿಲ್ಲ. ವಿಚ್ಛೇದನಕ್ಕೆ ಮುಂದಾಗಿರುವ ದಂಪತಿಗಳಿಗೆ ಈ ಪ್ರಕರಣ ಒಂದು ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಹೆಚ್.ಎಸ್. ರೇವಣ್ಣ, ಶಂಕರಯ್ಯ, ಬೀರೇಶ್, ಮಧುಸೂದನ್, ಜಯಕೃಷ್ಣ ಹಾಗೂ ಎಚ್.ಜೆ. ಪ್ರಕಾಶ್ ಉಪಸ್ಥಿತರಿದ್ದರು.
*ಫೋಟೋ15ಎಚ್ಎಸ್ಎನ್13 :ಅರಕಲಗೂಡು ನ್ಯಾಯಾಲಯದಲ್ಲ್ಲಿನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾದೀಶರಾದ ನಾಗೇಶ್ ಮೂರ್ತಿ ವಿಚ್ಛೇದನ ಕೋರಿ ಬಂದಿದ್ದ ದಂಪತಿಗಳ ನಡುವೆ ರಾಜಿ ಮಾಡಿಸಿ ಹಾರ ಬದಲಾಯಿಸುವ ಮೂಲಕ ಮರುಜೀವನ ಕಲ್ಪಿಸಿದರು.