ಸಾರಾಂಶ
ಗದಗ: ಲೋಕಸಭಾ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆ ದಿಸೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏ. 12ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ. ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾಮಪತ್ರವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳಾದ 10-ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾಧಿಕಾರಿ ಹಾಗೂ 3-ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲಾಧಿಕಾರಿ ಅವರು ತಮ್ಮ ಕಾರ್ಯಾಲಯದಲ್ಲಿ ಸ್ವೀಕರಿಸುವರು.ನಾಮಪತ್ರ ಸಲ್ಲಿಸಲು ಏ. 19 ಕೊನೆಯ ದಿನವಾಗಿದೆ. ಏ. 20ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಏ. 22ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 7ರಂದು ಮತದಾನ ನಡೆಯಲಿದ್ದು, ಜೂ. 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.ನೋಡೆಲ್ ಅಧಿಕಾರಿ:
ಜಿಲ್ಲೆಯಲ್ಲಿ ಯಾವುದೇ ರೀತಿ ದೂರುಗಳ ನಿರ್ವಹಣೆಗಾಗಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸೈಯದ್ ಜೋಹೈಬುಲ್ಲಾ (ಮೊ.ನಂ.: 8277944217) ಅವರನ್ನು ನೋಡೆಲ್ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ. ಇವರ ಅಧೀನದಲ್ಲಿ ಕಂಪ್ಲೇಂಟ್ ಮಾನಿಟರಿಂಗ್ ಟೀಮ್, ಸಿವಿಜಿಲ್ ತಂಡ, 1950 ಕಾಲ್ ಸೆಂಟರ್ ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಕಾರ್ಯನಿರ್ವಹಿಸುತ್ತವೆ.ಭಾರತ ಚುನಾವಣಾ ಆಯೋಗವು ಸಿ-ವಿಜಿಲ್ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ್ದು, ಈ ಅಪ್ಲಿಕೇಷನ್‍ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‍ಲೋಡ್ ಮಾಡಿಕೊಂಡು, ಚುನಾವಣೆಯಲ್ಲಿ ಮತದಾರರಿಗೆ ಅಕ್ರಮವಾಗಿ ಹಣ, ಗೃಹ ಬಳಕೆ ಸಾಮಗ್ರಿಗಳು, ಮದ್ಯ ಹಂಚಿಕೆ ಮಾಡುವ ಬಗ್ಗೆ ಹಾಗೂ ಯಾವುದೇ ರೀತಿಯ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಅಪ್ಲಿಕೇಷನ್‍ನಲ್ಲಿ ವಿಡಿಯೋ ಮತ್ತು ಪೋಟೋಗಳ ಮೂಲಕ ಮಾಹಿತಿ ನೀಡಬಹುದಾಗಿದೆ.
ಚುನಾವಣಾ ಆಯೋಗದ ಸೂಚನೆಯಂತೆ ಪ್ರತಿ ಮತಗಟ್ಟೆಗಳಿಗೆ ಒಬ್ಬರು ಅಧ್ಯಕ್ಷಾಧಿಕಾರಿ ಮತ್ತು ಮೂವರು ಮತಗಟ್ಟೆ ಅಧಿಕಾರಿಗಳು ಹಾಗೂ ಮೀಸಲು ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಈ ಅಧಿಕಾರಿಗಳಿಗೆ ಈಗಾಗಲೇ ಏ. 10ರಂದು ಮೊದಲನೇ ಹಂತದ ತರಬೇತಿ ನೀಡಲಾಗಿರುತ್ತದೆ. ಅದೇ ರೀತಿ ಕೇಂದ್ರ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಆಯ್ದ ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನಾಗಿ ನೇಮಕ ಮಾಡಲಾಗುತ್ತದೆ.ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ಇಡಲು ಸೆಕ್ಟರ್ ಅಧಿಕಾರಿಗಳು ಪ್ರೈಯಿಂಗ್ ಸ್ಕ್ವಾಡ್, ಲೆಕ್ಕ ವೀಕ್ಷಕರ ತಂಡ, ವಿಡಿಯೋ ವ್ಯೂವಿಂಗ್ ತಂಡ, ವಿಡಿಯೋ ಪರಿಶೀಲನಾ ತಂಡ, ಸಹಾಯಕ ವೆಚ್ಚ ವೀಕ್ಷಕರ ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಕೋವಿಡ್ ಶಂಕಿತ, ದೃಢಪಟ್ಟ ಮತದಾರರ ಪೈಕಿ ಮನೆಯ ಮೂಲಕ ಮತದಾನ ಮಾಡಲು ಆಯ್ಕೆ ಮಾಡಿದ ಮತದಾರರಿಗೆ ಏ. 26ರಿಂದ ಏ. 28ರ ವರೆಗೆ ಈ ಮನೆಗೆ ತೆರಳಿ ಮತದಾನ ಕಾರ್ಯ ಜರುಗಿಸಲಾಗುವುದು ಹಾಗೂ ಅಗತ್ಯ ಸೇವೆಗಳ ಇಲಾಖೆಗಳ ನಿರತ ಅಧಿಕಾರಿ ಸಿಬ್ಬಂದಿ ಪೈಕಿ ವಿಶೇಷ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಆಯ್ಕೆ ಮಾಡಿಕೊಂಡ ಮತದಾರರಿಗೆ ಮೇ 1ರಿಂದ ಮೇ 3ರ ವರೆಗೆ ಅಂಚೆ ಮತದಾನ ಸೌಲಭ್ಯ ಕೇಂದ್ರದಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಭಾರತ ಚುನಾವಣಾ ಆಯೋಗದ ವೆಬ್‍ಸೈಟ್ www.eci.nic.in ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್‍ಸೈಟ್ www.ceokarnataka.kar.nic.in ಹಾಗೂ ಜಿಲ್ಲಾಧಿಕಾರಿ ಕಚೇರಿಯ ವೆಬ್‍ಸೈಟ್ www.gadag.nic.in ನಲ್ಲಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.