ಸೆ.13 ರಂದು ಲೋಕಾ ಅದಾಲತ್: ನ್ಯಾ.ಆರ್.ಮಹೇಶ್

| Published : Aug 29 2025, 01:00 AM IST

ಸಾರಾಂಶ

ಜತೆಗೆ ಪಂಚಾಯಿತಿ, ಪುರಸಭೆ ನೀರಿನ ಬಿಲ್ ಪಾವತಿ, ಟೆಲಿಫೋನ್ ಬಿಲ್, ವಿದ್ಯುತ್‌ಬಿಲ್ ಹಾಗೂ ಸಣ್ಣಪುಟ್ಟ ಬ್ಯಾಂಕ್ ಸಾಲ ವಸೂಲಾತಿ, ಚೆಕ್‌ಬೌನ್ಸ್ ಪ್ರಕರಣಗಳು ಸಹ ರಾಜೀ ಸಂಧಾನದ ಮೂಲಕ ಇತ್ಯರ್ಥಕ್ಕೆ ಒಳಪಡಲಿವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಜೆಎಂಎಫ್‌ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಸೆ.13ರಂದು ನಡೆಯುವ ಲೋಕ ಅದಾಲತ್‌ನಲ್ಲಿ ಕಕ್ಷಿದಾರರು ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ತಿಳಿಸಿದರು.

ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ನಿರ್ದೇಶನದಂತೆ ಪ್ರತಿವರ್ಷ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಲು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ವತಿಯಿಂದ ಲೋಕ ಅದಾಲತ್ ಆಯೋಜಿಸಿಸಲಾಗಿದೆ ಎಂದರು.

ಕಕ್ಷಿದಾರರು, ಸಾರ್ವಜನಿಕರು, ವಕೀಲರು ಸೇರಿ ಎಲ್ಲರ ಸಹಕಾರದಿಂದ ಪ್ರತಿ ಬಾರಿ ಆಯೋಜನೆಗೊಳ್ಳುವ ಜನತಾ ನ್ಯಾಯಾಲಯದಲ್ಲಿ ನಿರೀಕ್ಷೆಗೆ ತಕ್ಕಂತೆ ಸಾಕಷ್ಟು ಪ್ರಕರಣಗಳು ಸಂಧಾನದ ಮೂಲಕ ಇತ್ಯರ್ಥಗೊಳ್ಳುತ್ತಿವೆ. ಸೆ.13ರ ಅದಾಲತ್‌ನ ಪ್ರಯೋಜನವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಲೋಕ- ಅದಾಲತ್‌ನಲ್ಲಿ ರಾಜೀ ಸಂಧಾನಕ್ಕೆ ಸೂಕ್ತವಾದಂತಹ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ. ಪ್ರಸ್ತುತ ನ್ಯಾಯಾಲಯದಲ್ಲಿ 150 ಎಂವಿಸಿ ಪ್ರಕರಣಗಳು, 10 ಎಂಎಂಆರ್‌ಡಿ ಪ್ರಕರಣ, 05 ಎಲ್‌ವಿಸಿ ಪ್ರಕರಣ, 158 ವಿಭಾಗ ಧಾವೆ, 205 ಇತರೆ ಸಿವಿಲ್ ಪ್ರಕರಣ, 230 ನಿರ್ದಿಷ್ಟ ಪರಿಹಾರಕ್ಕಾಗಿ ಧಾವೆ ಪ್ರಕರಣ, 21 ಕ್ರಿಮಿನಲ್ ಪ್ರಕರಣ, 320 ಎನ್‌ಐ ಆ್ಯಕ್ಟ್ ಪ್ರಕರಣಗಳು ಸೇರಿದಂತೆ ಒಟ್ಟು 1099 ಪ್ರಕರಣಗಳನ್ನು ಲೋಕ್ ಅದಾಲತ್‌ಗೆ ತೆಗೆದುಕೊಳ್ಳಲಾಗಿದೆ ಎಂದರು.

ಜತೆಗೆ ಪಂಚಾಯಿತಿ, ಪುರಸಭೆ ನೀರಿನ ಬಿಲ್ ಪಾವತಿ, ಟೆಲಿಫೋನ್ ಬಿಲ್, ವಿದ್ಯುತ್‌ಬಿಲ್ ಹಾಗೂ ಸಣ್ಣಪುಟ್ಟ ಬ್ಯಾಂಕ್ ಸಾಲ ವಸೂಲಾತಿ, ಚೆಕ್‌ಬೌನ್ಸ್ ಪ್ರಕರಣಗಳು ಸಹ ರಾಜೀ ಸಂಧಾನದ ಮೂಲಕ ಇತ್ಯರ್ಥಕ್ಕೆ ಒಳಪಡಲಿವೆ ಎಂದು ಹೇಳಿದರು.

ಲೋಕ ಅದಾಲತ್ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಗ್ರಾಪಂ ಕಚೇರಿ, ಪುರಸಭೆ ಕಚೇರಿ ಆವರಣದಲ್ಲಿ ಬ್ಯಾನರ್ ಮತ್ತು ಕರಪತ್ರಗಳನ್ನು ವಿತರಿಸುವ ಮೂಲಕ ಜನತಾ ನ್ಯಾಯಾಲಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಮೋಹನ್ ಇದ್ದರು.