ಲೋಕಸಭಾ ಚುನಾವಣೆ: ೨೮ ಕ್ಷೇತ್ರಗಳಲ್ಲಿ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಗಳು

| Published : Dec 31 2023, 01:31 AM IST

ಲೋಕಸಭಾ ಚುನಾವಣೆ: ೨೮ ಕ್ಷೇತ್ರಗಳಲ್ಲಿ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಕೆಆರ್ ಎಸ್ ಪಕ್ಷದಿಂದ ಕರ್ನಾಟಕದ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದು, ಜನವರಿ 6 ಮತ್ತು 7ರಂದು ಬೆಂಗಳೂರಿನಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಯಲಿದೆ.

ಹೊಸಪೇಟೆ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಹಿನ್ನೆಲೆಯಲ್ಲಿ ಜ. ೬ ಮತ್ತು ೭ರಂದು ಪಕ್ಷದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ. ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಸ್ಪರ್ಧೆ ಮಾಡ ಬಯಸುವ ಆಸಕ್ತರು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಸುಭಾನ್ ಹುಗಲೂರ್ ಹಾಗೂ ಪ್ರಧಾನ ಕಾರ್ಯದರ್ಶಿ ಚನ್ನವೀರ ಚಿತ್ತಾರ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ೨೮ ಕ್ಷೇತ್ರಗಳಲ್ಲಿಯೂ ಕೆಆರ್‌ಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಸ್ಪರ್ಧೆ ಬಯಸುವ ಆಸಕ್ತರು ಜ. ೬ ಮತ್ತು ೭ರಂದು ಪಕ್ಷದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಈ ಕುರಿತು ಕಳೆದ ವಾರ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆಸಕ್ತರು ಸಂದರ್ಶನಕ್ಕೆ ಹಾಜರಾಗಬಹುದಾಗಿದ್ದು, ಪಕ್ಷದ ಹಾಲಿ ಸದಸ್ಯರು ೫ ಸಾವಿರ ಮತ್ತು ಸದಸ್ಯರಲ್ಲದವರು ಹೊಸದಾಗಿ ಸಂದರ್ಶನಕ್ಕೆ ಹಾಜರಾಗಲು ೧೦ ಸಾವಿರ ಸಂದರ್ಶನ ಶುಲ್ಕ ಪಾವತಿಸಬೇಕು. ಸಂದರ್ಶನದ ಬಳಿಕ ರಾಜ್ಯ ಸಮಿತಿಯು ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಘೋಷಣೆ ಮಾಡಲಿದೆ ಎಂದು ತಿಳಿಸಿದರು.

ಕೆಆರ್‌ಎಸ್ ಪಕ್ಷ ಆರಂಭದಿಂದಲೂ ಎಲ್ಲ ಚುನಾವಣೆಗಳಲ್ಲಿ ಸ್ಪರ್ಧಿಸಿ, ನಿರಂತರವಾಗಿ ಜನರನ್ನು ತಲುಪುವ ಕೆಲಸ ಮಾಡುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ೧೯೫ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ನಿರಂತರವಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ವ್ಯವಸ್ಥೆಯಲ್ಲಿನ ಅಕ್ರಮ, ಅನ್ಯಾಯ, ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾ ನಾಡಿನ ನೆಲ, ಜಲ, ಭಾಷೆಯ ಸಂರಕ್ಷಣೆಗಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.ಕೂಡ್ಲಿಗಿ ತಾಲೂಕು ಉಪಾಧ್ಯಕ್ಷ ಜೆ. ಶರಣಪ್ಪ, ರೈತ ಘಟಕದ ಜಿಲ್ಲಾಧ್ಯಕ್ಷ ಚಲವಾದಿ ಆನಂದ್ ಇದ್ದರು.