ಲೋಕಸಭೆ ಚುನಾವಣೆ: ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ

| Published : Feb 07 2024, 01:47 AM IST

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಅನುಕೂಲವಾಗುವಂತೆ ಈಗಾಗಲೇ ರಚಿಸಲಾಗಿರುವ ವಿವಿಧ ತಂಡಗಳಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು, ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು.

ಕಾರವಾರ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಅನುಕೂಲವಾಗುವಂತೆ ಈಗಾಗಲೇ ರಚಿಸಲಾಗಿರುವ ವಿವಿಧ ತಂಡಗಳಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು, ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ವಿವಿಧ ತಂಡಗಳ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಮಂಗಳವಾರ ಆಯೋಜಿಸಿದ್ದ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.

ಲೋಕಸಭಾ ಚುನಾವಣೆ-2024ರ ಸಂಬಂಧಿಸಿಂತೆ ಚುನಾವಣಾ ಕರ್ತವ್ಯ ನಿರ್ವಹಿಸಲು ಈಗಾಗಲೇ ಸಹಾಯಕ ಚುನಾವಣಾಧಿಕಾರಿಗಳು, ಮಾದರಿ ನೀತಿ ಸಂಹಿತೆ, ಸೆಕ್ಟರ್ ಅಧಿಕಾರಿಗಳ ತಂಡ, ಪ್ಲೈಯಿಂಗ್ ಸ್ವ್ಕಾಡ್‌ ತಂಡ, ವೀಡಿಯೋ ವೀಕ್ಷಣಾ ತಂಡ, ಎಂಸಿಎಂಸಿ ತಂಡ, ಲೆಕ್ಕಪರಿಶೀಲನಾ ತಂಡ, ದೂರು ನಿರ್ವಹಣಾ ತಂಡ, ನಗದು ವಶ ಪರಿಶೀಲಾ ತಂಡ, ಸಹಾಯಕ ವೆಚ್ಚ ವೀಕ್ಷಕ ತಂಡ ಸೇರಿದಂತೆ ಹಲವು ತಂಡ ರಚಿಸಲಾಗಿದೆ. ಈ ತಂಡಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು, ಅದರಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಪ್ಲೈಯಿಂಗ್ ಸ್ವ್ಕಾಡ್‌ ತಂಡದ ಸದಸ್ಯರು ಸದಾ ಜಾಗರೂಕವಾಗಿದ್ದು, ದೂರು ಬಂದ ಕೂಡಲೇ ಸ್ಥಳಗಳಿಗೆ ತೆರಳಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸ್ಥಳದ ಸಂಪೂರ್ಣ ಚಿತ್ರಿಕರಣ ಸೇರಿದಂತೆ ಚುನಾವಣಾ ಆಯೋಗ ಸೂಚಿಸುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಚುನಾವಣೆಗೆ ಪ್ರತಿ ಅಭ್ಯರ್ಥಿಗಳಿಗೆ ₹ 95 ಲಕ್ಷ ವೆಚ್ಚದ ಮಿತಿಯಿದ್ದು, ಈ ಕುರಿತಂತೆ ಅಭ್ಯರ್ಥಿಯ ಖಚ್ಚು-ವೆಚ್ಚದ ವಿವರ, ಈಗಾಗಲೇ ಚುನಾವಣಾ ಆಯೋಗ ನೀಡಿರುವ ಪ್ರತಿಯೊಂದು ವಸ್ತು ಮತ್ತು ಸೇವೆಗಳ ಕುರಿತು ನಿಗದಿಪಡಿಸಿರುವ ವೆಚ್ಚದ ವಿವರಗಳೊಂದಿಗೆ ತಾಳೆ ಮಾಡಿ, ನಿಯಮಿತವಾಗಿ ಪರಿಶೀಲಿಸಬೇಕೆಂದು ಲೆಕ್ಕ ಪರಿಶೀಲನಾ ತಂಡದ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚಿಸಿದರು.ಎಂಸಿಎಂಸಿ ತಂಡದ ಸದಸ್ಯರು ಪತ್ರಿಕೆಗಳಲ್ಲಿ ಪ್ರಕಟವಾಗುವ ಪೇಯ್ಡ್ ನ್ಯೂಸ್ ಮೇಲೆ ನಿಗಾ ಇರಿಸಬೇಕು. ಯಾವುದೇ ಅಭ್ಯರ್ಥಿಗಳು ಸೂಕ್ತ ಅನುಮತಿ ಪಡೆಯದೇ ಪತ್ರಿಕೆ, ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಜಾಹೀರಾತು ಪ್ರಕಟಿಸಲು ಅವಕಾಶವಿಲ್ಲ. ಇಂತಹ ಜಾಹೀರಾತುಗಳ ಬಗ್ಗೆ ನಿರಂತರವಾಗಿ ಪರಿಶೀಲಿಸಬೇಕು ಎಂದರು.ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗಾಗಿ ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯ ಪ್ರತಿಯೊಬ್ಬ ಮತದಾರರ ಮನೆ ಸಂಪರ್ಕಿಸಿ ಮತದಾರರ ಪಟ್ಟಿ ಪರಿಶೀಲಿಸಿ, ಸಂಕ್ಷಿಪ್ತ ಪಟ್ಟಿ ಪ್ರಕಟಿಸಲಾಗಿದೆ. ಅದನ್ನು ರಾಜಕೀಯ ಪಕ್ಷಗಳಿಗೆ ವಿತರಿಸಲಾಗಿದೆ. ಚುನಾವಣಾ ವೇಳೆ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಂದರೆಗಳಾಗದಂತೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಮಾಸ್ಟರ್ ಟ್ರೈನರ್ ದಿನೇಶ ಶೇಟ್ ತರಬೇತಿ ನೀಡಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಸಹಾಯಕ ಚುನಾವಣಾಧಿಕಾರಿ ಅಜ್ಜಪ್ಪ ಸೊಲಗದ, ಸ್ಟೆಲ್ಲಾ ವರ್ಗಿಸ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಆನಂದ್, ಜಿಲ್ಲಾ ತರಬೇತಿ ನೋಡೆಲ್ ಅಧಿಕಾರಿ ಸೋಮಶೇಖರ ಮೇಸ್ತ ಇದ್ದರು.