ಉಪ್ಪಿನಂಗಡಿ: ಶಾಂತಿಯುತ ಮತದಾನ

| Published : Apr 27 2024, 01:15 AM IST

ಸಾರಾಂಶ

ನಕ್ಸಲ್ ಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿರುವ ಕಡಬ ತಾಲೂಕಿನ ಶಿರಾಡಿಯ ಮತಗಟ್ಟೆ ಸಂಖ್ಯೆ ೩೪ರಲ್ಲಿ ಹಾಗೂ ಅಡ್ಡಹೊಳೆಯ ಮತಗಟ್ಟೆ ಸಂಖ್ಯೆ ೩೫ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಮಾಂಡೋಗಳು ವಿಶೇಷ ಭದ್ರತೆ ಒದಗಿಸಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಲೋಕಸಭಾ ಚುನಾವಣೆ ಉಪ್ಪಿನಂಗಡಿ ಭಾಗದಲ್ಲಿ ಶಾಂತಿಯುತವಾಗಿ ನಡೆದಿದ್ದು, ಕೆಲವು ಮತಗಟ್ಟೆಗಳಲ್ಲಿ ಮತದಾರರು ಬಿರುಸಿನಿಂದ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರೆ, ಇನ್ನು ಕೆಲವಡೆ ನಿಧಾನಗತಿಯಲ್ಲಿ ನಡೆಯಿತು.

ಕೌಕ್ರಾಡಿಯ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾರರನ್ನು ಮತ್ತು ಅವರ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಿದ್ದುದ್ದರಿಂದ ಮತದಾನವು ನಿಧಾನಗತಿಯಲ್ಲಿ ನಡೆಯುವಂತಾಗಿದೆ ಎಂಬ ಆರೋಪ ಕೇಳಿಬಂತು.

ಇಳಂತಿಲ ಗ್ರಾಮದ ಅಂಡೆತ್ತಡ್ಕದ ಮತಗಟ್ಟೆಯೊಂದರಲ್ಲಿ ತೀರಾ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿತ್ತು. ಮತಗಟ್ಟೆ ಅಧಿಕಾರಿಯೊಬ್ಬರಿಗೆ ಸ್ವಲ್ಪ ಮಂದ ದೃಷ್ಟಿಯಿಂದಾಗಿ ಮತದಾರರ ಸೀರಿಯಲ್ ನಂಬರ್‌ಗಳನ್ನು ತಾಳೆ ಮಾಡಲು ಕಷ್ಟಪಡುತ್ತಿರುವುದನ್ನು ಮತದಾರರೊಬ್ಬರು ಪತ್ತೆಹಚ್ಚಿದರು. ಆಗ ಅವರೇ ತಮ್ಮ ನಂಬರನ್ನು ಜೋರಾಗಿ ಅಧಿಕಾರಿಗೆ ಹೇಳಿದರು. ಬಳಿಕ ಉಳಿದ ಮತದಾರರಿಗೂ ಇದೇ ರೀತಿ ಮಾಡಲು ಹೇಳಿದ್ದು, ಇದು ಅಧಿಕಾರಿಗೆ ಕೂಡಾ ನೆರವಾಗಿ ನಂತರ ಮತದಾನ ಪ್ರಕ್ರಿಯೆ ಬಿರುಸು ಪಡೆಯಿತು.ಪುಳಿತ್ತಡಿಯ ಬೂತ್ ಸಂಖ್ಯೆ ೪೦ರಲ್ಲಿ ಬೆಳಗ್ಗೆ ನಿಧಾನಗತಿಯಲ್ಲಿ ಮತದಾನ ನಡೆಯಿತು. ಮತದಾನ ಆರಂಭದ ಸಮಯಕ್ಕೇ ಮತದಾನ ಕೇಂದ್ರದೊಳಗೆ ಹೋಗಲು ಸುಮಾರು ಒಂದೂವರೆ ಗಂಟೆಗಳಷ್ಟು ಹೊತ್ತು ಕಾಯುವಂತಹ ಪರಿಸ್ಥಿತಿ ಎದುರಾಗಿತ್ತು. ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ ಬಳಿಕ ಬಿರುಸಿನಿಂದ ಮತದಾನ ನಡೆಯಿತು.

ನಕ್ಸಲ್ ಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿರುವ ಕಡಬ ತಾಲೂಕಿನ ಶಿರಾಡಿಯ ಮತಗಟ್ಟೆ ಸಂಖ್ಯೆ ೩೪ರಲ್ಲಿ ಹಾಗೂ ಅಡ್ಡಹೊಳೆಯ ಮತಗಟ್ಟೆ ಸಂಖ್ಯೆ ೩೫ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಮಾಂಡೋಗಳು ವಿಶೇಷ ಭದ್ರತೆ ಒದಗಿಸಿದರು.

ಮತಗಟ್ಟೆ ಸಂಖ್ಯೆ ೩೭ ಮತ್ತು ೩೮ರಲ್ಲಿ ತಲಾ ೯ರಂತೆ ೧೮ ಮಂದಿ ಮಹಿಳೆಯರು ಬೆಳ್ಳಂಬೆಳಗ್ಗೆನೇ ಮತಗಟ್ಟೆಗೆ ಬಂದು ಸರದಿ ಸಾಲಿನಲ್ಲಿ ನಿಂತು ಮೊದಲಾಗಿ ಮತದಾನ ಮಾಡಿದರು.

ಅನಾರೋಗ್ಯಪೀಡಿತರ ಸಹಾಯಕರಿಗೆ ಅವಕಾಶ ನಿರಾಕರಣೆ

ಅನಾರೋಗ್ಯ ಪೀಡಿತರನ್ನು ಮತಗಟ್ಟೆಗೆ ಕರೆತಂದು ಅವರಿಗೆ ಸಹಾಯಕರಾಗಿ ಸಂಬಂಧಿಗಳು ಮತದಾನ ಕೇಂದ್ರದೊಳಗೆ ಮತ ಹಾಕಲು ಕರೆದೊಯ್ದಾಗ ಸಹಾಯಕರನ್ನು ಹೊರಗೆ ಕಳಿಸಿದ್ದಾಗಿ ಬಜತ್ತೂರು ಗ್ರಾಮದ ಹೊಸಗದ್ದೆ ಮತಗಟ್ಟೆಯ ಅಧಿಕಾರಿಗಳ ವಿರುದ್ಧ ದೂರು ಕೇಳಿ ಬಂತು. ಪ್ರಕರಣವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಪರಿಶೀಲಿಸುವ ಭರವಸೆ ನೀಡಿದರು.

ಎಂಡೋ ಸಂತ್ರಸ್ತೆಯಾದ ಉಮಾವತಿ (೪೫) ಎಂಬವರನ್ನು ಅವರ ಸಹೋದರನ ಪತ್ನಿ ಮತಗಟ್ಟೆ ಕೇಂದ್ರದೊಳಗೆ ಅವರೊಂದಿಗೆ ಸಹಾಯಕರಾಗಿ ತೆರಳಿದ್ದರು. ಆಗ ಅಲ್ಲಿನ ಮತಗಟ್ಟೆ ಅಧಿಕಾರಿ ಸಹಾಯಕರನ್ನು ಹೊರಗೆ ಕಳುಹಿಸಿದ್ದು, ಉಮಾವತಿಯವರಲ್ಲೇ ಮತ ಹಾಕಿಸಿದ್ದಾರೆ. ಪಕ್ಷ ಚಿಹ್ನೆಗಳ ಅರಿವಿಲ್ಲದ ಎಂಡೋ ಸಂತ್ರಸ್ತೆಗೆ ಸಹಾಯಕಳಾಗಲು ತನಗೆ ಅವಕಾಶ ನಿರಾಕರಿಸಲಾಯಿತೆಂದು ಅವರು ಮಾಧ್ಯಮದವರಲ್ಲಿ ದೂರಿದ್ದಾರೆ. ಮತದಾನಕ್ಕೆ ಮಾತ್ರ ತೆರೆಯುವ ಶಾಲೆ

ಶಿರಾಡಿಯ ದಕ್ಷಿಣ ಕನ್ನಡ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳ ಕೊರತೆಯಿಂದ ಎರಡ್ಮೂರು ವರ್ಷಗಳಿಂದ ಮುಚ್ಚಲಾಗಿದ್ದು, ಇಲ್ಲಿ ಸಂಖ್ಯೆ ೩೪ರ ಮತಗಟ್ಟೆ ಇಲ್ಲಿ ಬರುತ್ತದೆ. ಈ ಮತಗಟ್ಟೆಯು ನಕ್ಸಲ್ ಪೀಡಿತ ಪ್ರದೇಶವೆಂಬ ಹಣೆಪಟ್ಟಿಯನ್ನು ಹೊತ್ತಿದೆ. ಮತದಾನದ ಸಂದರ್ಭದಲ್ಲಿ ಮಾತ್ರ ಈ ಶಾಲೆಯನ್ನು ತೆರೆದು ಮತದಾನ ನಡೆಸಲಾಗುತ್ತದೆ. ಬಳಿಕ ಮುಚ್ಚಲಾಗುತ್ತದೆ.