ಲೋಕ ಕದನ: ಮತ ಎಣಿಕೆಗೆ ಕ್ಷಣಗಣನೆ

| Published : Jun 04 2024, 12:30 AM IST

ಸಾರಾಂಶ

ಚಿಕ್ಕೋಡಿಯ ಆರ್‌ಡಿ ಕಾಲೇಜಿನಲ್ಲಿ ಚಿಕ್ಕೋಡಿ ಲೋಕಸಭಾ, ಬೆಳಗಾವಿಯ ಆರ್‌ಪಿಡಿ ಕಾಲೇಜಿನಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿತೀವ್ರ ಕುತೂಹಲ ಕೆರಳಿಸಿರುವ ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಜೂ.4 ರಂದು ಮತ ಎಣಿಕೆ ನಡೆಯಲಿದೆ.

ಮೇ 7 ರಂದು ನಡೆದ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ 78.66 ರಷ್ಟು ಹಾಗೂ ಬೆಳಗಾವಿ ಕ್ಷೇತ್ರದಲ್ಲಿ 71.49 ರಷ್ಟು ಮತದಾನವಾಗಿತ್ತು. ಮತದಾನ ನಡೆದ 27 ದಿನಗಳ ಬಳಿಕ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬರುವ ನಿರೀಕ್ಷೆಯಿದೆ.

ಲೋಕಸಭಾ ಚುನಾವಣೆ ಮತ ಎಣಿಕೆಗೆ ಜಿಲ್ಲಾಡಳಿತ ಸನ್ನದ್ಧಗೊಂಡಿದ್ದು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಚಿಕ್ಕೋಡಿಯ ಆರ್‌ಡಿ ಕಾಲೇಜಿನಲ್ಲಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಬೆಳಗಾವಿಯ ಆರ್‌ಪಿಡಿ ಕಾಲೇಜಿನಲ್ಲಿ ನಡೆಯಲಿದೆ.

ಬೆಳಗಾವಿಯಲ್ಲಿ 14 ಟೇಬಲ್‌ ವ್ಯವಸ್ಥೆ ಮಾಡಲಾಗಿದ್ದು, ಚಿಕ್ಕೋಡಿಯಲ್ಲಿ 12 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆ ಆರಂಭಕ್ಕೆ ಮುನ್ನ ಮತಯಂತ್ರಳನ್ನು ಇರಿಸಿದ ಸ್ಟ್ರಾಂಗ್ ರೂಮ್‌ಗಳನ್ನು ಚುನಾವಣಾ ವೀಕ್ಷಕರು, ಉಮೇದುವಾರರು ಹಾಗೂ ಚುನಾವಣಾ ಏಜೆಂಟರುಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಬೆಳಗ್ಗೆ 8 ಗಂಟೆಯಿಂದ ಇವಿಎಂ ಮತ ಎಣಿಕೆ ಕಾರ್ಯ ಆರಂಭಿಸಲಾಗುವುದು. ಅಂಚೆ ಮತಗಳ ಎಣಿಕೆಗೆ ಎರಡು ಪ್ರತ್ಯೇಕ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಗೆಲುವು ಯಾರಿಗೆ?:

ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರಾನೇರ ಪೈಪೋಟಿ ನಡೆದಿದೆ. ಆದರೆ, ಗೆಲುವು ಯಾರ ಪಾಲಾಗುತ್ತದೆ ಎಂಬುವುದು ಸರಳವಾಗಿಲ್ಲ. ಯಾರೇ ಗೆದ್ದರೂ ಅಂತರ ಬಹಳ ಕಡಿಮೆ ಇರಲಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ನಡುವೆ ಹಾಗೂ ಚಿಕ್ಕೋಡಿಯಲ್ಲಿ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಮತ್ತು ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ ನಡುವೆ ನೇರಾ ನೇರ ಹಣಾಹಣಿ ಏರ್ಪಟ್ಟಿತ್ತು. ಮೋದಿ ಹವಾ ಮತ್ತು ಮೋದಿ ಆಡಳಿತ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿವೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಗರು ಇದ್ದರೇ, ಪಂಚ್‌ ಗ್ಯಾರಂಟಿ ಯೋಜನೆ ನಮ್ಮನ್ನು ಕೈ ಹಿಡಿಯಲಿವೆ. ಹಾಗಾಗಿ ಗೆಲುವು ನಮ್ಮದೇ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ನಾಯಕರು ಇದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ, ಮತದಾರ ಪ್ರಭು ಯಾರ ಕೈ ಹಿಡಿಯುತ್ತಾರೆ ಎನ್ನುವುದು ಫಲಿತಾಂಶದ ಬಳಿಕವಷ್ಟೇ ಉತ್ತರ ಸಿಗಲಿದೆ.ಕ್ಯಾಮೆರಾ ಹದ್ದಿನ ಕಣ್ಣು:

ಲೋಕಸಭಾ ಚುನಾವಣೆಯ ಮತ ಎಣಿಕೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ನಗರದಲ್ಲಿ 300 ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಡ್ರೋನ್ ಮೂಲಕವೂ ನಿಗಾ ವಹಿಸಲಾಗುತ್ತದೆ.ಒಟ್ಟು 5 ಕೆಎಸ್ಆರ್ ಪಿ ಒಳಗೊಂಡಂತೆ ಬಿಗಿಭದ್ರತೆ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಅಷ್ಟೆ ಅಲ್ಲದೇ ನಗರದ ಸೂಕ್ಷ್ಮ ಪ್ರದೇಶಗಳಲ್ಲಿಯೂ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ನಗರದಲ್ಲಿ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಬಳಕೆಯನ್ನು ನಿರ್ಬಂಧಿಸಲಾಗಿರುತ್ತದೆ. ಇದಲ್ಲದೇ ತಂಬಾಕು, ಬೀಡಿ, ಸಿಗರೇಟ್, ಪಾನ್ ವಗೈರೆ ತರಲು ಅವಕಾಶವಿರುವುದಿಲ್ಲ. ಮದ್ಯ ಮಾರಾಟ ನಿಷೇಧ:

ಮತ‌ ಎಣಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ. ಇದಲ್ಲದೇ ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಸಿ.ಆರ್.ಪಿ.ಸಿ. ಕಲಂ 144 ರ ಅನ್ವಯ ನಿಷೇಧಾಜ್ಞೆ ಕೂಡ‌ ಜಾರಿ ಮಾಡಲಾಗಿದ್ದು, ಈ ವ್ಯಾಪ್ತಿಯಲ್ಲಿ ಮೆರವಣಿಗೆ ಅಥವಾ ವಿಜಯೋತ್ಸವಕ್ಕೆ ಅವಕಾಶವಿಲ್ಲ.3ಬಿಇಎಲ್‌1

-----------------------

ಬಾಕ್ಸ್‌....

ಮತ ಏಣಿಕೆ : ಮಾರ್ಗ ಬದಲಾವಣೆಬೆಳಗಾವಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಈಗಾಗಲೇ ಮತದಾನ ನಡೆದಿದ್ದು, ಜೂ.4 ರಂದು ಮತ ಏಣಿಕೆ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ಆರ್‌ಪಿಡಿ ಕಾಲೇಜನಲ್ಲಿ ಮತ ಏಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.ಮತ ಎಣಿಕೆ ಕರ್ತವ್ಯದಲ್ಲಿರುವ ಅಧಿಕಾರಿ, ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳು, ಭಾಗ್ಯನಗರ 2ನೇ ಕ್ರಾಸ್ ಮೂಲಕ, ಲೋಕಮಾನ್ಯ ಮಲ್ಟಿಪರ್ಪೋಸ್ ಕೋ-ಆಪರೇಟಿವ್ ಸೋಸಾಯಟಿಯನ್ನು ದಾಟಿ, ಎಡತಿರುವು ಪಡೆದು, ಮಾವಿನ ತೋಟದ ಗೇಟ ಮೂಲಕ ಆರ್‌ಪಿಡಿ ಕಾಲೇಜು ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವುದು. ಆರ್ ಪಿಡಿ ಕಾಲೇಜಿನ 1ನೇ ಗೇಟ್ ಮೂಲಕ ಪ್ರವೇಶಿಸಿ ತಮ್ಮ ವಾಹನಗಳನ್ನು ಕೆ ಎಲ್ ಎಸ್ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ನಿಲುಗಡೆ ಮಾಡಬೇಕು.ಏಜೆಂಟರು:

ಗೋಮಟೇಶ್ ಹೈಸ್ಕೂಲ್, ಹಿಂದವಾಡಿ ಶಾಲಾ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ನಡೆದುಕೊಂಡು ಮತ ಎಣಿಕೆ ಕೇಂದ್ರಕ್ಕೆ ತೆರಳಬಹುದಾಗಿದೆ. ಅಲ್ಲದೇ ಗೋಕಾಕ, ಅರಭಾವಿ, ಭಾಗಗಳಿಂದ ಬರುವವರು ಸಾರ್ವಜನಿಕರು ಲೇಲೆ ಮೈದಾನ ಮತ್ತು ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಬೇಕು. ಬೈಲಹೊಂಗಲ, ರಾಮದುರ್ಗ, ಸೌವದತ್ತಿ ಯಲ್ಲಮ್ಮಗುಡ್ಡ ಭಾಗಗಳಿಂದ ಬರುವವರು ಹಳೆ ಪಿಬಿ ರಸ್ತೆ, ನಾಥಪೈ ಸರ್ಕಲ್ ಮೂಲಕ ವಡಗಾಂವ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಎಡಬದಿಯ ಆದರ್ಶ ನಗರ ಶಾಲಾ ಮೈದಾನದಲ್ಲಿ ಅಥವಾ ಆದರ್ಶ ನಗರ ರಸ್ತೆ ಪಕ್ಕದಲ್ಲಿ ಹಾಗೂ ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮೀಣ ಭಾಗಗಳಿಂದ ಬರುವವರು 3ನೇ ರೇಲ್ವೆ ಗೇಟ್‌ ಮೂಲಕ ಪೀರನವಾಡಿ ವರೆಗಿನ ರಸ್ತೆ ಪಕ್ಕದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬಹುದಾಗಿದೆ.ಇನ್ನೂ ಗೋವಾವೇಸ್, ಆರ್ ಪಿಡಿ ರಸ್ತೆ, ಗುರುದೇವ ರಾನಡೆ ರಸ್ತೆ, 1ನೇ ಮತ್ತು 2ನೇ ರೇಲ್ವೆ ಗೇಟ್ ರಸ್ತೆ, ಅನಗೋಳ ರಸ್ತೆ ಮತ್ತು ಭಾಗ್ಯನಗರ ರಸ್ತೆಯನ್ನು ಬೆಳಿಗ್ಗೆ 7 ಗಂಟೆಯಿಂದ ಮತ ಎಣಿಕೆ ಮುಕ್ತಾಯದವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು. ಗೋವಾವೇಸ್ ಸರ್ಕಲ್ ಕಡೆಯಿಂದ ಆರ್ ಪಿಡಿ ಸರ್ಕಲ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಮಹಾವೀರ ಭವನ ಹತ್ತಿರ ಎಡತಿರುವ ಪಡೆದು, ಗುರುದೇವ ರಾನಡೆ ರಸ್ತೆ, ಭಗತ್ ಸಿಂಗ್ ಗಾರ್ಡನ್ ಪಕ್ಕದ ರಸ್ತೆ, ಆದರ್ಶ ನಗರ, ವಡಗಾಂವ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಮುಂದಿನಿಂದ ಭಾಗ್ಯನಗರ 10 ನೇ ಕ್ರಾಸ್ ಮುಖಾಂತರ ಅನಗೋಳ ಹರಿ ಮಂದಿರ ಕ್ರಾಸ್ ಮೂಲಕ ಸಂಚರಿಸಬೇಕು.

ಗೋವಾವೇಸ್ ಸರ್ಕಲ್‌ದಿಂದ ಅನಗೋಳ ಕ್ರಾಸ್ ವರೆಗೆ ಖಾನಾಪೂರ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲ್ಲಿಸಲು ನಿರ್ಬಂಧಿಸಲಾಗಿದೆ. ಸುಗಮ ಸಂಚಾರಕ್ಕೆ ಸಹಕರಿಸಬೇಕಿದೆ. ಮತ ಎಣಿಕೆ ಸಮಯದಲ್ಲಿ ಅಧಿಕಾರಿ, ಸಿಬ್ಬಂದಿ ಮತ್ತು ಏಜೆಂಟರು ತಮ್ಮ ಜತೆಗೆ ಮೊಬೈಲ್ ಫೋನ್, ಪಾನ ಬೀಡಾ, ಗುಟಖಾ ಪಾಕೇಟ್, ಇಂಕ್ ಪೆನ್, ಕ್ಯಾಮೆರಾ, ಬೆಂಕಿ ಪೊಟ್ಟಣ, ಲೈಟರ್, ಪ್ಲಾಸ್ಟಿಕ್ ವಸ್ತುಗಳು ಹಾಗೂ ಅಗ್ನಿಕಾರಕ ವಸ್ತುಗಳನ್ನು ತರುವುದಕ್ಕೆ ನಿರ್ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.