ಲೋಕಸಭಾ ಚುನಾವಣೆ: ಚಿಕ್ಕಮಗಳೂರಿನಲ್ಲಿಯೂ ಕಾಂಗ್ರೆಸ್‌ಗೆ ಹಿನ್ನಡೆ

| Published : Jun 05 2024, 12:30 AM IST

ಸಾರಾಂಶ

ಉಡುಪಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಹಜವಾಗಿಯೇ ಮೇಲುಗೈ ಸಾಧಿಸಿದ್ದರೆ, ಚಿಕ್ಕಮಗಳೂರಿನ 4 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ಗಿಂತ ಬಿಜೆಪಿಗೇ ಹೆಚ್ಚು ಮತಗಳು ಲಭಿಸಿವೆ. ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಸಾಧನೆ ಕಳಪೆಯಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಒಂದು ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದರೆ, ಚಿಕ್ಕಮಗಳೂರಿನ ನಾಲ್ಕೂ ಕ್ಷೇತ್ರಗಲ್ಲಿ ಕಾಂಗ್ರೆಸ್ ಶಾಸಕರೇ ಗೆದ್ದಿದ್ದಾರೆ.

ಈ ಫಲಿತಾಂಶ ಈ ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರುತ್ತದೆ. ಯಾರು ಗೆದ್ದರೂ ಅಲ್ಪ ಮತಗಳಿಂದಲೇ ಎಂದು ಎರಡೂ ಪಕ್ಷಗಳ ನಾಯಕರೇ ಹೇಳುತ್ತಿದ್ದರು. ಆದರೆ ಈ ಲೆಕ್ಕಾಚಾರ ತಪ್ಪಾಗಿದೆ. ಬಿಜೆಪಿ ಭರ್ಜರಿ 2.59 ಲಕ್ಷ ಮತಗಳ ಅಂತರದಿಂದ ಗೆದ್ದಿದೆ.

ಉಡುಪಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಹಜವಾಗಿಯೇ ಮೇಲುಗೈ ಸಾಧಿಸಿದ್ದರೆ, ಚಿಕ್ಕಮಗಳೂರಿನ 4 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ಗಿಂತ ಬಿಜೆಪಿಗೇ ಹೆಚ್ಚು ಮತಗಳು ಲಭಿಸಿವೆ. ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಸಾಧನೆ ಕಳಪೆಯಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಲ್ಲಿ 32,776, ಕಾಪುನಲ್ಲಿ 13,004, ಕಾರ್ಕಳದಲ್ಲಿ 4,602, ಕುಂದಾಪುರದಲ್ಲಿ 41,556 ಮತಗಳು ಸೇರಿ ಒಟ್ಟು 91,938 ಮತಗಳ ಅಂತರದಿಂದ ಬಿಜೆಪಿ ಗೆದ್ದಿತ್ತು.

ಚಿಕ್ಕಮಗಳೂರಿನಲ್ಲಿ 5,926, ಶೃಂಗೇರಿಯಲ್ಲಿ 201, ತರಿಕೆರೆಯಲ್ಲಿ 13,131, ಮೂಡಿಗೆರೆಯಲ್ಲಿ 722 ಮತಗಳು ಸೇರಿ ಒಟ್ಟು 18,980 ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆದ್ದಿತ್ತು.

ಆದರೆ ಈಗ ಲೋಕಸಭಾ ಚುನಾವಣೆಯಲ್ಲಿ ಉಡುಪಿಯಲ್ಲಿ 43,516, ಕಾಪುನಲ್ಲಿ 32,130, ಕಾರ್ಕಳದಲ್ಲಿ 24,331, ಕುಂದಾಪುರದಲ್ಲಿ ಅತೀ ಹೆಚ್ಚು 50,095 ಮತಗಳು ಸೇರಿ ಒಟ್ಟು 1,50,072 ಮತಗಳ ಅಂತರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಚಿಕ್ಕಮಗಳೂರಿನಲ್ಲಿ 23,746, ಶೃಂಗೇರಿಯಲ್ಲಿ 25,238, ತರಿಕೆರೆಯಲ್ಲಿ 20,681, ಮೂಡಿಗೆರೆಯಲ್ಲಿ 20,025 ಮತಗಳು ಸೇರಿ ಒಟ್ಟು 89,690 ಮತಗಳಿಂದ ಬಿಜೆಪಿಯೇ ಮುನ್ನಡೆ ಸಾಧಿಸಿದೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಭಾಗದಲ್ಲಿ ಒಟ್ಟು 18,980 ಮತಗಳ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ಮಾತ್ರ 89,690 ಮತಗಳ ಗಣನೀಯ ಹಿನ್ನಡೆ ಸಾಧಿಸಿದೆ.