ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯವು ಜೂ.೪ರ ಮಂಗಳವಾರ ಮಂಡ್ಯ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು.ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ. ೮೧.೬೭ರಷ್ಟು ಮತದಾನವಾಗಿದ್ದು, ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ಮತ ಎಣಿಕೆಯ ವೀಕ್ಷಕರನ್ನಾಗಿ ಹಿರಿಯ ಐಎಎಸ್ ಅಧಿಕಾರಿ ನೀರಜ್ ಕುಮಾರ್ ರನ್ನು ಚುನಾವಣಾ ಆಯೋಗ ನೇಮಿಸಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
೧೧೨ ಟೇಬಲ್‌ಗಳಲ್ಲಿ ಮತ ಎಣಿಕೆ:ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ತಲಾ ಎರಡು ಕೊಠಡಿಗಳಂತೆ ಒಟ್ಟು ೧೬ ಕೊಠಡಿಗಳಲ್ಲಿ ತಲಾ ೭ ಟೇಬಲ್‌ಗಳಂತೆ ೧೧೨ ಟೇಬಲ್‌ಗಳಲ್ಲಿ ಇವಿಎಂ ಮತ ಎಣಿಕೆ ಕಾರ್ಯ ನಡೆಯಲಿದೆ. ಒಂದು ರೌಂಡ್‌ಗೆ ೧೪ ಇವಿಎಂ ಯಂತ್ರಗಳ ಮತ ಎಣಿಕೆ ಮಾಡಲಾಗುವುದು. ಎರಡು ಕೊಠಡಿಗಳಲ್ಲಿ ನೆಲಮಹಡಿಯ ೧೦೨ ಮತ್ತು ೧೦೭ರಲ್ಲಿ ಅಂಚೆ ಮತಪತ್ರ ಮತ್ತು ಇಟಿಪಿಬಿಎಸ್ ಮತಪತ್ರಗಳ ಮತ ಎಣಿಕೆ ಕಾರ್ಯವು ೧೧ ಟೇಬಲ್‌ಗಳಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಅಂಚೆ ಮತಪತ್ರ ಮತ್ತು ಇಟಿಪಿಬಿಎಸ್ ಮತಪತ್ರಗಳ ಎಣಿಕೆ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆಯನ್ನು ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ಅವರು ನಿರ್ವಹಿಸಲಿದ್ದಾರೆ ಎಂದರು.೭,೪೬೫ ಅಂಚೆ ಮತ್ತು ಇಟಿಪಿಬಿಎಸ್ ಮತ ಚಲಾವಣೆ:
ಜಿಲ್ಲೆಯಲ್ಲಿ ೮೫ ವರ್ಷ ಮೇಲ್ಪಟ್ಟ ೨೪೩೯, ವಿಶೇಷಚೇತನರು-೮೭೧, ತುರ್ತು ಸೇವಾ ಕಾರ್ಯ ಮತದಾರರು -೭೯೪, ಅಂಡರ್ ಪ್ರಿವೆಂಟಿವ್-೨, ವೋವ್ಡ್-೨೮೧೫, ಸೇವಾ ಮತದಾರರು -೫೪೪ ಸೇರಿ ಒಟ್ಟು ೭೪೬೫ ಮಂದಿ ಅಂಚೆ ಮತ್ತು ಇಟಿಪಿಬಿಎಸ್ ಮೂಲಕ ಮತ ಚಲಾಯಿಸಿದ್ದಾರೆ. ಒಂದು ಟೇಬಲ್‌ಗೆ ೬೫೦ ರಿಂದ ೬೮೦ ಮತ ಪತ್ರಗಳನ್ನು ನೀಡಲಾಗುವುದು. ಜೂ.೪ರ ಬೆಳಗ್ಗೆ ೬.೩೦ಕ್ಕೆ ಮೊದಲು ಅಂಚೆ ಮತಪತ್ರದ ಕೊಠಡಿಯನ್ನು ತೆರೆದು ಎಣಿಕೆ ಮಾಡಲಾಗುವುದು. ನಂತರ ಇತರೆ ಕೊಠಡಿಗಳನ್ನು ತೆರೆದು ೮ ಗಂಟೆಯಿಂದ ಇವಿಎಂ ಮತಯಂತ್ರದ ಮತಗಳನ್ನು ಎಣಿಕೆ ಮಾಡಲಾಗುವುದು ಎಂದು ವಿವರಿಸಿದರು.ವಿಧಾನಸಭಾ ಕ್ಷೇತ್ರವಾರು ಬಣ್ಣಗಳ ಪಾಸ್:
ಪ್ರತಿ ಅಭ್ಯರ್ಥಿಯ ಪರವಾಗಿ ಎಣಿಕೆ ಏಜೆಂಟರಾಗಿ ಕಾರ್ಯನಿರ್ವಹಿಸುವಂತಹವರಿಗೆ ಬಣ್ಣಗಳ ಪಾಸ್‌ಗಳನ್ನು ನೀಡಲಾಗುವುದು. ಭದ್ರತಾ ಕೊಠಡಿಯಿಂದ ಎಣಿಕೆ ಟೇಬಲ್‌ಗೆ ಕಂಟ್ರೋಲ್ ಯುನಿಟ್‌ಗಳನ್ನು ಸಾಗಾಣಿಕೆ ಮಾಡುವಂತಹ ಗ್ರಾಮ ಲೆಕ್ಕಾಧಿಕಾರಿಗಳಿಗೂ ಸಹ ಬಣ್ಣಗಳ ಟೀ-ಶರ್ಟ್ ನೀಡಲಾಗುವುದು ಎಂದರು.ಪ್ರತಿ ಕೊಠಡಿಗೂ ಇಂಟರ್‌ನೆಟ್ ಸಂಪರ್ಕ:
೮ ವಿಧಾನಸಭಾ ಕ್ಷೇತ್ರದ ಕೊಠಡಿಗಳಿಗೆ ತಲಾ ಒಬ್ಬರಂತೆ ಜಿಲ್ಲಾ ಸಮಾಲೋಚಕರು, ತಾಲೂಕು ಕಚೇರಿಯ ಐಟಿ ಸಮಾಲೋಕರು, ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸಲಾಗಿದೆ. ಪ್ರತಿ ಎಣಿಕೆ ಕೊಠಡಿಯಲ್ಲಿಯೂ ಬಿಎಸ್‌ಎನ್‌ಎಲ್ ಹಾಗೂ ಜಿಯೋ ಕಂಪನಿಯ ಇಂಟರ್‌ನೆಟ್ ಸೌಲಭ್ಯ, ಮೂರು ಕಂಪ್ಯೂಟರ್ ಮತ್ತು ಒಂದು ಪ್ರಿಂಟರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ನಿರಂತರ ಸಮರ್ಪಕ ವಿದ್ಯುತ್ ಸಂಪರ್ಕ ಹಾಗೂ ೧೨೩ ವೆಬ್ ಕ್ಯಾಸ್ಟಿಂಗ್ ಕ್ಯಾಮೆರಾ ಸೇರಿದಂತೆ ಒಂದೊಂದು ಕೊಠಡಿಗೂ ೩೬೦ ಡಿಗ್ರಿ ತಿರುಗುವ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲ ಹಾಜರಿದ್ದರು.
ನಿಷೇಧಾಜ್ಞೆ ಜಾರಿ:ಮತ ಎಣಿಕೆ ಪ್ರಕ್ರಿಯೆಯು ಶಾಂತಿಯುತವಾಗಿ ನಡೆಸುವ ಸಲುವಾಗಿ ಜೂ. ೪ ಮತ್ತು ೫ರಂದು ಒಣದಿನ ಎಂದು ಘೋಷಿಸಿ, ಅಪರಾಧ ದಂಡ ಸಂಹಿತೆ ೧೯೭೩ರ ಕಲಂ ೧೪೪ರಂತೆ ಜೂ.೪ರ ಬೆಳಗ್ಗೆ ೬ ರಿಂದ ಜೂ.೫ರ ಬೆಳಗ್ಗೆ ೬ರ ವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಈ ಅವಧಿಯಲ್ಲಿ ೫ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಮತ ಎಣಿಕೆ ಕೇಂದ್ರದ ೧೦೦ ಮೀ. ಅಂತರದಲ್ಲಿ ಎಲ್ಲ ರೀತಿಯ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮೊಬೈಲ್, ಕಾರ್ಡ್‌ಲೇಸ್ ಫೋನ್, ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ.
ಮತ ಎಣಿಕೆ ಸುತ್ತ ಬಂದೋಬಸ್ತ್:ಜೂ.೪ರ ಮತ ಎಣಿಕೆ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಎಎಸ್ಪಿ-೨, ಡಿಎಸ್‌ಪಿ-೩, ಪಿಐ-೧೩, ಪಿಎಸ್‌ಐ-೩೨, ಎಎಸ್‌ಐ-೫೧, ಎಚ್‌ಸಿಪಿಸಿ-೩೩೭, ಡಬ್ಲ್ಯೂಪಿಸಿ-೩೦, ಡಿಎಆರ್-೪೦, ಕೆಎಸ್‌ಆರ್‌ಪಿ-೩೦ ಒಟ್ಟು ೫೩೯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತಾ ಕೇಂದ್ರದ ಒಳಾಂಗಣದಲ್ಲಿನ ಭದ್ರತಾ ಕೊಠಡಿಗಳನ್ನು ದಿನದ ೨೪ ಗಂಟೆಯ ಪಹರೆಗಾಗಿ ಒಂದು ತುಕಡಿ (೩೦ ಮಂದಿ) ಸಿಎಪಿಎಫ್ ತಂಡವನ್ನು ಕರ್ನಾಟಕ ಚುನಾವಣಾಧಿಕಾರಿಗಳು ನಿಯೋಜಿಸಿದ್ದಾರೆ.
- ಎನ್.ಯತೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕ-----------------
ನಾಳೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಮಂಡ್ಯ: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯು ಜೂ.೩೪ ಸೋಮವಾರ ಬೆಳಗ್ಗೆ ೮ ರಿಂದ ಸಂಜೆ ೪ ಗಂಟೆಯವರೆಗೆ ನಡೆಯಲಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ ಜಿಲ್ಲೆಗಳು ದಕ್ಷಿಣ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಬರಲಿದ್ದು, ಚುನಾವಣಾ ವೀಕ್ಷಕರನ್ನಾಗಿ ಅಬಕಾರಿ ಆಯುಕ್ತ ಡಾ. ಜೆ.ರವಿಶಂಕರ್ ರನ್ನು ಚುನಾವಣಾ ಆಯೋಗ ನೇಮಿಸಿದೆ ಎಂದು ಹೇಳಿದರು.೫,೪೦೩ ಮತದಾರರು:
ಜಿಲ್ಲೆಯ ಕೆ.ಆರ್.ಪೇಟೆ- ೪೬೪, ನಾಗಮಂಗಲ - ೪೪೩, ಪಾಂಡವಪುರ - ೪೪೬, ಮಂಡ್ಯ-೧೯ರಲ್ಲಿ ೬೩೦, ಮಂಡ್ಯ-೧೯ಎ ರಲ್ಲಿ - ೫೫೪, ಮಂಡ್ಯ-೨೦ರಲ್ಲಿ ೮೦೧, ಮದ್ದೂರು - ೯೬೭, ಶ್ರೀರಂಗಪಟ್ಟಣ - ೪೩೧, ಮಳವಳ್ಳಿ - ೬೬೭. ಒಟ್ಟಾರೆ ೫,೪೦೩ ಶಿಕ್ಷಕ ಮತದಾರರಿದ್ದಾರೆ ಎಂದರು.ಮಾದರಿ ನೀತಿ ಸಂಹಿತೆ:
ಮಾದರಿ ನೀತಿ ಸಂಹಿತೆಯ ಅನುಷ್ಠಾನಗೊಳಿಸುವ ಸಲುವಾಗಿ ಮಂಡ್ಯ ಜಿಲ್ಲಾ ವ್ಯಾಪ್ತಿಗೆ ಒಳಗೊಂಡಂತೆ ಒಂದು ಎಂಸಿಸಿ ವಿಚಕ್ಷಣಾ ತಂಡವನ್ನು ರಚಿಸಲಾಗಿದೆ. ಈವರೆಗೂ ಯಾವುದೇ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳು ಮತ್ತು ನಗದು ಹಾಗೂ ಇತರೆ ಪರಿಕರಗಳು ಜಪ್ತಿಯಾಗಿಲ್ಲ ಎಂದು ಹೇಳಿದರು.ಮತದಾರರಿಗೆ ಈವರೆಗೆ ೩೨೯೮ ಮತದಾರರ ಲಿಸ್ಟ್ ಹಂಚಿದ್ದು, ಇನ್ನೂ ೨೧೦೫ ಮಂದಿಗೆ ಲಿಸ್ಟ್ ಹಂಚಿಕೆ ಮಾಡಬೇಕಾಗಿದೆ ಎಂದರು.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಗಳ ವಿವರ:ಕೆ.ಆರ್.ಪೇಟೆ- ತಾಲೂಕು ಕಚೇರಿ, ನಾಗಮಂಗಲ - ತಾಲೂಕು ಕಚೇರಿ, ಪಾಂಡವಪುರ - ತಾಲೂಕು ಕಚೇರಿ, ಮಂಡ್ಯ - ತಾಲೂಕು ಕಚೇರಿ, ಮದ್ದೂರು - ತಾಲೂಕು ಕಚೇರಿ, ಶ್ರೀರಂಗಪಟ್ಟಣ - ತಾಲೂಕು ಕಚೇರಿ, ರೂಂ.ನಂ.೬, ಮಳವಳ್ಳಿ - ತಾಲೂಕು ಕಚೇರಿಯ ವಿ.ಸಿ. ಹಾಲ್.
ಮತದಾನ ವಿಧಾನ:ಕರ್ನಾಟಕದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪ್ರಾಶಸ್ತ್ಯ ಮತದಾನದ ವಿಧಾನವಿದ್ದು, ಚುನಾವಣಾ ಅಧಿಕಾರಿಗಳು ಒದಗಿಸುವ ನೇರಳೆ ಬಣ್ಣದ ಪೆನ್ ನಿಂದಲೇ ಮತದಾರರು ಮತದಾನವನ್ನು ಚಲಾಯಿಸತಕ್ಕದ್ದು. ಚುನಾವಣೆಯಲ್ಲಿ ಇವಿಎಂ ಗಳನ್ನು ಬಳಸಲಾಗುವುದಿಲ್ಲ. ಬದಲಿಗೆ ಮತಪತ್ರವನ್ನು ಬಳಸಲಾಗುತ್ತಿದ್ದು ಮತಪೆಟ್ಟಿಗೆಗಳನ್ನು ಸಹ ಬಳಸಿಕೊಳ್ಳಲಾಗುತ್ತಿದೆ ಎಂದರು.
------------