ಲೋಕಸಭಾ ಚುನಾವಣಾ : ಜಿಲ್ಲೆಯಲ್ಲಿ ಶಾಂತಯುತ ಮತದಾನ

| Published : Apr 27 2024, 01:00 AM IST

ಲೋಕಸಭಾ ಚುನಾವಣಾ : ಜಿಲ್ಲೆಯಲ್ಲಿ ಶಾಂತಯುತ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಉಡುಪಿ ಹಾಗೂ ಹಾಸನ ಜಿಲ್ಲೆಗಳಿಗೆ ಒಳಪಟ್ಟಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ಒಂದೆಡೆ ಘರ್ಷಣೆ ಹೊರತುಪಡಿಸಿ ಇನ್ನುಳಿದಂತೆ 1228 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಶೇ. 75.02 ರಷ್ಟು ಮತದಾನವಾಗಿದೆ.

ಕಳೆದ 2019 ರಲ್ಲಿ ಶೇ. 73.17 ರಷ್ಟು ಮತದಾನ । ಈ ಬಾರಿ ಮತದಾನದಲ್ಲಿ ಏರಿಕೆ। ಹಿಂದೂ ಮುಖಂಡನ ಮೇಲೆ ಬಿಜೆಪಿ ಕಾರ್ಯಕರ್ತರಿಂದಲೇ ಹಲ್ಲೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಉಡುಪಿ ಹಾಗೂ ಹಾಸನ ಜಿಲ್ಲೆಗಳಿಗೆ ಒಳಪಟ್ಟಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ಒಂದೆಡೆ ಘರ್ಷಣೆ ಹೊರತುಪಡಿಸಿ ಇನ್ನುಳಿದಂತೆ 1228 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಶೇ. 75.02 ರಷ್ಟು ಮತದಾನವಾಗಿದೆ.ಬಾಳೆಹೊನ್ನೂರು ಸಮೀಪದ ಖಾಂಡ್ಯ ಬಳಿ ಇರುವ ಉಜ್ಜನಿ ಮತಗಟ್ಟೆ ಬಳಿ ಹಿಂದೂ ಸಂಘಟನೆ ಮಾಜಿ ಮುಖಂಡ ಪ್ರವೀಣ್ ಖಾಂಡ್ಯ ಹಾಗೂ ಇತರೆ ಮೂವರ ಮೇಲೆ ಬಿಜೆಪಿ ಕಾರ್ಯಕರ್ತರು ಸಂಜೆ ರಾಡ್ ನಿಂದ ಹಲ್ಲೆ ನಡೆಸಿದ್ದು ತೀವ್ರವಾಗಿ ಗಾಯಗೊಂಡಿದ್ದ ನಾಲ್ವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಳಿಗ್ಗೆ 7 ಗಂಟೆ ವೇಳೆಗೆ ಮತದಾನ ಆರಂಭಗೊಂಡಿದ್ದು ಎನ್.ಆರ್.ಪುರ ತಾಲೂಕಿನ ಮೆಣಸೂರು, ಹೊನ್ನೆಕುಡಿಗೆ, ಚಿಕ್ಕಮಗಳೂರು ತಾಲೂಕಿನ ಅರೇನೂರು ಮತಗಟ್ಟೆಗಳಲ್ಲಿ ಇವಿಎಂ ಕೈ ಕೊಟ್ಟಿದ್ದರಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ತಡವಾಗಿ ಮತದಾನ ಆರಂಭಗೊಂಡಿತು. ಬಾಳೆಹೊನ್ನೂರಿನ ಮತಗಟ್ಟೆಯಲ್ಲಿ ವಿವಿ ಪ್ಯಾಟ್ ಕೈಕೊಟ್ಟು ತಡವಾಗಿ ಮತದಾನ ಆರಂಭವಾಯಿತು. ಇನ್ನೆಲ್ಲೂ ಗೊಂದಲ ಇಲ್ಲದೆ ಮತದಾನ ನಡೆಯಿತು.ಬೆಳಿಗ್ಗೆ 9 ಗಂಟೆ ವೇಳೆಗೆ ಶೃಂಗೇರಿ ಕ್ಷೇತ್ರದಲ್ಲಿ ಶೇ. 13.73, ಮೂಡಿಗೆರೆಯಲ್ಲಿ ಶೇ. 11.35, ಚಿಕ್ಕಮಗಳೂರಿನಲ್ಲಿ ಶೇ. 11.02 ಮತದಾನವಾಗಿದ್ದರೆ, ತರೀಕೆರೆಯಲ್ಲಿ ಶೇ. 9.69, ಕಡೂರಿನಲ್ಲಿ ಶೇ. 8.51 ರಷ್ಟು ಮತದಾನವಾಗಿತ್ತು. 9 ಗಂಟೆ ಬಳಿಕ ಮತದಾನ ಚುರುಕುಗೊಂಡು ಮಧ್ಯಾಹ್ನ 1 ಕ್ಕೆ ಶೃಂಗೇರಿ ಕ್ಷೇತ್ರದಲ್ಲಿ ಶೇ. 49.49, ಮೂಡಿಗೆರೆ ಕ್ಷೇತ್ರದಲ್ಲಿ ಶೇ. 46.44, ಚಿಕ್ಕಮಗಳೂರಿನಲ್ಲಿ ಶೇ. 40.64, ತರೀಕೆರೆ ಕ್ಷೇತ್ರದಲ್ಲಿ ಶೇ.41.57, ಕಡೂರಿನಲ್ಲಿ ಶೇ. 40.86 ರಷ್ಟು ಮತದಾನ ನಡೆದು, ಈ ಬಾರಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಶೇ. 75.02 ಮತದಾನವಾಗಿದೆ.

ಬಿಸಿಲು ಹೆಚ್ಚಿದ್ದರಿಂದ ನಿರೀಕ್ಷಿತ ಮಟ್ಟದ ಮತದಾನವಾಗದು ಎಂದು ಭಾವಿಸಲಾಗಿತ್ತು. ಆದರೆ, ಮಧ್ಯಾಹ್ನದ ವೇಳೆಯಲ್ಲೂ ಮತಗಟ್ಟೆಗೆ ಬಂದು ಮತದಾರರು ಹಕ್ಕು ಚಲಾವಣೆ ಮಾಡಿರುವುದು ಈ ಬಾರಿಯ ವಿಶೇಷ.

ವೋಟ್ ಮಾಡಿದ ನವ ದಂಪತಿ:

ಜಿಲ್ಲೆಯ ವಿವಿಧೆಡೆ ವಧು-ವರರು ವೋಟ್ ಮಾಡಿದರ, ಕೆಲವೆಡೆ ಮೊದಲು ಓಟ್‌ ಮಾಡಿ ನಂತರ ಮದುವೆ ಮಂಟಪಕ್ಕೆ ತೆರಳಿದ ಘಟನೆಗಳು ಸಹ ನಡೆದಿದೆ.ಶೃಂಗೇರಿ ತಾಲೂಕಿನ ಕೂತಗೋಡು ಗ್ರಾಮದ ಸರ್ಕಾರಿ ಶಾಲೆ ಬೂತ್‌ನಲ್ಲಿ ಸ್ಪಂದನ ಅವರು ಮತದಾನ ಮಾಡಿ ನಂತರ ಕಲ್ಯಾಣ ಮಂಟಪಕ್ಕೆ ತೆರಳಿದರು.ಮೂಡಿಗೆರೆ ತಾಲೂಕಿನ ಕುಂದೂರು ಸಮೀಪದ ತಳವಾರ ಗ್ರಾಮದಲ್ಲಿ ವಧು ಸೌಮ್ಯ ವೋಟ್ ಮಾಡಿದ ನಂತರ ಹಸೆ ಮಣೆ ಏರಿದ್ದಾರೆ.ಗಣ್ಯರ ಮತದಾನ:

ಜಿಲ್ಲೆಯ ಐದು ಮಂದಿ ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ಹಾಗೂ ಉಭಯ ಪಕ್ಷಗಳ ಮುಖಂಡರು ಬೆಳಿಗ್ಗೆ ಯಿಂದಲೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಹಲವೆಡೆ ಬೂತ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ಚಿಕ್ಕ ಕುರುಬರಹಳ್ಳಿಯಲ್ಲಿ ಮತದಾನ ಮಾಡಿದ್ದರೆ, ಶಾಸಕ ಜಿ.ಎಚ್. ಶ್ರೀನಿವಾಸ್ ತರೀಕೆರೆಯ ತುದಿಪೇಟೆ ಸರ್ಕಾರಿ ಮಾದರಿ ಶಾಲೆಯಲ್ಲಿ ವೋಟ್ ಮಾಡಿದರು. ಕಡೂರು ಶಾಸಕ ಕೆ.ಎಸ್. ಆನಂದ್ ಚಿಕ್ಕಂಗಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ದರೆ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಖಾಂಡ್ಯ ಹೋಬಳಿ ಬಾಸಾಪುರದಲ್ಲಿ ಮತದಾನ ಮಾಡಿದರು. ಶಾಸಕಿ ನಯನಾ ಮೋಟಮ್ಮ ಮೂಡಿಗೆರೆಯಲ್ಲಿ ಮತದಾನ ಮಾಡಿದರು.ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಚಿಕ್ಕಮಗಳೂರಿನ ವಿಶ್ವವಿದ್ಯಾಲಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

---ಮಠಾಧೀಶರಿಂದ ಮತದಾನ:

ಕೊಪ್ಪ ತಾಲೂಕಿನ ಹರಿಹರಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮತದಾನ ಮಾಡಿದರು.ಶ್ರೀ ರಂಭಾಪುರೀ ಪೀಠದ ಮಠಾಧೀಶರಾದ ಶ್ರೀ ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬಾಳೆಹೊನ್ನೂರು ಮಠದ ಬೂತ್‌ನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಬೆಳಿಗ್ಗೆ 7 ಕ್ಕೆ ಮೊದಲ ಮತವನ್ನು ಚಲಾವಣೆ ಮಾಡಿದರು.ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಕೊಪ್ಪ ಪಟ್ಟಣದ ಕೆಪಿಎಸ್‌ ಶಾಲೆ ಬೂತ್‌ನಲ್ಲಿ ವೋಟ್‌ ಮಾಡಿದರು.ಪೋಟೋ ಪೈಲ್ ನೇಮ್ 26 ಕೆಸಿಕೆಎಂ 1ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ----- ಬಾಕ್ಸ್-------

ವಿದೇಶದಿಂದ ಬಂದು ವೋಟ್ ಮಾಡಿದ ದಂಪತಿಚಿಕ್ಕಮಗಳೂರು: ವಿದೇಶದಿಂದ ಬಂದು ದಂಪತಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಕಡೂರು ತಾಲೂಕು ಪಂಚೇನಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್ ಮಧು ಮತ್ತು ಅವರ ಪತ್ನಿ ಪಿಳ್ಳೇನಹಳ್ಳಿಯ ತನುಶ್ರೀ ದುಬೈನಲ್ಲಿ ವಾಸವಾಗಿದ್ದು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದೂರದ ದುಬೈನಿಂದ ಬಂದು ಮತ ಚಲಾಯಿಸಿದ್ದಾರೆ.ದುಬೈನಲ್ಲಿ ಮಧು ಸಾಫ್ಟ್‌ ವೇರ್ ಇಂಜಿನಿಯರ್ ವೃತ್ತಿಯಲ್ಲಿದ್ದು ಪತ್ನಿ ತನುಶ್ರೀ ಗೃಹಿಣಿಯಾಗಿದ್ದಾರೆ. ಮಧು ತನ್ನ ಊರಾದ ಪಂಚೇನಹಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪತ್ನಿ ತನುಶ್ರೀ ಪಿಳ್ಳೇನಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ದಂಪತಿ, ನಮ್ಮ ಹಕ್ಕು ಚಲಾಯಿಸಲು ದುಬೈನಿಂದ ಬಂದಿದ್ದೇವೆ. ಯುವ ಸಮುದಾಯವೇ ನಮ್ಮ ದೇಶದ ಶಕ್ತಿಯಾಗಿದ್ದು, ಯುವ ಸಮುದಾಯ ಉತ್ಸಹದಿಂದ ಮತದಾನ ಮಾಡಬೇಕು ಎಂದರು.ಬೇರೆ ದೇಶಗಳಂತೆ ನಮ್ಮ ದೇಶ ಅಭಿವೃದ್ಧಿ ಹೊಂದಬೇಕು. ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇನ್ನಷ್ಟು ಅಭಿವೃದ್ಧಿ ಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು. ದುಬೈಗೆ ತೆರಳಿ ಆರು ವರ್ಷವಾಗಿದೆ. ಕಳೆದ ವಿಧಾನಸಭೆ ಚುನಾವಣೆಗೆ ಬರಬೇಕೆಂಬ ಇಚ್ಛೆ ಇತ್ತು. ಆದರೆ, ಆ ಸಮಯಕ್ಕೆ ರಜೆ ಸಿಗದ ಕಾರಣ ಬರಲು ಸಾಧ್ಯ ವಾಗಿರಲಿಲ್ಲ. ಈ ವರ್ಷ ಮುಂದಿನ ತಿಂಗಳು ರಜೆ ಇತ್ತು. ಮತದಾನದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮುಂಚಿತವಾಗಿ ರಜೆ ಪಡೆದು ಬಂದು ನಮ್ಮ ಹಕ್ಕು ಚಲಾಯಿಸಿದ್ದೇವೆ.ಪೋಟೋ ಫೈಲ್‌ ನೇಮ್ 26 ಕೆಸಿಕೆಎಂ 2ದುಬೈಯಿಂದ ಬಂದು ಮತ ಚಲಾವಣೆ ಮಾಡಿದ ದಂಪತಿ.

ಪೋಟೋ ಫೈಲ್ ನೇಮ್ 26 ಕೆಸಿಕೆಎಂ 3ಚಿಕ್ಕಮಗಳೂರಿನ ಮತಗಟ್ಟೆವೊಂದರಲ್ಲಿ ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತಿರುವ ಮಹಿಳೆಯರು.

----ಪೋಟೋ ಫೈಲ್ ನೇಮ್ 26 ಕೆಸಿಕೆಎಂ 4ಚಿಕ್ಕಮಗಳೂರಿನ ಚಿಕ್ಕ ಕುರುಬರಹಳ್ಳಿಯ ಮತಗಟ್ಟೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಮತದಾನ ಮಾಡಿದರು.