ಸಾರಾಂಶ
ಈಗಾಗಲೇ ನ್ಯಾಯಾಲಯದಲ್ಲಿ ದಾವೇ ಹೂಡಿ, ನ್ಯಾಯಾಲಯದ ಶುಲ್ಕವನ್ನು ಪಾವತಿಸಿದ್ದಲ್ಲಿ, ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಗೊಂಡರೆ, ಶುಲ್ಕವನ್ನು ಕಕ್ಷಿದಾರರಿಗೆ ವಾಪಸ್ ನೀಡಲಾಗುವುದು. ಲೋಕ ಅದಾಲತ್‌ನಲ್ಲಿ ದಾವೆಗಳೂ ಇತ್ಯರ್ಥವಾದಲ್ಲಿ ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎಂದು ನ್ಯಾಯಧೀಶ ಕಿರಣ್ ಗಂಗಣ್ಣನವರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯ ಎಲ್ಲ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು, ಜು.13ರಂದು ಬೆಳಗ್ಗೆ 10.30ರಿಂದ 4 ಗಂಟೆ ವರೆಗೆ ರಾಷ್ಟ್ರೀಯ ಲೋಕ - ಅದಾಲತ್ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಕಿರಣ್ ಗಂಗಣ್ಣನವರ್ ತಿಳಿಸಿದ್ದಾರೆ.ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಲೋಕ ಅದಾಲತ್ ಬಗ್ಗೆ ವಿವರಗಳನ್ನು ನೀಡಿದರು.
ಈಗಾಗಲೇ ನ್ಯಾಯಾಲಯದಲ್ಲಿ ದಾವೇ ಹೂಡಿ, ನ್ಯಾಯಾಲಯದ ಶುಲ್ಕವನ್ನು ಪಾವತಿಸಿದ್ದಲ್ಲಿ, ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಗೊಂಡರೆ, ಶುಲ್ಕವನ್ನು ಕಕ್ಷಿದಾರರಿಗೆ ವಾಪಸ್ ನೀಡಲಾಗುವುದು. ಲೋಕ ಅದಾಲತ್‌ನಲ್ಲಿ ದಾವೆಗಳೂ ಇತ್ಯರ್ಥವಾದಲ್ಲಿ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಕಕ್ಷಿಗಾರರು ತಮ್ಮ ವ್ಯಾಜ್ಯಗಳನ್ನು ವಿಳಂಬವಿಲ್ಲದೆ, ಶೀಘ್ರದಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದರು.ವಾಜ್ಯ ಪೂರ್ವ ಪ್ರಕರಣಗಳಾದ ಚೆಕ್ ಅಮಾನ್ಯ, ಬ್ಯಾಂಕ್ ಸಾಲ ವಸೂಲಾತಿ, ವಿದ್ಯುತ್ ಹಾಗೂ ನೀರಿನ ಶುಲ್ಕ, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ ಪ್ರಕರಣಗಳು ಮತ್ತು ಸಿವಿಲ್ ಪ್ರಕರಣ, ರಿಯಲ್ ಎಸ್ಟೇಟ್ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವೇದಿಕೆ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಖಾಯಂ ಜನತಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕೂಡ ಈ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ.
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಾದ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣ, ಕಾರ್ಮಿಕ ವಿವಾದ, ಭೂಸ್ವಾದೀನ, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗು ಪಿಂಚಣಿ ಪ್ರಕರಣ, ರಾಜಿಯಾಗಬಲ್ಲ ಸಿವಿಲ್ ಮತ್ತು ಇತರೆ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದಾಗಿದೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ, ಹೆಚ್ಚುವರಿ ಜಿಲ್ಲಾ ಹಾಗೂ ಪೋಕ್ಸೋ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೊನಾಲ್ಡ್ ಪ್ರವೀಣ್ ಕುಮಾರ್, ಕಾರ್ಯದರ್ಶಿ ರಾಜೇಶ್ ಉಪಸ್ಥಿತರಿದ್ದರು.
---ಜಿಲ್ಲೆಯಲ್ಲಿವೆ 34,885 ಪ್ರಕರಣಗಳು
ಉಡುಪಿ ಜಿಲ್ಲೆಯಲ್ಲಿ ಒಟ್ಟು 15, 383 ಸಿವಿಲ್ ಹಾಗೂ 19,502 ಕ್ರಿಮಿನಲ್ ಪ್ರಕರಣಗಳಿವೆ. ಲೋಕ ಅದಲಾತ್‌ನಲ್ಲಿ ಪ್ರಕರಣ ಇತ್ಯರ್ಥ ಪಡಿಸಲು ಇಚ್ಛಿಸುವವರು ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುರುಷೋತ್ತಮ್ ತಿಳಿಸಿದ್ದಾರೆ.